ಕಲಬುರಗಿ: ಅಸಂಘಟಿತ ವಲಯದ ಬೀದಿ ಬದಿ ವ್ಯಾಪಾರಿಗಳ ಹಿತರಕ್ಷಣೆ ನಿಟ್ಟಿನಲ್ಲಿ ಸಂಘಟನೆಯ ಒಕ್ಕೂಟ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅಸ್ಥಿತ್ವಕ್ಕೆ ಬಂದಿದ್ದರಿಂದ ಬೀದಿ ವ್ಯಾಪಾರಿಗಳಿಗೆ ಆನೆ ಬಲ ಬಂದಂತಾಗಿದೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್. ಸೂರ್ಯವಂಶಿ ಹೇಳಿದರು.
ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ಬೀದಿ ಬದಿ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆ ಹಾಗೂ ಪರಿಹಾರ ಕುರಿತು ಬೀದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ಸರ್ಕಾರಕ್ಕೆ ಮನವಿ ಸಲ್ಲಿಸಿ, ಮನವರಿಕೆ ಮಾಡಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಒಕ್ಕೂಟದ ಸಂಘಟನೆಗಳು ರಾಜ್ಯಾದ್ಯಂತ ಬೀದಿಬದಿ ವ್ಯಾಪಾರಿಗಳ ಹಿತಕ್ಕಾಗಿ ಶ್ರಮಿಸುತ್ತಿವೆ ಎಂದರು.
ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ರಾಷ್ಟ್ರೀಯ ಅಧ್ಯಕ್ಷ ಅರಬಿಂದಸಿಂಗ್ ಕರ್ನಾಟಕ ರಾಜ್ಯಾದ್ಯಂತ ಬೀದಿಬದಿ ವ್ಯಾಪಾರಿಗಳ ಚಿಂತನಮಂಥನ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಘಟನೆಯ ವಿವಿಧ ಘಟಕಗಳ ಪದಾಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗಾಗಿಯೇ ಇರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳು, ಅವುಗಳ ಅನುಷ್ಠಾನದ ಕುರಿತು ಮತ್ತು ರಾಜ್ಯದ ಪೊಲೀಸ್ ಇಲಾಖೆಯಿಂದ ಆಗುತ್ತಿರುವ ತೊಂದರೆ ಕುರಿತು ಚರ್ಚಿಸಲಾಗಿದೆ. ಸರ್ಕಾರದೊಂದಿಗೆ ಪಟ್ಟಣ ವ್ಯಾಪಾರ ಸಮಿತಿ ಕುರಿತು ಮಾತನಾಡಿರುವ ಒಕ್ಕೂಟದ ನಾಯಕರು, ಸಂಘಟನೆ ಬಲಪಡಿಸಿ ಬೀದಿವ್ಯಾಪಾರಿಗಳ ಕಲ್ಯಾಣಕ್ಕೆ ಶ್ರಮಿಸುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಸರ್ಕಾರದ ಮಾರ್ಗಸೂಚಿಯನ್ನು ಎಲ್ಲ ಬೀದಿಬದಿ ವ್ಯಾಪಾರಿಗಳು ಕಡ್ಡಾಯವಾಗಿ ಪಾಲಿಸಬೇಕು. ಈ ಮೂಲಕ ನಿಮ್ಮ ಹಾಗೂ ಗ್ರಾಹಕರ ಆರೋಗ್ಯದ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಡಾ| ವೇದಮೂರ್ತಿ, ಶಿವಪ್ಪ ಬಾಗೋಡಿ, ಹುಸೇನ, ಶಿವು ಮಡಕಿ, ರಾಘವೇಂದ್ರ ಕಾಮದಾಸಿ, ಗಾಯತ್ರಿ, ಲಕ್ಷ್ಮೀ ಬಾಬಜಿ, ರುಕ್ಮಿಣಿ, ದತ್ತು ಭಾಸಗಿ, ಬಾಬು ಶೇಖ ಪರಿಟ್ ಇದ್ದರು.