Advertisement
ಸುಪ್ರೀಂ ಕೋರ್ಟ್ ಇತ್ತೀಚಿನ ತನ್ನ ಹಲವು ತೀರ್ಪುಗಳಲ್ಲಿ ಖಾಸಗಿತನದ ಹಕ್ಕುಗಳನ್ನು ಮತ್ತು ಘನತೆಯನ್ನು ಎತ್ತಿ ಹಿಡಿದಿರುವುದು ತಿಳಿದ ವಿಷಯ. ಚಿಕ್ಕದಾಗಿ ಹೇಳುವುದಾದರೆ ಹಿಂದೆ ಕ್ರಿಮಿನಲ್‌ಎಂದು ಭಾವಿಸಲಾಗಿದ್ದ ಪರ ಸಂಗಗಳನ್ನು ಸುಪ್ರೀಂ ಕೋರ್ಟ್ ವೈಯಕ್ತಿಕ ಘನತೆಯ, ಮೂಲಭೂತ ಹಕ್ಕುಗಳ ದೃಷ್ಟಿಯಿಂದ ನೋಡಿ, ಅಂತಹ ನಡವಳಿಕೆಯನ್ನು ಕಾನೂನು ಬಾಹಿರವಲ್ಲ ಎಂದು ಘೋಷಿಸಿದೆ. ದೇಶದಲ್ಲಿ ಮಾನವ ಘನತೆಯನ್ನು ಎತ್ತಿ ಹಿಡಿಯುವ ದೃಷ್ಟಿಯಲ್ಲಿ ಈ ತೀರ್ಪುಗಳು ಮೈಲುಗಲ್ಲುಗಳೇ ಸರಿ.
Related Articles
Advertisement
ಸಮಾಜಕ್ಕೆ ಗೊತ್ತಿತ್ತು. ಏನೆಂದರೆ ಮನುಷ್ಯನೊಳಗೆ ಒಂದು ಮೃಗೀಯತೆ ಇರುತ್ತದೆ. ಇಂತಹ ಮೃಗೀಯತೆಯನ್ನು ಮತ್ತು ಅನಾರ್ಕಿಸಂ ಅನ್ನು ನಿಯಂತ್ರಿಸಲು ಇವೆಲ್ಲ ಕಟ್ಟು ಪಾಡುಗಳು ಅಗತ್ಯ ಎನ್ನುವುದು. ಈ ರೀತಿಯ ಸಾಂಸ್ಕೃತಿಕ ಬಂಧನಗಳಿಂದಾಗಿಯೇ, ಸಮಾಜಗಳು ತಮ್ಮನ್ನು ತಾವು ಸಾವಿರಾರು ವರ್ಷಗಳ ಕಾಲ ಮುನ್ನಡೆಸಿಕೊಳ್ಳತ್ತ ಬಂದಿವೆ. ಚೌಕಟ್ಟುಗಳು ವ್ಯಕ್ತಿಗೆ ಧರ್ಮಕ್ಕೆ ಅಥವಾ ಸಮಾಜಕ್ಕೆ ಮತ್ತು ಆ ಪ್ರದೇಶಕ್ಕೆ ಸಂಬಂಧಿಸಿ, ಆ ಸಮಯದ ಬೇಡಿಕೆಗಳಿಗೆ ಸ್ಪಂದಿಸಿ ಲಿಬರಲ್ ಆಗಿ ಅಥವಾ ಕಠಿಣವಾಗಿ ಪರಿವರ್ತನೆಯಾಗುತ್ತಿದ್ದವು. ಯಾವ ರೀತಿಯ ನಡವಳಿಕೆ ಸಂಸ್ಕೃತಿಯ ಒಳಗಿನದು ಮತ್ತು ಯಾವ ರೀತಿಯದು ಸಂಸ್ಕೃತಿಯ ಹೊರಗಿನದು ಎನ್ನುವುದರ ಕುರಿತ ವ್ಯಾಖ್ಯೆ ಬಹಳ ಸ್ಪಷ್ಟವಾಗಿ ಇರುತ್ತಿತ್ತು.
ಭಾರತೀಯ ಸಮಾಜದ ಸಂದರ್ಭದಲ್ಲಿಯಂತೂ ಸಮಾಜ ಸುಸ್ಥಿರವಾಗಿ, ಸಾವಿರಾರು ವರ್ಷಗಳ ಕಾಲ ನಿಂತು ತನ್ನ ಅನನ್ಯತೆಯನ್ನು ಕಾಯ್ದುಕೊಂಡು ಬಂದ ಕಾರಣ ಸಂಸ್ಕೃತಿಯೊಂದರ ಕುರಿತಾಗಿನ ಸ್ಪಷ್ಟವಾದ ಅರಿವು. ಪಾಶ್ಚಿಮಾತ್ಯ ರಾಷ್ಟ್ರಗಳು ಅನುಭವಿಸಿದ ಸಾಮಾಜಿಕ ಮತ್ತು ವೈಯಕ್ತಿಕ ಅಲ್ಲೋಲ ಕಲ್ಲೋಲ ಇಲ್ಲಿ ಹುಟ್ಟಿಕೊಳ್ಳದಿರುವುದಕ್ಕೆ ಕಾರಣ ಇದು. ಉದಾಹರಣೆಗೆ ಪಶ್ಚಿಮದಲ್ಲಿ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಹುಟ್ಟಿಕೊಂಡ ವಿಪರೀತ ರೀತಿಯ, ವ್ಯಕ್ತಿ ಆಧರಿತ ಅವಂಟ್‌ಗಾರ್ಡ್ ಚಳವಳಿಗಳು ಅಂದರೆ ನಂಬಿಗೆಗಳನ್ನು ಬುಡ ಮೇಲು ಮಾಡುವ ಚಳುವಳಿಗಳು ಹುಟ್ಟಿ ಕೊಂಡ ಕಾರಣವೂ ಇದು. ಏನೆಂದರೆ ಪಾಶ್ಚಾತ್ಯ ಸಮಾಜ ತನ್ನ ಸಂಸ್ಕೃತಿಯ ಕವಚವನ್ನು ಐತಿಹಾಸಿಕ ಕಾರಣಗಳಿಂದಾಗಿ ಕಳೆದುಕೊಂಡು ನಿಂತು ಬಿಟ್ಟಿದ್ದು ಕಾಮು ಮತ್ತು ಸಾತ್ರೆìಯಂತಹ ತತ್ವಜ್ಞಾನಿಗಳ “”ಬದುಕೇ ಅರ್ಥಹೀನವಾದುದು, ಮಾನವ ಕೇವಲ ತಬ್ಬಲಿ” ಇತ್ಯಾದಿ ವಿಚಾರಗಳನ್ನು ಹೊಂದಿದ ಅಸ್ತಿತ್ವವಾದಿ ತತ್ವಜ್ಞಾನ ಪಶ್ಚಿಮದಲ್ಲಿ ಅದೇ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದಕ್ಕೆ ಕಾರಣವೂ ಅದು.
ನಮ್ಮ ದೇಶದಲ್ಲಿ ಅಂತಹ ವಿಪರೀತವಾದ ವೈಯಕ್ತಿಕತೆಯನ್ನು ಪ್ರತಿಪಾದಿಸುವ ವಿಚಾರಗಳು ಹುಟ್ಟಿಕೊಳ್ಳದಿರುವುದಕ್ಕೆ ಕಾರಣ ನಮ್ಮಲ್ಲಿ ಸಂಸ್ಕೃತಿಯ ಪರಿಕಲ್ಪನೆ ಬಲವಾಗಿಯೇ ಇದ್ದಿದ್ದು. ನಮ್ಮಲ್ಲಿ ಸಂಸ್ಕೃತಿಯೇ ಬದುಕಿಗೆ ಅರ್ಥವನ್ನು ನೀಡುತ್ತಿತ್ತು. ನೀಡುತ್ತದೆ. ಬದುಕು ಅರ್ಥಹೀನ ಎಂಬ ಕಲ್ಪನೆಯ ಮನಸ್ಸಿಗೆ ಬರದಂತೆ ಅಥವಾ ವ್ಯಕ್ತಿಗಳ ವೈಯಕ್ತಿಕ ಎಕ್ಸೆಂಟ್ರಿಸಿಟಿಸ್‌ಗಳೇ ಮೇಲಾಗಿ ಹೋಗಿ ಸಮಾಜಗಳು ನಾಶವಾಗಿ ಹೋಗದಂತೆ ರಕ್ಷಿಸಿಕೊಂಡು ಬಂದಿದ್ದು ಸಂಸ್ಕೃತಿ.
ಹಾಗೆಂದು ಸಾಂಸ್ಕೃತಿಕ ಚೌಕಟ್ಟುಗಳು ಹಲವೊಮ್ಮೆ ದೋಷಪೂರಿತವಾಗಿ ಇದ್ದಿದ್ದೂ ಇಲ್ಲವೆಂದೇನೂ ಅಲ್ಲ. ಚೌಕಟ್ಟುಗಳು ಗೊಡ್ಡು ಸಂಪ್ರದಾಯಗಳಾಗಿ ಪರಿವರ್ತನೆಯಾಗಿದ್ದೂ ಇದೆ. ವಿಶೇಷವಾಗಿ ಮಹಿಳೆಯರನ್ನು ಮತ್ತು ಹಿಂದುಳಿದ ವರ್ಗದವರನ್ನು, ಸವರ್ಣೀಯರನ್ನು ಭಾರತವನ್ನೂ ಹಿಡಿದು ಜಗತ್ತಿನಾದ್ಯಂತ ಸಂಸ್ಕೃತಿಗಳು ಶೋಷಿಸಿದ್ದೂ ಇದೆ. ಚೌಕಟ್ಟುಗಳ ವಿರುದ್ಧವೇ ಜನ ಎದ್ದು ನಿಂತು ಹೋರಾಟ ಮಾಡಬೇಕಾದ ಪರಿಸ್ಥಿತಿಯೂ ಇತಿಹಾಸದಲ್ಲಿ ಪದೇ ಪದೇ ನಿರ್ಮಾಣವಾಗುತ್ತಲೇ ಹೋಗಿದೆ. ಹೀಗಾಗಿ ಸಂಸ್ಕೃತಿಗಳು ತಮ್ಮ ಹರಿವಿನ ದಾರಿಗಳನ್ನು ಪದೇ ಪದೇ ಬದಲಿಸಿಕೊಂಡಿವೆ. ಆದರೂ ಒಟ್ಟಾರೆಯಾಗಿ ನೋಡಿದರೆ ವ್ಯಕ್ತಿ ಮತ್ತು ಸಮುದಾಯಗಳ ನಡುವೆ ಅನುಬಂಧವೊಂದನ್ನು ಸೃಷ್ಟಿಸಿದ್ದು ಸಂಸ್ಕೃತಿ. ಸಂಸ್ಕೃತಿ ಇಲ್ಲದಿರುವುದಕ್ಕಿಂತಲೂ ಇರುವುದು ಒಳ್ಳೆಯದು. ಸಂಸ್ಕೃತಿಯ ರಾಜಕೀಯ ಮಹತ್ವ ಕೂಡ ನಮಗೆ ಗೊತ್ತಿದೆ. ಏನೆಂದರೆ ಒಂದು ಸಮಾಜ ತನ್ನ ಸಂಸ್ಕೃತಿಯನ್ನು ಕಳೆದುಕೊಂಡು ಕುಳಿತರೆ ಅದು ರಾಜಕೀಯವಾಗಿ ಕೂಡ ಅಶಕ್ತವಾಗಿ ಹೋಗುತ್ತದೆ ಎನ್ನುವುದು. ವಿಷಯ ಮೆಕಾಲೆಯಂತವರಿಗೆ ಗೊತ್ತಿತ್ತು. ಅದಕ್ಕೆ ಭಾರತವನ್ನು ದೀರ್ಘಕಾಲ ಆಳಲು ಸಾಧ್ಯವಾಗುವುದು ಜನರನ್ನು ಸಂಸ್ಕೃತಿ ಹೀನರನ್ನಾಗಿಸುವುದರ ಮೂಲಕ ಮಾತ್ರ ಸಾಧ್ಯ ಎಂದು ಮೆಕಾಲೆ ಹಾಗೂ ಅಂಥವರು ಯೋಚಿಸಿದ್ದು. ಯೋಚಿಸಿದ್ದು ಅಷ್ಟೇ ಅಲ್ಲ, ನಮ್ಮನ್ನು ಸಂಸ್ಕೃತಿ ಹೀನರನ್ನಾಗಿಸಲು ಪ್ರಯತ್ನಿಸಿದ್ದು ಕೂಡ. ಪಾಶ್ಚಾತ್ಯೀಕರಣದ ವಿರುದ್ಧ ನಮ್ಮ ಆತಂಕವೂ ಅದೇ. ಏನೆಂದರೆ ಅದು ನಮ್ಮ ಸಂಸ್ಕೃತಿಯ ಬೇರನ್ನೇ ಕಿತ್ತೆಸೆದೀತು ಎನ್ನುವುದು.
ಇಲ್ಲಿ ಒಂದು ಮಾತನ್ನು ಹೇಳಿಕೊಳ್ಳಬೇಕು. ಏನೆಂದರೆ ಸಂಸ್ಕೃತಿಯನ್ನು ಒಂದು ಜಡ ವ್ಯವಸ್ಥೆಯನ್ನಾಗಿ ನಾವು ಗ್ರಹಿಸಬಾರದು. ಅದು ಒಂದು ಶೋಷಣೆಯ ವಿಧಾನವಾಗ ಬಾರದು. ಒಂದು ಚೈತನ್ಯಶೀಲವಾಗಿ ಹರಿಯುವ ನದಿಯಂತೆ ಇರಬೇಕು ಸಂಸ್ಕೃತಿ.
ಈ ಹಿನ್ನೆಲೆಯಲ್ಲಿ ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಧನಾತ್ಮಕವಾಗಿ ಸ್ವೀಕರಿಸಬೇಕು ಎಂದೇ ಭಾವನೆ. ಇಲ್ಲಿ ಕೆಲವು ಸಮಕಾಲೀನ ಆತಂಕಗಳಿವೆ. ಮುಖ್ಯವಾದದ್ದು ಸಾಮಾಜಿಕ ಆರೋಗ್ಯವನ್ನು ಧಿಕ್ಕರಿಸುತ್ತಿರುವಂತೆ ಕಾಣುತ್ತಿರುವ ವೈಯಕ್ತಿಕತೆ. ಇಂದು ವಿಪರೀತವೆನಿಸುವ ಖಾಸಗಿತನದ ಬಯಕೆಗಳು ಹೆಚ್ಚಾಗುತ್ತಿವೆ ಎಂಬ ಭಾವನೆಯೂ ಇದೆ. ವಿವಾಹಗಳು ಮುರಿದು ಬೀಳಲು, ಕುಟುಂಬಗಳು ಒಡೆದು ಹೋಗಲು, ವಿಪರೀತ ವೈಯಕ್ತಿಕತೆಯ ಬಯಕೆ ಕಾರಣ ಎಂಬುದು ನಮಗೆ ಗೊತ್ತು. “”ತಂದೆ-ತಾಯಿಯರಿಗೆ ಬೇಸರವಾದರೇನಂತೆ ನಾನು ಕುಡಿಯುವವನೇ. ಅದು ನನ್ನ ವೈಯಕ್ತಿಕತೆ!” ಎಂದು ಹುಡುಗನೊಬ್ಬ ಹೇಳಿದರೆ, ಚಿಕ್ಕ ಪುಟ್ಟ ಕಾರಣಗಳಿಗೂ ಡೈವೋಸ್Õ ನೀಡಿ “”ಅದು ನನ್ನ ವೈಯಕ್ತಿಕ ವಿಚಾರ”ಎಂದು ಹುಡುಗಿಯೊಬ್ಬಳು ಹೇಳಬಹುದಾಗಿದೆ.
ಇತ್ತೀಚೆಗೆ ಸ್ತ್ರೀ ಸ್ವಾತಂತ್ರ್ಯದ ಸಂಬಂಧದಲ್ಲಿ ಮುಜುಗರವೆನಿಸುವ ವಿಪರೀತ ಹೇಳಿಕೆಗಳು ಪರ ಮತ್ತು ವಿರೋಧಿ ಬಣಗಳೆರಡರಿಂದಲೂ ಹೊರಬಿದ್ದಿದ್ದವು. ಬಯಸಿದ್ದು ಏನು ಬೇಕಾದರೂ ತಿನ್ನುವುದು, ಕುಡಿಯುವುದು, ಬಯಸಿದಂತೆ ಬದುಕುವುದು ವ್ಯಕ್ತಿಯೊಬ್ಬನ ವೈಯಕ್ತಿಕತೆಯಾದರೂ ಅದನ್ನೇ ಸಾರ್ವಜನಿಕವಾಗಿ ಪ್ರದರ್ಶಿಸಲು ಹೋಗಿ ಬೇರೆಯುವರ ಮನಸ್ಸಿಗೆ ನೋವುಂಟಾಗುವ ಸಂದರ್ಭ ಗಳನ್ನೂ ನೋಡಿದ್ದೇವೆ.
ಬಹುಶಃ ನಮಗೆ ಒಂದು ಸಾಂಸ್ಕೃತಿಕ ಚೌಕಟ್ಟನ್ನು ಕಾಯ್ದಿಟ್ಟುಕೊಳ್ಳುವ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಸಂಸ್ಕೃತಿ ಒಂದು ಸಮಾಜದ ಜೀವಾಳ. ವೈಯಕ್ತಿಕತೆಯನ್ನು ಪಾಶ್ಚಾತ್ಯ ಮಾದರಿಯಲ್ಲಿ ನಾವೂ ವಿಂಜೃಭಿಸುತ್ತ ಹೋದರೆ ನಮ್ಮ ದೇಶ ಮತ್ತು ಸಮಾಜಕ್ಕೆ ಅಪಾಯ ಉಂಟಾಗುತ್ತದೆ. ವ್ಯಕ್ತಿ ಮತ್ತು ಸಮಾಜದ ನಡುವಿನ ಸಂಬಂಧದ ಸೇತುವೆ ಕುಸಿದು ಬೀಳುತ್ತದೆ ಎಂದೇ ಅನಿಸುತ್ತದೆ. ನಾನು ಹೇಳುತ್ತಿರುವುದು, ಜಡವಾದ ರೀತಿಯ ಸಂಸ್ಕೃತಿಯ ಕುರಿತಾಗಿಯಲ್ಲ. ಗಾಂಧೀಜಿ ಕಲಿಸಿಕೊಟ್ಟಂತಹ ಪರಂಪರೆಯ ಶ್ರೇಷ್ಟ ಅಂಶಗಳನ್ನು ಹಾಗೆಯೇ ಆಧುನಿಕತೆಯ ಅಂಶ ಗಳನ್ನು ಮಿಳಿತವಾಗಿಸಿಕೊಳ್ಳುತ್ತ ಹೋಗುವ ಹರಿಯುವ ನೀರಿನಂತಹ ಸಂಸ್ಕೃತಿಯ ಕುರಿತು.
ವೈಯಕ್ತಿಕತೆ ವಿಕೃತಿಯಾಗಬಾರದಂತೆ ಕಾಯ್ದುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.
ಡಾ.ಆರ್.ಜಿ. ಹೆಗಡೆ