Advertisement

ಗರ್ಭಿಣಿಯರಿಗೆ ಸಹಕಾರವಿರಲಿ

01:17 PM Nov 24, 2018 | Team Udayavani |

ಯಾದಗಿರಿ: ಅಪೌಷ್ಟಿಕತೆ ನಿವಾರಿಸುವಲ್ಲಿ ಕೇವಲ ಗರ್ಭಿಣಿಯರಷ್ಟೇ ಮುತುವರ್ಜಿ ವಹಿಸಿದರೆ ಸಾಲದು. ಇದಕ್ಕೆ ವಿವಿಧ ಇಲಾಖೆಗಳ ಜತೆಗೆ ಮುಖ್ಯವಾಗಿ ಕುಟುಂಬದವ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಹೇಳಿದರು.

Advertisement

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶುಕ್ರವಾರ ಮಗು ಮತ್ತು ಕಾನೂನು ಕೇಂದ್ರ, ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿ (ಸಿಸಿಎಲ್‌ -ಎನ್‌ಎಲ್‌ಎಸ್‌ಐಯು) ಬೆಂಗಳೂರು ವತಿಯಿಂದ ಯುನಿಸೆಫ್‌ನ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಪ್ರಾದೇಶಿಕ ಕಚೇರಿ ಬೆಂಬಲದೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲೆಯಲ್ಲಿ ಅಪೌಷ್ಟಿಕತೆ ಸವಾಲುಗಳನ್ನು ಗುರುತಿಸುವ ಮತ್ತು ನಿವಾರಣೆ ಕುರಿತ ಒಂದು ದಿನದ ಸಮಾಲೋಚನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಆರೋಗ್ಯವಂತ ಮಕ್ಕಳು ಜನಿಸುವಂತಾದರೆ ಅಪೌಷ್ಟಿಕತೆ ನಿವಾರಣೆಯಾಗಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗರ್ಭಿಣಿಯರು ಪೌಷ್ಟಿಕಾಂಶವಿರುವ ಆಹಾರವನ್ನು ಸೇವಿಸಬೇಕು. ಆರೋಗ್ಯ ಚೆನ್ನಾಗಿದ್ದರೆ ಜೀವನದಲ್ಲಿ ಏನಾದರೂ ಸಂಪಾದನೆ, ಸಾಧನೆ ಮಾಡಬಹುದು ಎಂದು ಹೇಳಿದರು. 

ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ ನಿರ್ಮಿಸಿದ ಮನೆಗಳಿಗೆ ಸ್ವತ್ಛ ಭಾರತ ಮಿಷನ್‌-2ರಡಿ ಶೌಚಾಲಯ ನಿರ್ಮಾಣ ಮಾಡಬೇಕಾಗಿದೆ. ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಈಗಾಗಲೇ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡಿರುವ ಸಾರ್ವಜನಿಕರು ಅವುಗಳ ಬಳಕೆಗೆ ಹೆಚ್ಚಿನ ಒತ್ತು ನೀಡುವಂತೆ ಪ್ರಚಾರ ನಡೆಸಲಾಗುವುದು ಎಂದು ತಿಳಿಸಿದರು. ಯುನಿಸೆಫ್‌ ಸಮಾಲೋಚಕಿ ಡಾ| ತಾರಾ ಎಮ್‌.ಎಸ್‌. ಅವರು ಮಾತನಾಡಿ, ಹಸಿವು ನೀಗಿಸುವುದರಿಂದ ಮಾತ್ರ ಅಪೌಷ್ಟಿಕತೆ ನಿವಾರಣೆಯಾಗುವುದಿಲ್ಲ. 

ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಮಾಡಿದರೆ ಅಪೌಷ್ಟಿಕತೆ ನಿವಾರಣೆಯಾಗುತ್ತದೆ. ಇದಕ್ಕಾಗಿ ಸರ್ಕಾರದ ಹಲವು ಯೋಜನೆಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಯೋಜನೆಗಳನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಮಗು ಮತ್ತು ಕಾನೂನು ಕೇಂದ್ರ, ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿಯ ಕುಮಾರಸ್ವಾಮಿ ಟಿ. ಮಾತನಾಡಿ, ಮಹಿಳೆ ಮತ್ತು ಮಕ್ಕಳಲ್ಲಿ ಹಲವಾರು ಕಾರಣಗಳಿಂದ ಅಪೌಷ್ಟಿಕತೆ ಉಂಟಾಗುತ್ತದೆ. ಇದನ್ನು ನಿವಾರಿಸುವ ಜವಾಬ್ದಾರಿ ಹೊತ್ತಿರುವ ಇಲಾಖೆಗಳ ನಡುವೆ ಸಮನ್ವತೆ ಇದ್ದಾಗ ಅಪೌಷ್ಟಿಕತೆ ನಿರ್ಮೂಲನೆ ಮಾಡಬಹುದು. ಇಲಾಖೆಗಳಿಗೆ ಯಾವುದೇ ಯೋಜನೆ ಕುರಿತು ಸುತ್ತೋಲೆ ಬಂದಾಗ ಅದರ ಬಗ್ಗೆ ಚರ್ಚೆ ನಡೆಸಿ, ಅನುಷ್ಠಾನಗೊಳಿಸಬೇಕು ಎಂದು ಹೇಳಿದರು. ಯುನಿಸೆಫ್‌ ರಾಜ್ಯ ಸಂಯೋಜಕ ಡಾ| ಶಂಕರ ಹೊಸಕೇರಿ ಜಿಲ್ಲೆಯಲ್ಲಿ ಅಪೌಷ್ಟಿಕತೆ ನಿವಾರಿಸಲು ಇರುವ ಪ್ರಸ್ತುತ ಸವಾಲು ಮತ್ತು ಸಮಸ್ಯೆಗಳ ಕುರಿತಂತೆ ಸಂವಾದ ನಡೆಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಹಬೀಬ ಉಸ್ಮಾನ್‌ ಪಟೇಲ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಲಕ್ಷ್ಮೀಕಾಂತ, ಜಿಲ್ಲಾಸ್ಪತ್ರೆ ಮಕ್ಕಳ ತಜ್ಞರಾದ ಡಾ| ರಾಜೇಶ್ವರಿ, ಯುನಿಸೆಫ್‌ ಹೈದ್ರಾಬಾದ್‌ ಪ್ರತಿನಿಧಿ ರುಚಿ, ಕಾರ್ಯಕ್ರಮದ ಸಂಶೋಧನಾ ಸಹಾಯಕಿ ಫಾತಿಮಾ ಆರ್‌.ಎಫ್‌., ಮಗು ಮತ್ತು ಕಾನೂನು ಕೇಂದ್ರದ ಸುಧಾ ಎಸ್‌., ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಶುಶ್ರೂಷಕಿಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next