ಕಲಬುರಗಿ: ವಿವಿಧ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗುವುದನ್ನೇ ದಂಧೆ ಮಾಡಿಕೊಂಡಿರುವ ದೊಡ್ಡ ಪಡೆಯೇ ಇರುವುದರಿಂದ ಹಾಗೂ ಪರೀಕ್ಷೆ ಅಕ್ರಮ ಹಗರಣದಲ್ಲಿ ಅಧಿಕಾರಿಗಳು, ಸಚಿವರು, ಶಾಸಕರು ಹಾಗೂ ಮುಖಂಡರು ಪಾಲ್ಗೊಂಡು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡಿದ್ದರಿಂದ ಕಳೆದ ಐದು ವರ್ಷಗಳಲ್ಲಿ ನಡೆದಿರುವ ವಿವಿಧ ಹುದ್ದೆಗಳ ನೇಮಕಾತಿಯ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತನಿಖೆಗೆ ಒಳಪಡಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ಪರೀಕ್ಷೆಯಲ್ಲಿ ಅಕ್ರಮ ಎಸಗುವುದನ್ನೇ ದಂಧೆ ಮಾಡಿಕೊಂಡಿರುವುದನ್ನು ಬೇರು ಸಮೇತ ಕಿತ್ತು ಹಾಕಲು ನ್ಯಾಯಾಂಗ ತನಿಖೆಯಿಂದ ಮಾತ್ರ ಸಾಧ್ಯ. ಹೀಗಾಗಿ ಸರ್ಕಾರ ಕೂಡಲೇ ಐದು ವರ್ಷಗಳಲ್ಲಿನ ನೇಮಕಾತಿಯ ಎಲ್ಲ ಪರೀಕ್ಷೆಗಳನ್ನು ತನಿಖೆಗೆ ಒಳಪಡಿಸಬೇಕೆಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಮುಖ್ಯಮಂತ್ರಿಗಳ ಗೊಂದಲ ಹೇಳಿಕೆ, ಗೃಹ ಸಚಿವರ ನಿಗೂಢ ನಡೆಯಿಂದ ಅದರಲ್ಲೂ ಬಿಜೆಪಿ ನಾಯಕರ ರಕ್ಷಣೆಯಿಂದ ನ್ಯಾಯ ಸಿಗಲು ಅಸಾಧ್ಯ ಎನ್ನುವಂತಾಗಿದೆ. ತಮ್ಮ ಬಳಿ ಇದ್ದ ಹಾಗೂ ಪತ್ರಿಕೆಯಲ್ಲಿ ಬಂದ ಮಾಹಿತಿಯನ್ನು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ನೋಟಿಸ್ ನೀಡಿರುವುದು ಹಾಸ್ಯಾಸ್ಪದವಾಗಿದೆ. ಆದರೆ ದಿವ್ಯಾ ಹಾಗರಗಿ ಅಧ್ಯಕ್ಷತೆಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಸಂಸ್ಥೆಗೆ ಪರೀಕ್ಷಾ ಕೇಂದ್ರ ಮಂಜೂರಾತಿ ನೀಡುವಂತೆ ಶಿಫಾರಸು ಪತ್ರ ನೀಡಿರುವ ಸಂಸದ ಡಾ| ಉಮೇಶ ಜಾಧವ ಅವರಿಗೆ ಯಾವುದೇ ವಿಚಾರಣೆ ಇಲ್ಲದಿರುವುದು, ಪ್ರಮುಖವಾಗಿ ದಿವ್ಯಾ ಹಾಗರಗಿ ಅವರನ್ನು ಬಂಧಿಸದೇ ಇರುವುದು ಪಕ್ಷಪಾತಿಗೆ ಹಿಡಿದ ಕನ್ನಡಿಯಾಗಿದೆ. ಹೀಗಾಗಿ ನ್ಯಾಯಾಂಗ ತನಿಖೆಯೇ ಸೂಕ್ತವಾಗಿದೆ ಎಂದು ಮಾಜಿ ಸಚಿವರು ಪ್ರತಿಪಾದಿಸಿದರು.
ಸಿಐಡಿಯಿಂದ ಸೂಕ್ತ ತನಿಖೆಯಾಗದೇ ಇದ್ದಲ್ಲಿ ಕಾಂಗ್ರೆಸ್ ಪಕ್ಷದಿಂದ ನ್ಯಾಯಾಲಯದ ಮೊರೆ ಹೋಗುವ ಕುರಿತಾಗಿ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಸಂಧಾನಕ್ಕೆ ನಾಚಿಕೆ ಆಗುವುದಿಲ್ಲವೇ?
ಕಾಮಗಾರಿಗಳಲ್ಲಿ ಶೇ. 40ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರು ನೀಡಿರುವ ಗುತ್ತಿಗೆದಾರರ ಸಂಘದವರೊಂದಿಗೆ ಮುಖ್ಯಮಂತ್ರಿಗಳು ಸಂಧಾನ ನಡೆಸಿರುವುದು ನಾಚಿಗೇಡಿತನ ಸಂಗತಿಯಾಗಿದೆ. ದೂರು ನೀಡಿರುವವರಿಂದ ಪೂರಕ ದಾಖಲೆಗಳನ್ನು ಪಡೆದು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಸಂಧಾನ ನಡೆಸಿರುವುದು ಸರ್ಕಾರದ ನೈತಿಕತೆ ದಿವಾಳಿ ಆಗಿರುವುದು ಎತ್ತಿ ತೋರಿಸುತ್ತದೆ ಎಂದು ಮಾಜಿ ಸಚಿವರು ವಾಗ್ಧಾಳಿ ನಡೆಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣು ಮೋದಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಮುಂತಾದವರಿದ್ದರು.