Advertisement

ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಕೇಳಲಿ: ಸಚಿವ ನಿರಾಣಿ ಒತ್ತಾಯ

02:51 PM Jan 04, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುರಿತು ಅತ್ಯಂತ ಕೀಳು ಮಟ್ಟದಲ್ಲಿ ಟೀಕೆ ಮಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಒತ್ತಾಯಿಸಿದ್ದಾರೆ.

Advertisement

ಮುಖ್ಯಮಂತ್ರಿ ಸ್ಥಾನ ಸಾಂವಿಧಾನಿಕ ಹುದ್ದೆ. ಅದಕ್ಕೆ ಗೌರವ ಕೊಡುವುದು ಪ್ರತಿಯೊಬ್ಬರ ಕರ್ತವ್ಯ. ಅದರಲ್ಲೂ ಅತ್ಯಂತ ಹಿರಿಯ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಅವರಿಂದ ಇಂತಹ ಪದವನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ವಿವಿಧ ಖಾತೆಗಳನ್ನು ನಿಭಾಯಿಸಿದ ರಾಜ್ಯದ ಒಬ್ಬ ಹಿರಿಯ ರಾಜಕಾರಣಿ. ಅಂಥವರು ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆ ವಿನಃ ಇಂಥ ಕ್ಷುಲ್ಲಕ ಹೇಳಿಕೆ ನೀಡಬಾರದೆಂದು ಆಕ್ಷೇಪಿಸಿದ್ದಾರೆ.

10 ವರ್ಷಗಳ ಕಾಲ ಸೂಪರ್ ಪವರ್ ಪ್ರಧಾನಿ ಎನಿಸಿದ್ದ ಸೋನಿಯಾ ಗಾಂಧಿ ಮುಂದೆ ಕೈಕಟ್ಟಿ ನಿಲ್ಲುವಾಗ ಸಿದ್ದರಾಮಯ್ಯ ಅವರ ಸ್ವಾಭಿಮಾನ ಎಲ್ಲಿ ಹೋಗಿತ್ತು?. ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಅಂಥವರ ಮುಂದೆ ಜೀ ಹುಜೂರ್ ಎನ್ನುವ ನಿಮಗೆ ಭಾರತದ ಸಂಸ್ಕೃತಿ, ಸಂಸ್ಕಾರ ಕೊಟ್ಟಿದೆಯೇ ಎಂದು ನಿರಾಣಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಮ್ಮ ದೇಶದಲ್ಲಿ ಹುದ್ದೆ, ವ್ಯಕ್ತಿ ಮತ್ತು ವಯಸ್ಸಿಗೆ ಬೆಲೆ ಕೊಡುತ್ತಾರೆ. ನರೇಂದ್ರ ಮೋದಿ ಅವರು ಇದುವರೆಗೂ ಒಬ್ಬರಿಂದಲೂ ಕಾಲಿಗೆ ನಮಸ್ಕರಿಸಿಕೊಂಡಿಲ್ಲ. ನನ್ನ ಮುಂದೆ ಕೈ ಕಟ್ಟಿ ನಿಲ್ಲಿ ಎಂದು ಹೇಳಿಲ್ಲ. ಒಬ್ಬ ಅತ್ಯುತ್ತಮ ಸಂಸದೀಯ ಪಟು ಎನಿಸಿದ ಬೊಮ್ಮಾಯಿ ಅವರ ಬಗ್ಗೆ ಈ ರೀತಿ ಮಾತನಾಡಿರುವುದು ಕಾಂಗ್ರೆಸ್ ಪಕ್ಷದ ಹಾಗೂ ನಿಮ್ಮ ಕೀಳು ಅಭಿರುಚಿ ತೋರಿಸುತ್ತದೆ ಎಂದಿದ್ದಾರೆ.

Advertisement

ಕೂಡಲೇ ಸಿದ್ದರಾಮಯ್ಯನವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು.  ಇಲ್ಲದಿದ್ದರೆ ನಮ್ಮ ಕಾರ್ಯಕರ್ತರು ಕೂಡ ಅದೇ ಭಾಷೆಯಲ್ಲೇ ಉತ್ತರ ಕೊಡುತ್ತಾರೆ ಎಂದು ಸಚಿವ ನಿರಾಣಿ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next