ವಿಜಯಪುರ: ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಕ್ಕೆ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶನೆಲ್ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲೇ ಇದ್ದರೆ ಸೋಮಶೇಖರ್ ರಾಜಕೀಯ ಜೀವನದಲ್ಲೇ ಮಂತ್ರಿ ಅಗುತ್ತಿರಲಿಲ್ಲ. ಬಿಜೆಪಿ ಸೇರಿದ್ದರಿಂದಲೇ ಮಂತ್ರಿಯಾದರು ಎಂದರು.
ನೀವು ಬಿಜೆಪಿ ಪಕ್ಷಕ್ಕೆ ಬಂದ ಉಪಕಾರದಿಂದಲೇ ಬಿಜೆಪಿ ಸರ್ಕಾರ ರಚನೆಯಾಯಿತು. ಅದನ್ನು ನಾವು ಅಲ್ಲಗಳೆಯುವುದಿಲ್ಲ. ನಿಮಗೆ ಬಿಜೆಪಿ ಪಕ್ಷದಿಂದ ಉಪಕಾರವಾಗಿದೆ ಎಂಬುದನ್ನು ಮರೆಯಬಾರದು. ಬಿಜೆಪಿ ಸೇರಿ ಸಚಿವರಾಗಿದ್ದ ನಿಮ್ಮನ್ನು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಿತ್ತು ಎಂದು ಸ್ವಪಕ್ಷೀಯ ಶಾಸಕ ಸೋಮಶೇಖರ ಅವರಿಗೆ ಕಿವಿ ಮಾತು ಹೇಳಿದರು.
ಬಿಜೆಪಿ ಪಕ್ಷದವರು ಮೊದಲು ಜಾಮೂನು ನೀಡಿ, ನಂತರ ವಿಷ ಹಾಕುತ್ತಾರೆ ಎಂದಿರುವ ಶಾಸಕ ಸೋಮಶೇಖರ ಹೇಳಿಕೆಯನ್ನು ಅಲ್ಲಗಳೆದ ಯತ್ನಾಳ, ನಿಮಗೆ ಯಾರೂ ವಿಷ ಹಾಕಿಲ್ಲ. ಒಂದೊಮ್ಮೆ ವಿಷ ಹಾಕಿದ್ದರೆ ಸತ್ತುಹೋಗುತ್ತಿದ್ದರು. ನೀವು ಬಿಜೆಪಿ ಪಕ್ಷದ ಋಣದಲ್ಲಿ ಇದ್ದೀರಿ. ಬಿಜೆಪಿ ಬೇಡವಾಗಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ನಿಮಗೆ ಬೇಕಾದಂತೆ ಮಾಡಿ ಎಂದು ಸಲಹೆ ನೀಡಿದರು.
ಬಿಜೆಪಿ ಪಕ್ಷದಲ್ಲಿ ಇದ್ದೂ ಕಾಂಗ್ರೆಸ್ ಪರ ಕೆಲಸ ಮಾಡಿದರೆ ಜನ ರಾಜಕೀಯ ಅನೈತಿಕತೆಯ ನಿಮ್ಮನ್ನು ಒಪ್ಪಲಾರರು ಎಂದು ಹರಿಹಾಯ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿವರಾಂ ಹೆಬ್ಬಾರ ಅವರಿಗೂ ಹೇಳಿ ಬಂದಿದ್ದೇನೆ. ದೇಶ, ಧರ್ಮ ಇರಬೇಕು ಎಂದು ನಿಮಗೇನಾದರೂ ಇದ್ದರೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿ ಎಂದು ಸಲಹೆ ನೀಡಿದ್ದೇನೆ ಎಂದರು.