ಬೆಂಗಳೂರು: ಪ್ರಾದೇಶಿಕ ನೆಲೆಗಟ್ಟಿನಲ್ಲಿ ಕಾವ್ಯ ರಚನೆ ಹಾಗೂ ಅನುವಾದ ಕಾರ್ಯ ಚಟುವಟಿಕೆಗಳು ನಡೆಯಬೇಕು ಎಂದು ಲೇಖಕ ಡಾ.ಕೆ.ಪುಟ್ಟಸ್ವಾಮಿ ಹೇಳಿದರು. ಬಿಎಂಶ್ರೀ ಪ್ರತಿಷ್ಠಾನ ನರಸಿಂಹರಾಜ ಕಾಲೋನಿಯ ಎಂವಿಸೀ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ “ಶಾ. ಬಾಲುರಾವ್ ಯುವ ಬರಹಗಾರ ಮತ್ತು ಅನುವಾದ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಪ್ರಾದೇಶಿಕ ಭಾಷೆಗಳ ವೈವಿಧ್ಯತೆ, ಅರ್ಥ ಸಾಧ್ಯತೆ ಹಾಗೂ ಅಭಿವ್ಯಕ್ತಿ ಗುರುತಿಸಿಕೊಳ್ಳುವ ಮೂಲಕ ಕಥೆ, ಕಾದಂಬರಿಗಳು ರಚನೆಯಾಗಬೇಕು ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಪ್ರಾದೇಶಿಕತೆಯ ನೆಲೆಗಟ್ಟಿನಲ್ಲಿ ಕಥನ ಕಟ್ಟುವ ಕ್ರಮ ಮರೆಯಾಗುತ್ತಿದೆ. ಹೀಗಾಗಿ ಯುವ ಬರಹಗಾರರು, ಕಥೆಗಾರರು ಹಾಗೂ ಅನುವಾದಕರು ಪ್ರಾದೇಶಿಕತೆಯ ನೆಲೆಗಟ್ಟಿನಲ್ಲಿ ಕಥನ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಭಾಷಾಂತರವು ಸಾಹಿತ್ಯ ಚಟುವಟಿಕೆ ಮಾತ್ರವಾಗಿರದೆ ಸಾಂಸ್ಕೃತಿಕ ಕಾರ್ಯವಾಗಿದೆ. ಭಾಷಾಂತರದ ಮೂಲಕ ಕನ್ನಡ ಸಾಹಿತ್ಯ ಮಾತ್ರವಲ್ಲದೆ ಕನ್ನಡದ ಸಂವೇದನೆ, ಶಬ್ದಕೋಶ, ಅರ್ಥ ಸಾಧ್ಯತೆಗಳನ್ನು ವಿಸ್ತರಿಸುವ ಬಹುದೊಡ್ಡ ಚಟುವಟಿಕೆಗಳನ್ನು ಶಾ. ಬಾಲುರಾವ್ ತೋರಿಸಿಕೊಟ್ಟಿದ್ದಾರೆ. ನವದೆಹಲಿಯಲ್ಲಿ ಇದ್ದುಕೊಂಡು ಅನುವಾದದ ಮೂಲಕ ಕನ್ನಡದ ಶ್ರೀಮಂತಿಕೆಯನ್ನು ವಿಸ್ತರಿಸಿದ್ದರು.
ಅಂತಹ ಮಹನೀಯರ ಹೆಸರಿನಲ್ಲಿ ಯುವ ಬರಹಗಾರ ಹಾಗೂ ಅನುವಾದ ಪ್ರಶಸ್ತಿ ನೀಡುವ ಮೂಲಕ ಸಾಹಿತಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಲೇಖಕ ಸ್ವಾಮಿ ಪೊನ್ನಾಚಿ ಮಾತನಾಡಿ, ಪ್ರಸಸ್ತಿ ಪಡೆಯಲು ಲಾಬಿ ನಡೆಸುತ್ತಿರುವ ಸಂದರ್ಭದಲ್ಲಿಯೂ ಬಿಎಂಶ್ರೀ ಪ್ರತಿಷ್ಠಾನ ಪಾರದರ್ಶಕವಾಗಿ ಆಯ್ಕೆ ಮಾಡಿದೆ. ಇತಂಹ ಪ್ರಶಸ್ತಿಗಳು ಕಾವ್ಯ ರಚನೆಗೆ ಪ್ರೋತ್ಸಾಹಿಸುತ್ತವೆ ಎಂದು ಹೇಳಿದರು.
ಇದೇ ವೇಳೆ ಲೇಖಕ ಸ್ವಾಮಿ ಪೊನ್ನಾಚಿ ಅವರಿಗೆ “ಶಾ ಬಾಲುರಾವ್ ಯುವ ಬರಹಗಾರ’ ಪ್ರಶಸ್ತಿ ಹಾಗೂ 25 ಸಾವಿರ ರೂ. ನಗದು, ಸಂತೆ ನಾರಾಯಣ ಸ್ವಾಮಿ ಅವರಿಗೆ “ಶಾ ಬಾಲುರಾವ್ ಅನುವಾದ’ ಪ್ರಶಸ್ತಿ ಹಾಗೂ 20 ಸಾವಿರ ರೂ. ನಗದು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಆರ್.ಲಕ್ಷ್ಮೀನಾರಾಯಣ, ಗೌರವಾಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ, ಪ್ರಾಧ್ಯಾಪಕ ಎಸ್.ಎಲ್. ಮಂಜುನಾಥ, ಆಯ್ಕೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.