ದೇವನಹಳ್ಳಿ: ಗ್ರಾಮೀಣ ಪ್ರದೇಶದ ಕಟ್ಟಕಡೆಯ ಮಗುವಿಗೂ ಸಹ ಗುಣಮಟ್ಟದ ಇಂಗ್ಲಿಷ್ ಮಾಧ್ಯಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದಲೇ ಸರ್ಕಾರ ಈ ಯೋಜನೆ ಕೈಗೊಂಡಿದೆ. ಪೊಷಕರು ಇನ್ನಾದರೂ ಖಾಸಗಿ ವ್ಯಾಮೋಹ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಶಾಸಕ ಎಲ್.ಎನ್. ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಕಾರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 1ನೇ ತರಗತಿ ಆಂಗ್ಲ ಮಾಧ್ಯಮ ಪ್ರಾರಂಭೋತ್ಸವ ಮತ್ತು ಕಾರಹಳ್ಳಿ ಗ್ರಾಪಂನಿಂದ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್ ವಿತರಿಸಿ ಮಾತನಾಡಿದರು.
ದೂರದೃಷ್ಟಿಯಿಂದ ಇಂಗ್ಲಿಷ ಮಾಧ್ಯಮ ಆರಂಭ: ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಲು ಭಾರೀ ಪ್ರಮಾಣದ ಶುಲ್ಕ, ಡೊನೇಷನ್ ಹಾವಳಿಗೆ ಸಿಲುಕಿ ಸಂಕಷ್ಟ ಎದುರಿಸುತ್ತಾರೆ. ಪೋಷಕರ ಇಂತಹ ಸಂಕಷ್ಟವನ್ನು ತಪ್ಪಿಸುವುದಕ್ಕೋಸ್ಕರ ಹಾಗೂ ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯುವುದಕ್ಕಾಗಿ ಸಿಎಂ ಕುಮಾರಸ್ವಾಮಿ ಈ ಯೋಜನೆ ಜಾರಿಗೊಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳು ಸಹ ಇಂಗ್ಲೀಷ್ ಕಲಿತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಂತೆ ಆಗಬೇಕು ಎಂಬ ದೂರದೃಷ್ಟಿಯಿದೆ ಎಂದು ಹೇಳಿದರು.
ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಒತ್ತಾಯ: ಮುಂದಿನ ದಿನಗಳಲ್ಲಿ ಕಾರಹಳ್ಳಿ ಗ್ರಾಮದವರು ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಒತ್ತಾಯ ಮಾಡಿದ್ದಾರೆ. ಸರ್ಕಾರದ ಹಂತದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಾಸಕರ ಅನುದಾನದಲ್ಲಿ ಶಾಲೆಗೆ ವಾಹನ ಸೌಕರ್ಯ ಮಾಡಲು ಕಾನೂನಿನಲ್ಲಿ ಅವಕಾಶವಿದ್ದರೆ ಕೂಡಲೇ ಮಾಡಿಕೊಡಲಾಗುತ್ತದೆ. ಇಲ್ಲದಿದ್ದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಎಸ್‌ಆರ್ ಅನುದಾನದಲ್ಲಿ ಶಾಲಾ ವಾಹನ ಒದಗಿಸಿಕೊಡಲು ಯೋಜನೆ ರೂಪಿಸಲಾಗುತ್ತದೆ ಎಂದು ಹೇಳಿದರು.
ಆಂಗ್ಲ ಮಾಧ್ಯಮ ಅನಿವಾರ್ಯ: ತಾಪಂ ಸದಸ್ಯ ಶ್ರೀನಿವಾಸ್ ಮಾತನಾಡಿ, ಈ ದಿನ ಸ್ಮರಣಾರ್ಥಕ ದಿನವಾಗಿದೆ. ಕಳೆದ 20 ತಿಂಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದ್ದರು. ಆದರೆ ಸಂಪೂರ್ಣವಾಗಿ ಆಗಿರಲಿಲ್ಲ. ಇದೀಗ ಎಲ್ಲಾ ವಿರೋಧಗಳಲ್ಲೂ ಸಹ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಅನಿವಾರ್ಯವಾಗಿದೆ ಎಂದು ಮನಗಂಡು ಅನುಷ್ಠಾನಗೊಳಿಸಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷ ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಜೆಡಿಎಸ್ ಮಹಿಳಾ ಘಟಕ ಅಧ್ಯಕ್ಷೆ ಮೀನಾಕ್ಷಿ ಮುನಿಕೃಷ್ಣಪ್ಪ, ಗ್ರಾಪಂ ಅಧ್ಯಕ್ಷ ದೇವರಾಜ್, ಮಾಜಿ ಅಧ್ಯಕ್ಷ ರಾಜೇಂದ್ರ, ಕಾರಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಬೆ„ರೇಗೌಡ, ಮಾಜಿ ಸದಸ್ಯರಾದ ಶಶಿಕುಮಾರ್, ಟಿ.ಬೆ„ರೇಗೌಡ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಆರ್.ಮಂಜುನಾಥ್, ಎಪಿಎಂಸಿ ಮಾಜಿ ಸದಸ್ಯ ಮುನಿರಾಜು, ನರಸಿಂಹ ಮೂರ್ತಿ, ಜಯರಾಮ್, ಸದಸ್ಯರಾದ ನಾರಾಯಣಮ್ಮ, ಇಂದ್ರಮ್ಮ, ನಾರಾಯಣಸ್ವಾಮಿ, ಮುಖಂಡರಾದ ಮುನಿಕೃಷ್ಣ, ರಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಮುನೇಗೌಡ, ಪಿಡಿಒ ಬೀರೇಶ್, ಕಾರ್ಯದರ್ಶಿ ರಾಜೇಶ್ ಇದ್ದರು.