Advertisement

ಪ್ರಗತಿ ಪ್ರತಿಮೆ ಲೋಕಾರ್ಪಣೆ ಜನಮಾನಸದ ಕಾರ್ಯಕ್ರಮವಾಗಲಿ: ಮೋದಿ ಸೂಚನೆ

03:37 PM Oct 27, 2022 | Team Udayavani |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನಿರ್ಮಾಣಗೊಂಡಿರುವ ನಾಡಪ್ರಭು ಕೆಂಪೇಗೌಡ 108 ಅಡಿ ಎತ್ತರದ ಪ್ರಗತಿ ಪ್ರತಿಮೆ ಲೋಕಾರ್ಪಣೆ ಜನ ಮಾನಸದ ಕಾರ್ಯಕ್ರಮವಾಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಅವರು ಕಾರ್ಯಕ್ರಮದ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.

ನ.11ರಂದು ರಾಜ್ಯಕ್ಕೆ ಭೇಟಿ ನೀಡುವ ಪ್ರಧಾನಮಂತ್ರಿಯವರು ಒಟ್ಟು ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಂದು ಬೆಳಗ್ಗೆ 10ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರಧಾನಿ ಅವರು, ಅಲ್ಲಿಂದ ನೇರವಾಗಿ ಮಂಡ್ಯ ಜಿಲ್ಲೆಯ ಕೆಆರ್‍ಎಸ್‍ಗೆ ತೆರಳಲಿದ್ದಾರೆ. ಅಲ್ಲಿ ಮೈಸೂರಿನಿಂದ ಚನ್ನೈ ನಡುವಿನ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ.

ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಲಿರುವ ಪ್ರಧಾನಿ ಅವರು ಅಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ 2 ಉದ್ಘಾಟಿಸಿ ಬಳಿಕ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

ಈ ಕಾರ್ಯಕ್ರಮದ ಕುರಿತು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದರು.

Advertisement

ನಂತರ ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ ಸೇರಿದಂತೆ ಇತರರೊಂದಿಗೆ ಸಿಎಂ ಪೂರ್ವ ಸಿದ್ಧತಾ ಸಭೆ ನಡೆಸಿದರು.

ಪ್ರಧಾನಿಯೊಂದಿಗಿನ ವಿಡಿಯೋ ಕಾನ್ಪರೆನ್ಸ್‍ನಲ್ಲಿ ಮುಖ್ಯಮಂತ್ರಿಯವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯದ್ಭುತವಾಗಿ ನಿರ್ಮಾಣಗೊಂಡಿರುವ ಪ್ರತಿಮೆ ಮತ್ತು ಅದರ ಸುತ್ತಮುತ್ತ ನಿರ್ಮಿಸಲಾಗಿರುವ 21 ಎಕರೆ ವಿಸ್ತೀರ್ಣದ ಥೀಮ್ ಪಾರ್ಕ್ ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ನಡೆಯಬೇಕು. ಯಾವುದೇ ಲೋಪ-ಗೊಂದಲಗಳು ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಕ್ರಮಕ್ಕೆ ಸುಮಾರು ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಕೆಂಪೇಗೌಡರ ಪ್ರಗತಿ ಪ್ರತಿಮೆ ಗುಜರಾತ್‍ನ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಐಕ್ಯತಾ ಪ್ರತಿಮೆ ಮಾದರಿಯಲ್ಲೇ ಲೋಕಮಾನ್ಯತೆ ಪಡೆಯಲಿದ್ದು, ಕಾರ್ಯಕ್ರಮ ನಾಡಿನ ಅಸ್ಮಿತೆಯನ್ನು ಬಿಂಬಿಸುವ ಮಾದರಿಯಲ್ಲಿ ಆಯೋಜನೆಗೊಳ್ಳಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಮೈಸೂರಿನಲ್ಲಿ 130 ಕೋಟಿ ರೂ. ವೆಚ್ಚದ ವಿಶೇಷ ಕ್ಯಾನ್ಸರ್ ಆಸ್ಪತ್ರೆ: ಸಚಿವ ಸುಧಾಕರ್

ಬಿಜೆಪಿಯ ಪ್ರತಿಯೊಬ್ಬ ಶಾಸಕರಿಗೂ ತಮ್ಮ ಕ್ಷೇತ್ರದಿಂದ ಕನಿಷ್ಠ 25 ಸಾವಿರ ಮಂದಿಯನ್ನು ಕರೆತರಬೇಕು, ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ ಕನಿಷ್ಠ ಎರಡು ಸಾವಿರ ಮಂದಿಯಾದರೂ ಆಗಮಿಸಬೇಕು ಎಂಬ ಸೂಚನೆಯನ್ನು ಈಗಾಗಲೇ ರವಾನಿಸಲಾಗಿದೆ.

ಕಾರ್ಯಕ್ರಮದ ಪೂರ್ವಭಾವಿ ತಯಾರಿಯಾಗಿ ನಾಡಿನಾದ್ಯಂತ ಮೃತಿಕ ಸಂಗ್ರಹ ಅಭಿಯಾನ ಹೆಚ್ಚು ಜನ ಮನ್ನಣೆಗೆ ಪಾತ್ರವಾಗಿದ್ದು, ಕಾರ್ಯಕ್ರಮಕ್ಕೆ ಪೂಜ್ಯನೀಯ ಭಾವನೆ ಮೂಡಿಸಿದೆ. ಹೀಗಾಗಿ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಪ್ರತಿಮೆ ಅನಾವರಣದಿಂದ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ರಾಜಕೀಯವಾಗಿ ಲಾಭವಾಗುವ ಲೆಕ್ಕಾಚಾರಗಳು ಕೇಳಿ ಬಂದಿವೆ. ಕನಿಷ್ಠ 25ರಿಂದ 30 ಸ್ಥಾನಗಳನ್ನು ಗೆಲ್ಲುವ ಮೂಲಕ ಒಕ್ಕಲಿಗ ಸಮುದಾಯದ ಅಪತ್ಯ ಇರುವ ಹಳೆ ಮೈಸೂರು ಭಾಗದಲ್ಲೂ ಬಿಜೆಪಿ ಪ್ರಬಲವಾಗಿ ಹೊರ ಹೊಮ್ಮಲಿದ್ದು, ಭಾರೀ ಬಹುಮತದೊಂದಿಗೆ ಮರಳಿ ಅಕಾರಕ್ಕೆ ಬರುವ ಲೆಕ್ಕಾಚಾರ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಪುಷ್ಠಿ ನೀಡಲಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next