Advertisement

ಸವದಿ ಅನರ್ಹರ ಕೊಡುಗೆ ಅರ್ಥ ಮಾಡಿಕೊಳ್ಳಲಿ: ಕತ್ತಿ

11:31 PM Oct 25, 2019 | Lakshmi GovindaRaju |

ಬೆಳಗಾವಿ: ಅನರ್ಹ ಶಾಸಕರು ರಾಜೀನಾಮೆ ಕೊಡದೇ ಇದ್ದರೆ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ ಆಗುತ್ತಲೇ ಇರಲಿಲ್ಲ. ಇದನ್ನು ಸವದಿ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.

Advertisement

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, “ನಾನು ಎಂದಿಗೂ ಡಿಸಿಎಂ ಹುದ್ದೆಗೆ ಆಸೆ ಪಟ್ಟವನಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಷ್ಟೇ. ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಹಾಗೂ ಅಶ್ವತ್ಥ ನಾರಾಯಣ ಅವರಿಗೆ ಸಿಎಂ ಯಡಿಯೂರಪ್ಪಗೆ ಪರ್ಯಾಯ ನಾಯಕರಾಗುವಂಥ ಯೋಗ್ಯತೆ ಹಾಗೂ ಸಾಮರ್ಥ್ಯ ಇಲ್ಲ.

ಡಿಸಿಎಂ ಸ್ಥಾನ ಸಾಂವಿಧಾನಿಕ ಹುದ್ದೆ ಅಲ್ಲ. ಡಿಸಿಎಂ ಆದವರು ದೊಡ್ಡವರೇನಲ್ಲ’ ಎಂದರು. ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಲಕ್ಷ್ಮಣ ಸವದಿಗೆ ಹೆಚ್ಚು ಮನ್ನಣೆ ನೀಡಲಾಗುತ್ತಿದೆ. ಇದೇ ಕಾರಣದಿಂದ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡಲಾಗುತ್ತಿದೆ. ಆದರೆ, ಯಡಿಯೂರಪ್ಪಗೆ ಪರ್ಯಾಯವಾಗಿ ಯಾರನ್ನೂ ಬೆಳೆಸುವ ವಿಚಾರವನ್ನು ಯಾರೂ ಮಾಡಬಾರದು.

ಮಹಾರಾಷ್ಟ್ರ ಚುನಾವಣೆಯಲ್ಲಿ ಕೊಲ್ಲಾಪುರ ಭಾಗದ 18 ಕ್ಷೇತ್ರಗಳ ಉಸ್ತುವಾರಿ ಹೊತ್ತಿದ್ದ ಲಕ್ಷ್ಮಣ ಸವದಿ, ಬಿಜೆಪಿಗೆ ಹೆಚ್ಚು ಸ್ಥಾನ ತಂದುಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅವರ ಉಸ್ತುವಾರಿಯ 18 ಕ್ಷೇತ್ರಗಳ ಪೈಕಿ ಕೇವಲ ಒಂದು ಕಡೆ ಮಾತ್ರ ಬಿಜೆಪಿ ಜಯಗಳಿಸಿದೆ. ಸವದಿ ತಮ್ಮ ಸಾಮರ್ಥ್ಯ ತೋರಿಸಲು ವಿಫಲರಾಗಿದ್ದಾರೆ ಎಂದರು.

ಲಕ್ಷ್ಮಣ ಸವದಿ ಕೃತಜ್ಞಹೀನ: ಬಿ.ಸಿ.ಪಾಟೀಲ ಆಕ್ರೋಶ
ಹಾವೇರಿ: “ಸೋತು ಮನೆಯಲ್ಲಿ ಕುಳಿತಿದ್ದ ಲಕ್ಷ್ಮಣ ಸವದಿ ಉಪಮುಖ್ಯ ಮಂತ್ರಿ ಹೇಗಾದರು ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಅವನೊಬ್ಬ ಕೃತಜ್ಞಹೀನ ಮನುಷ್ಯ’ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರೇಕೆರೂರು ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಕೆಟ್ಟ ಮೈತ್ರಿ ಸರ್ಕಾರವಿತ್ತು.

Advertisement

ಅದು ಕೇವಲ ನಾಲ್ಕೈದು ಜಿಲ್ಲೆಗೆ ಸೀಮಿತವಾಗಿತ್ತು. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದೇವೆ. ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಬಿದ್ದಿತ್ತು. ಆಗ ಬಿಜೆಪಿ ಸರ್ಕಾರ ರಚಿಸಿತು. ಸೋತವರನ್ನು ಕರೆದುಕೊಂಡು ಬಂದು ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ. ಈ ಬಗ್ಗೆ ಲಕ್ಷ್ಮಣ ಸವದಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next