Advertisement

ಎಲ್‌ಇಟಿ ಉಗ್ರ ಸಲೀಂ ಸುಪಾರಿ ಕಿಲ್ಲರ್‌ 

06:00 AM Oct 24, 2018 | |

ಬೆಂಗಳೂರು: ಇಲ್ಲಿನ ಮಡಿವಾಳ ಬಸ್‌ ನಿಲ್ದಾಣ ಸೇರಿ 9 ಕಡೆ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಎಲ್‌ಎಲ್‌ಇಟಿ ಶಂಕಿತ ಉಗ್ರ ಪಿ. ಎ. ಸಲೀಂ, ಸುಪಾರಿ ಕಿಲ್ಲರ್‌ ಕೂಡ ಆಗಿದ್ದ ಎಂಬ ವಿಚಾರವೂ ಸಿಸಿಬಿ ತನಿಖೆಯಲ್ಲಿ ಹೊರಬಿದ್ದಿದೆ. ಸರಣಿ ಸ್ಫೋಟ ಪ್ರಕರಣದಲ್ಲಿ 10 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಸಲೀಂನನ್ನು ಅ.10ರಂದು ಬಂಧಿಸಿದ್ದ ಸಿಸಿಬಿ ಅಧಿಕಾರಿಗಳು, ಹನ್ನೆರಡು ದಿನಗಳ
ಕಾಲ ತೀವ್ರ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಸ್ಫೋಟ ಪ್ರಕರಣದ ಬಳಿಕ 2012ರಲ್ಲಿ ಕೇರಳದ ಪರಂಬಾಯ್‌ನಲ್ಲಿ 25 ಲಕ್ಷ ರೂ. ಸುಪಾರಿ ಪಡೆದು ಸ್ನೇಹಿತ ಯುವಕನೊಬ್ಬನನ್ನು ಹತ್ಯೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಅಲ್ಲದೆ, ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳ ಸೋಗಿನಲ್ಲಿ ತಂಡ ಕಟ್ಟಿಕೊಂಡು ಖಾಸಗಿ ಕಂಪನಿಯೊಂದರ ಸಿಬ್ಬಂದಿಯನ್ನು ಬೆದರಿಸಿ ದರೋಡೆ ಕೂಡ ಮಾಡಿದ್ದಾನೆ ಎಂಬ ಸಂಗತಿಯನ್ನೂ ಪೊಲೀಸರು ಬಯಲಿಗೆಳೆದಿದ್ದಾರೆ.

Advertisement

2008ರಲ್ಲಿ ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟದ ಬಳಿಕ ದೇಶದ ಹಲವು ಭಾಗಗಳಲ್ಲಿ ತಲೆಮರೆಸಿಕೊಂಡು, ಓಡಾಡಿಕೊಂಡಿದ್ದ ಸಲೀಂ, 2011ರ ಆಸುಪಾಸಿನಲ್ಲಿ ಪುನ: ತನ್ನ ಸ್ವಂತ ಊರಾದ ಪರಂಬಾಯ್‌ಗೆ ತೆರಳುತ್ತಾನೆ. ಅದಾದ ಬಳಿಕ, ಅಲ್ಲಿಯೇ ಸ್ನೇಹಿತರ ಜತೆಗೂಡಿ ಸಣ್ಣಪುಟ್ಟ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಣ ಗಳಿಸುವ ಸಂಚು ರೂಪಿಸುತ್ತಾನೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬರ ವಿಚಾರಕ್ಕೆ ಸಂಬಂಧಿಸಿದಂತೆ ನೌಶಾದ್‌ ಎಂಬ ಯುವಕನ ಹತ್ಯೆ ಮಾಡಲು 25 ಲಕ್ಷ ರೂ.ಗಳ ಸುಪಾರಿ ಪಡೆದು ಸ್ನೇಹಿತ ಮಜೀದ್‌ ಹಾಗೂ ಮತ್ತಿತರರ ಜೊತೆ ಸೇರಿ ನೌಶಾದ್‌ನನ್ನು ಕೊಲೆಗೈಯುತ್ತಾರೆ. ಬಳಿಕ ಆತನ ಮೃತದೇಹವನ್ನು ಸಮೀಪದ ಕಾಡಿನಲ್ಲಿ ಸುಟ್ಟು ಹಾಕಿದ್ದಾರೆ. ನೌಶಾದ್‌ ನಾಪತ್ತೆಯಾಗಿದ್ದಾನೆ ಎಂದು ಆತನ ಪೋಷಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿ ಸಿಕೊಂಡ ಸ್ಥಳೀಯ ಪೊಲೀಸರು ತನಿಖೆ ನಡೆಸಿದರೂ ಇದುವರೆಗೂ ಪತ್ತೆಯಾಗಿರಲಿಲ್ಲ.

ಐಟಿ ಅಧಿಕಾರಿಗಳ ಹೆಸರಲ್ಲಿ ದರೋಡೆ: ಇದಲ್ಲದೆ ಐಟಿ ಅಧಿಕಾರಿಗಳ ಹೆಸರಿನಲ್ಲಿ ಆರೋಪಿ ಸಲೀಂ ತನ್ನ ಸಹಚರರ ಜೊತೆಗೂಡಿ ಪೆರಮಾವೂರಿನಲ್ಲಿರುವ ಖಾಸಗಿ ಕಂಪೆನಿ ಮೇಲೆ ದಾಳಿ ನಡೆಸಿ, ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿ ಹಣ ದೋಚಿದ್ದರು ಎಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಎರಡೂ ಪ್ರಕರಣಗಳ ಕುರಿತು ಕೇರಳ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಸಿಸಿಬಿಯ ಹಿರಿಯ ಪೊಲೀಸ್‌ ಅಧಿಕಾರಿ ಯೊಬ್ಬರು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಬೇಕರಿ ತೆಗೆದಿದ್ದ ಉಗ್ರ ಸಲೀಂ:
2012ರಲ್ಲಿ ನೌಶಾದ್‌ ಕೊಲೆಗೈದ ಸಲುವಾಗಿ ತನಗೆ ದೊರೆತಿದ್ದ ಹಣ ತೆಗೆದುಕೊಂಡು ಕೆಲ ತಿಂಗಳುಗಳ ಕಾಲ ಅಲ್ಲಿಯೇ ವಾಸವಿದ್ದ. ಸರಣಿ ಸ್ಫೋಟದ ತನಿಖೆ ನಡೆಸುತ್ತಿದ್ದ ಸಿಸಿಬಿ ಕೇರಳದತ್ತ ಟಾರ್ಗೆಟ್‌ ಮಾಡಿ ಆತನ ಬಂಧನಕ್ಕೆ ಕಾಯುತ್ತಿತ್ತು. ಈ ಮಾಹಿತಿ ಅರಿತಿದ್ದ ಸಲೀಂ, 2013ರಲ್ಲಿ ಸೀದಾ ಬೆಂಗಳೂರಿಗೆ ಆಗಮಿಸಿ ಆಜಾದ್‌ನಗರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡು ವಾಸನಾಡಿದ್ದ ಜತೆಗೆ ಜೀವನೋಪಾಯಕ್ಕಾಗಿ ಬೇಕರಿಯೊಂದನ್ನು ಆರಂಭಿಸಿ 2 ವರ್ಷ ನಡೆಸಿದ್ದಾನೆ.  2014ರಲ್ಲಿ ಬೇಕರಿ ಅಂಗಡಿ ವ್ಯಾಪಾರದಲ್ಲಿ ನಷ್ಟವುಂಟಾಗಿದ್ದರಿಂದ ಪುನ: ಕೇರಳಕ್ಕೆ ವಾಪಾಸ್‌ ಹೋಗಿದ್ದ. ಈ ವಿಚಾರವನ್ನು ಸಲೀಂ ತಿಳಿಸಿದ್ದಾನೆ. ಆತ ನೀಡಿದ ಮಾಹಿತಿ ಮೇರೆಗೆ ಆತ ವಾಸವಿದ್ದ ಹಾಗೂ ಬೇಕರಿ ನಡೆಸಿದ ಜಾಗವನ್ನು ಮಹಜರು ಮಾಡಲಾಗಿದೆ.

ಸಲೀಂ ಎಲ್‌ಇಟಿ ಸಂಪರ್ಕಕ್ಕೆ ಬಂದಿದ್ದು ಹೇಗೆ?: ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿರುವ ಸಲೀಂ ಜೀವನೋಪಾಯದ ಕೆಲಸ ಹುಡುಕಿಕೊಂಡು ಬಹ್ರೆನ್‌ಗೆ ತೆರಳಿದ್ದು ಹಲವು ವರ್ಷಗಳ ಕಾಲ ಅಲ್ಲಿಯೇ ನೆಲೆಸಿದ್ದ. 2005-06ರ ಆಸುಪಾಸಿಗೆ ಊರಿಗೆ ವಾಪಸ್ಸಾದ ಸಲೀಂ ಮತ್ತೋರ್ವ ಆರೋಪಿ ನಜೀರ್‌ ಸಂಪರ್ಕಕ್ಕೆ ಬಂದಿದ್ದ. ಆತ,  ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಲು ಹವಣಿಸುತ್ತಿದ್ದ. ಧರ್ಮದ ಬಗ್ಗೆ ಅಪಾರ ಓಲವು ಬೆಳೆಸಿಕೊಂಡಿದ್ದ ಸಲೀಂ ಕೂಡ, ಆತನ ಪ್ರಭಾವಕ್ಕೆ ಒಳಗಾಗಿದ್ದ. ಬಳಿಕ, ಇನ್ನಿತರೆ ಆರೋಪಿಗಳೊಂದಿಗೆ ಸೇರಿ ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಟೋಟಿಸುವ ಸಂಚಿನಲ್ಲಿ ಭಾಗಿಯಾಗಿ ನಗರದ ಒಂಭತ್ತು ಜಾಗಗಳು ಹಾಗೂ ಚನ್ನಪಟ್ಟಣದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇರಿಸುವ ಜವಾಬ್ದಾರಿ ನಿರ್ವಹಿಸಿದ್ದ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಕೇರಳ ಪೊಲೀಸರ ವಶಕ್ಕೆ ಸಲೀಂ!: ಶಂಕಿತ ಉಗ್ರ ಸಲೀಂನನ್ನು ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಅಲ್ಲದೆ, ಮಡಿವಾಳ,ಮೈಸೂರು ರಸ್ತೆ ಸೇರಿ ಬಾಂಬ್‌ ಇಟ್ಟಿದ್ದ ನಗರದ ಒಂಭತ್ತು ಸ್ಥಳಗಳಿಗೆ ಆತನನ್ನು  ಕರೆದುಕೊಂಡು ಹೋಗಿ ಸ್ಥಳ ಗುರ್ತಿಸುವಿಕೆ, ಮಹಜರು ಕಾರ್ಯ ಮಾಡಲಾಗಿದೆ. ಜತೆಗೆ, ಸರಣಿ ಸ್ಟೋಟಕ್ಕೆ ಸಂಚು ರೂಪಿಸಿ ಇತರ ಆರೋಪಿಗಳೊಂದಿಗೆ ಸಭೆ ನಡೆಸಿದ್ದ ಕಣ್ಣೂರು ಜಿಲ್ಲೆಯ ನೀರ್‌ಕಲ್‌ ಗ್ರಾಮದ ಮನೆಯೊಂದರಲ್ಲಿ ಮಹಜರು ನಡೆಸಿದ್ದು. ಆತನ ಮನೆಯಲ್ಲಿ ಕೆಲವೊಂದು ಪುಸ್ತಕಗಳು ದೊರೆತಿವೆ. ವಿಚಾರಣೆ ವೇಳೆ ಸ್ಫೋಟ ಪ್ರಕರಣದಲ್ಲಿ ತನ್ನ ಪಾತ್ರ, ತಾನು ಸ್ಫೋಟದಲ್ಲಿ ತೊಡಗಿಸಿಕೊಂಡ ಉದ್ದೇಶ. ಇತರೆ ಆರೋಪಿಗಳೊಂದಿಗಿನ ಸಂಪರ್ಕ ಸೇರಿ ಹಲವು ಮಹತ್ವದ ಮಾಹಿತಿಯನ್ನು  ಪಡೆದುಕೊಳ್ಳಲಾಗಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ 49ನೇ ಸೆಷನ್ಸ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನೌಶಾದ್‌ ಕೊಲೆ ಪ್ರಕರಣ ಹಾಗೂ ಮತ್ತೂಂದು ಪ್ರತ್ಯೇಕ ದರೋಡೆ
ಪ್ರಕರಣದ ಸಂಬಂಧ ಕೇರಳ ಪೊಲೀಸರು ಆತನನ್ನು ಕಾನೂನು ಪ್ರಕ್ರಿಯೆಗಳ ಮೂಲಕ ವಶಕ್ಕೆ ಪಡೆಯಲಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಳಿದ ಆರೋಪಿಗಳಿಗೆ ತೀವ್ರ ಶೋಧ!
ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಇನ್ನೂ ಐದು ಮಂದಿ ಆರೋಪಿಗಳ ಬಂಧನವಾಗ ಬೇಕಿದೆ. ಅಯೂಬ್‌, ರಿಯಾಜ್‌ ಭಟ್ಕಳ್‌,
ವಲೀ( ಎಲ್‌ಇಟಿ ಕಮಾಂಡರ್‌ ಪಾಕ್‌) ಅಲೀ ( ಮಸ್ಕಟ್‌ ) ಸಲೀಂ ( ಢಾಕಾ ಬಾಂಗ್ಲಾ) ಕೇರಳ ಮೂಲದ ಜಾಹೀದ್‌ ಶೋಹೆಬ್‌
ಬಂಧನವಾಗಬೇಕಿದೆ.

ಅ.10ರಂದು ಬಂಧನ
ಸರಣಿ ಸ್ಫೋಟ ಪ್ರಕರಣದ ಬಳಿಕ 10 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಪ್ರಕರಣದ 20ನೇ ಆರೋಪಿ ಶಂಕಿತ ಉಗ್ರ ಸಲೀಂನನ್ನು ಅ.10ರಂದು ಆತನ ಸ್ವಂತ ಊರಾದ ಪರಂಬಾಯಿಯಲ್ಲಿ ಸಿಸಿಬಿಯ ವಿಶೇಷ ತನಿಖಾ ತಂಡದ ಎಸಿಪಿ ಪಿ.ಟಿ
ಸುಬ್ರಹ್ಮಣ್ಯ ನೇತೃತ್ವದ ತಂಡ ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿತ್ತು. ಪ್ರಕರಣದ ತನಿಖೆಯನ್ನು ಎಸಿಪಿ ಬಿ.ಎಸ್‌ ಮೋಹನ್‌ಕುಮಾರ್‌ ಸೇರಿ ಹಲವು ಅಧಿಕಾರಿಗಳು ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿ ಮಾಹಿತಿ ಕಲೆಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next