ಜಮಖಂಡಿ: ರಾಜ್ಯದ ಶಿಕ್ಷಕರು ಮುಕ್ತವಾಗಿ ಕೆಲಸ ಮಾಡುವ ಮೂಲಕ ಕಲಿಕಾ ಚೇತರಿಕೆಯಲ್ಲಿ ಸಂಪೂರ್ಣ ತೊಡಗಿಕೊಳ್ಳಬೇಕು. ಶಾಲಾಮಕ್ಕಳನ್ನು ತಮ್ಮ ಮನೆಯ ಮಕ್ಕಳು ಎಂದು ಭಾವಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಭವಿಷ್ಯ ರೂಪಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು.
ನಗರದ ಹುಲ್ಯಾಳ ಕ್ರಾಸ್ ಬಳಿ ಶ್ರೀ ಗುರುದೇವ ರಾನಡೆ ಮೆಮೋರಿಯಲ್ ಶಿಕ್ಷಣ ಸಂಸ್ಥೆ ವಿದ್ಯಾಭವನ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರೊನಾದಿಂದ ಕಳೆದ ಎರಡು ವರ್ಷದಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಸಾಕಷ್ಟು ವ್ಯತ್ಯಾಸವಾಗಿದ್ದು, ಯಾವ ಕ್ಷೇತ್ರದಲ್ಲಿ ಆಗಲಾರಷ್ಟು ನಿರೀಕ್ಷೆಗೂ ಮೀರಿದ ಹಾನಿ ಶಿಕ್ಷಣ ಇಲಾಖೆಗೆ ಆಗಿದೆ. ಹಿಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣದ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗೊಂಡಿದೆ. ಕೊರೊನಾ ಸತತ ಅಲೆಗಳಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೇರವಾಗಿ ಪರಿಣಾಮ ಬೀರಿದ್ದು, ಮುಚ್ಚಿಡುವ ಸಂಗತಿಯಾಗಿ ಉಳಿದುಕೊಂಡಿಲ್ಲ ಎಂದರು.
ಕಳೆದ ಎರಡು ವರ್ಷದಿಂದ ಪಾಠ, ಅಧ್ಯಯನ ಮಾಡದ ಮಕ್ಕಳಲ್ಲಿ ಪರೀಕ್ಷೆ ಭಯ ಇರುತ್ತದೆ. ಆದರೇ ರಾಜ್ಯದ ನಮ್ಮ ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಭಯವನ್ನು ದೂರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಭಾವಿಸಿದ್ದೇನೆ.
ಪ್ರಾಥಮಿಕ ಹಂತದಲ್ಲಿ ಕಲಿಕಾ ಚೇತರಿಕೆ ನಡೆಯುತ್ತಿದ್ದು, ಮುಂದಿನ ವರ್ಷದ ಶಿಕ್ಷಕರ 15 ದಿನಗಳ ರಜೆ ಸ್ಥಗಿತಗೊಳಿಸಲಾಗಿದೆ. ರಾಜ್ಯದ ಹಲವು ಶಿಕ್ಷಕರು ಸಾಕಷ್ಟು ನೋವು ತೊಂದರೆ ಅನುಭವಿಸುತ್ತಿದ್ದು, ನಮ್ಮ ಗಮನಕ್ಕೆ ಬಂದಿದೆ.
ಶಿಕ್ಷಕರ ಮತ್ತು ಪದವೀಧರ ಕ್ಷೇತ್ರ ಶಾಸಕರು ಮೇಲೆ ಒತ್ತಡ ತಂದು ಸಂಕಷ್ಟಗಳಿಗೆ ಸ್ಪಂದಿಸುವಂತೆ ಒತ್ತಾಯ ಕೂಡ ಮಾಡಿದ್ದಾರೆ. ಶಿಕ್ಷಕರು ತಮ್ಮ ಮೇಲಧಿ ಕಾರಿಗಳು ಕಿರುಕುಳ, ತೊಂದರೆ ಮಾಡಿದರೇ, ನನ್ನ ಗಮನಕ್ಕೆ ತರಬೇಕು. ಇಲ್ಲವಾದಲ್ಲಿ ಪತ್ರ ಮೂಲಕ ತಮ್ಮ ತೊಂದರೆಗಳನ್ನು ಕಳುಹಿಸಿಕೊಟ್ಟಲ್ಲಿ ಖಂಡಿತವಾಗಿ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ವಾಯವ್ಯ ಶಿಕ್ಷಕರ ಮತಕ್ಷೇತ್ರದ ಶಾಸಕ ಅರುಣ ಶಹಾಪುರ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗಗೌಡ, ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಸಿದ್ರಾಮ ಮನಹಳ್ಳಿ, ಸಂಸ್ಥೆ ಅಧ್ಯಕ್ಷ ಪ್ರಸಾದ ಆಪ್ಟೆ ಇದ್ದರು. ಎಸ್.ಎಸ್.ಡೋರ್ಲೆ ಪ್ರಾರ್ಥಿಸಿದರು. ನಗರಸಭೆ ಮಾಜಿ ಸದಸ್ಯ ಶ್ರೀನಿವಾಸ ಅಪರಂಜಿ ನಿರೂಪಿಸಿದರು.