Advertisement

ವಿಜ್ಞಾನ ಸಮಾಜದ ಬೆಳವಣಿಗೆಗೆ ಪೂರಕವಾಗಲಿ

09:47 PM Dec 30, 2019 | Team Udayavani |

ತುಮಕೂರು: ವಿಜ್ಞಾನದ ಆವಿಷ್ಕಾರಗಳು ಮನುಷ್ಯ ಹಾಗೂ ಸಮಾಜದ ಬೆಳವಣಿಗೆಗೆ ಪೂರಕವಾಗಬೇಕು ಹೊರತು ಮಾರಕವಾಗಬಾರದು ಎಂದು ಶ್ರೀ ಸಿದ್ಧಗಂಗಾ ಮಠದ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಶ್ರೀ ಸಿದ್ಧಗಂಗಾ ಮಠದಲ್ಲಿ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2019-20 ನೇ ಸಾಲಿನ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದ ಸಾನ್ನಿಧ್ಯ ವಹಿಸಿ ಮಾತನಾಡಿದರು.

Advertisement

ವಿಜ್ಞಾನವೆಂಬುದು ಸತ್ಯದ ಅನ್ವೇಷಣೆಯಾಗಿದ್ದು, ವಿಜ್ಞಾನದ ನೂತನ ಆವಿಷ್ಕಾರಗಳು ಮನುಷ್ಯನ ಯೋಗಕ್ಷೇಮಕ್ಕೆ ಅನುಗುಣವಾಗಿರಬೇಕು. ವಿಜ್ಞಾನದ ಆವಿಷ್ಕಾರಗಳಿಂದ ಸೌಲಭ್ಯಗಳು ಹೆಚ್ಚಾದಂತೆ ಮನುಷ್ಯ ಸೋಮಾರಿತನ ಬೆಳೆಸಿಕೊಂಡು ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾನೆ. ವಿಜ್ಞಾನದ ಆವಿಷ್ಕಾರಗಳು ಎಷ್ಟು ಬೇಕು ಅಷ್ಟನ್ನೇ ಬಳಸಬೇಕು ಎಂದು ಕಿವಿಮಾತು ಹೇಳಿದರು.

ದೇವರ ಸ್ವರೂಪ: ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್‌ ಮಾತನಾಡಿ, ಜೀವನದಲ್ಲಿ ನೈಜ ದೇವರ ನೋಡಲು ಸಾಧ್ಯವಿಲ್ಲ. ಆದರೆ, ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಲಕ್ಷಾಂತರ ಭಕ್ತಗಣಕ್ಕೆ ಮಾರ್ಗದರ್ಶನ ನೀಡುತ್ತ ನಡೆದಾಡುವ ದೇವರ ಸ್ವರೂಪರಾಗಿದ್ದರು ಎಂದು ಹೇಳಿದರು.

ವಸ್ತು ಪ್ರದರ್ಶನದಲ್ಲಿ ಮಕ್ಕಳ ಶ್ರಮ ಅತ್ಯುನ್ನತವಾದುದ್ದಾಗಿದೆ. ಶಿಕ್ಷಕರು, ಪೋಷಕರು ಮಕ್ಕಳಿಗೆ ಸದಾ ಪ್ರೋತ್ಸಾಹ ನೀಡಬೇಕು. ಸ್ವರ್ಧಾತ್ಮಕ ಯುಗದಲ್ಲಿ ಖಾಸಗಿ ಶಾಲೆ ಮಕ್ಕಳು ವಿಜ್ಞಾನ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಸರ್ಕಾರಿ ಶಾಲೆ ಮಕ್ಕಳು ವಿಜ್ಞಾನ ಅಭ್ಯಸಿಸಲು ಹಿಂಜರಿಯುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಸರ್ಕಾರ ಮಕ್ಕಳಿಗೆ ಇಲಾಖೆಯಿಂದ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಜಿಪಂ ಉಪಾಧ್ಯಕ್ಷೆ ಶಾರದಾ, ಜಿಪಂ ಸದಸ್ಯ ನರಸಿಂಹಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್‌. ಕಾಮಾಕ್ಷಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷ ಷಣ್ಮುಖಯ್ಯ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಶ್‌, ಸೇರಿ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನ್ಯಾಸಕರು, ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಶಿಕ್ಷಕರು ಮಕ್ಕಳು ಮತ್ತಿತರರಿದ್ದರು.

Advertisement

ಕಣ್ಮನ ಸೆಳೆದ ಪ್ರದರ್ಶನ: ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನಾನಾ ಶಾಲಾ ವಿದ್ಯಾರ್ಥಿಗಳು ಮೂಡಿಸಿದ್ದ ವಸ್ತು ಪ್ರದರ್ಶನ ಕಣ್ಮನ ಸೆಳೆಯಿತು. ಸುಸ್ಥಿರ ಕೃಷಿ ಪದ್ಧತಿ, ಭವಿಷ್ಯದಲ್ಲಿ ಸಾರಿಗೆ ಮತ್ತು ಸಂಪರ್ಕ, ಭವಿಷ್ಯದ ಸಾರಿಗೆ ಮತ್ತು ಸಂವಹನ, ಕೈಗಾರಿಕಾ ಅಭಿವೃದ್ಧಿ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಗಣಿತದ ಮಾದರಿ, ಸೋಲಾರ್‌ ಆಧಾರಿತ ಬಸ್‌, ಏರ್‌ಪೊರ್ಟ್‌, ಮೆಟ್ರೋರೈಲು, ಸ್ಮಾರ್ಟ್‌ಸಿಟಿ, ಸಮರ್ಥನೀಯ ಕೃಷಿ ಆಚರಣೆ ಸೇರಿ ವಿವಿಧ ಪ್ರದರ್ಶನಗಳು ಆಕರ್ಷಿಸುತ್ತಿದ್ದವು.

ಮಕ್ಕಳಲ್ಲಿ ಶಾಸ್ತ್ರೀಯ ವಿಜ್ಞಾನ ಅಭ್ಯಸಿಸುವ ಗುಣ ಬೆಳೆಸಬೇಕು. ಮಕ್ಕಳಲ್ಲಿ ಉತ್ತಮ ವಿಜ್ಞಾನಿಯಾಗಬೇಕೆಂಬ ಆಸಕ್ತಿ ಕುಂದುತ್ತಿದೆ. ಆದ್ದರಿಂದ ಶಿಕ್ಷಕರು, ಪೋಷಕರು ವಿಜ್ಞಾನಿಯಾಗುವ ಆಸಕ್ತಿ ಮಕ್ಕಳ ಮನಸ್ಸಲ್ಲಿ ಬಿತ್ತಬೇಕು. ಮಕ್ಕಳಲ್ಲಿ ಶಾಸ್ತ್ರೀಯ ವಿಜ್ಞಾನ ಅಭ್ಯಸಿಸುವ ಗುಣ ಬೆಳೆಸಬೇಕು.
-ಶ್ರೀ ಸಿದ್ಧಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next