ಹುಬ್ಬಳ್ಳಿ: ರಾಜಕೀಯ ಆಸೆಗಾಗಿ ಸಂಘಟನೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಈ ಸಂಘಟನೆಗಳನ್ನು ಒಡೆಯುವಲ್ಲಿ ರಾಜಕಾರಣಿಗಳು ನಿರಂತರ ಪ್ರಯತ್ನ ನಡೆಸಿದ್ದಾರೆ. ರಾಜಕೀಯ ಆಸೆ-ಆಮಿಷ ಹಾಗೂ ಒತ್ತಡಗಳಿಗೆ ಸಂಘದ ಹಿತಾಸಕ್ತಿ ಬಲಿ ಕೊಡಬಾರದು ಎಂದು ಮಾಜಿ ಸಚಿವ ಪಿ.ಸಿ. ಸಿದ್ದನಗೌಡರ ಹೇಳಿದರು.
ಸೋಮವಾರ ಶ್ರೀ ಸಿದ್ಧಾರೂಢಸ್ವಾಮಿ ಮಠದ ನಿರಂಜನ ಸಭಾಭವನದಲ್ಲಿ ಕರ್ನಾಟಕ ರೈತರ ಸಂಘ ಉದ್ಘಾಟಿಸಿ ಮಾತನಾಡಿದರು.
ಮೂರ್‍ನಾಲ್ಕು ದಶಕಗಳ ಹಿಂದೆ ರೈತ ಸಂಘಟನೆಗಳ ಹೋರಾಟವೆಂದರೆ ಇಡೀ ಆಡಳಿತ ವ್ಯವಸ್ಥೆ ನಡುಗುತ್ತಿತ್ತು. ಆದರೆ ಕಾಲ ಕ್ರಮೇಣ ಸಂಘಟನೆಗಳು ಚೂರಾದವು. ನಾಯಕರು ರಾಜಕೀಯ ಆಸೆಗಾಗಿ ಸಂಘಟನೆಗಳ ಹಿತಾಸಕ್ತಿ ಬಲಿಕೊಟ್ಟರು. ಕೆಲವರ ನಡುವೆ ಸಂಘರ್ಷ ಮೂಡಿಸಿ ಒಡೆಯುವ ಕೆಲಸಗಳನ್ನು ಅಂದಿನ ನಾಯಕರು ಮಾಡಿದರು. ಇಂದಿಗೂ ಕೂಡ ಇದು ಮುಂದುವರಿದ ಪರಿಣಾಮ ರೈತ ಸಂಘಟನೆಯ ಗಟ್ಟಿತನ ಸಡಿಲಗೊಂಡಿದೆ ಎಂದರು.
ಸರಕಾರಗಳು ಉದ್ಯಮಿಗಳ ಲಕ್ಷಾಂತರ ಕೋಟಿ ರೂ. ಸಾಲ ಮನ್ನಾ ಮಾಡಲು ಯಾವ ನಿಯಮಗಳೂ ಅಡ್ಡ ಬರುವುದಿಲ್ಲ. ಆದರೆ ರೈತರಿಗೆ ಸಾಲ, ಸೌಲಭ್ಯಗಳನ್ನು ನೀಡುವ ವಿಚಾರದಲ್ಲಿ ನೂರಾರು ನಿಯಮ ಹೇರಲಾಗುತ್ತದೆ. ಹಿಜಾಬ್, ವ್ಯಾಪಾರಿ ಮೇಲೆ ದಾಳಿ ಬೆಳವಣಿಗೆ ನೋಡಿದರೆ ರಾಜ್ಯ ಎತ್ತ ಸಾಗುತ್ತಿದೆ ಎನ್ನುವ ಚಿಂತೆ ಕಾಡುತ್ತಿದೆ. ಇಂತಹ ವಿಚಾರದಲ್ಲಿ ಸಂಘಟನೆಗಳು ಗಟ್ಟಿಯಾದ ಧ್ವನಿ ಎತ್ತಿದರೆ ಆಳುವ ಸರಕಾರಗಳು ಸರಿದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಹೂವಪ್ಪ ದಾಯಗೋಡಿ ಮಾತನಾಡಿ, ರೈತ ಸಂಘಟನೆಗಳು ನಿಜವಾಗಿ ರೈತರ ಸಮಸ್ಯೆಗಳಿಗ ಧ್ವನಿಯಾದರೆ ಸರಕಾರ ಕಣ್ಣು ತೆರೆಯುತ್ತದೆ. ಹಲವಾರು ಕಾರಣಗಳಿಂದ ರೈತ ಸಂಘಟನೆಗಳು ಶಕ್ತಿ ಕಳೆದುಕೊಂಡಿರಬಹುದು. ಆದರೆ ರೈತ ಶಕ್ತಿ ಹೆಚ್ಚಿಸಿಕೊಂಡಿದ್ದಾನೆ. ಇಂದಿಗೂ ರೈತ ಬೀದಿಗೆ ಇಳಿದರೆ ಎಂತಹ ಸರಕಾರದಲ್ಲೂ ನಡುಕ ಉಂಟಾಗುತ್ತದೆ ಎಂದರು.
ಸಂಘದ ರಾಜ್ಯಾಧ್ಯಕ್ಷ ಸಿದ್ದರಾಜ ಕುಂದಗೋಳ ಮಾತನಾಡಿ, ಸಂಘಟನೆಯನ್ನು ಯಾವುದೇ ಜಾತಿ, ಧರ್ಮ ಹಾಗೂ ಪಕ್ಷಕ್ಕೆ ಸೀಮಿತಗೊಳಿಸದೇ ರೈತ ಜಾತಿ ಹಾಗೂ ರೈತ ಧರ್ಮಕ್ಕಾಗಿ ಸಂಘಟಿಸಲಾಗುವುದು. ರೈತರ ಪ್ರತಿಯೊಂದು ಸಮಸ್ಯೆ ಬೇಡಿಕೆಗಳಿಗೆ ಗಟ್ಟಿ ಧ್ವನಿಯಾಗುತ್ತೇವೆ ಎಂದು ತಿಳಿಸಿದರು.
ನವಚೇತನ ಭಾರತ ಭೂಷಣ ಶ್ರೀ ಷಡಕ್ಷರಿ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಠದ ಧರ್ಮದರ್ಶಿ ಶಾಮಾನಂದ ಪೂಜೇರ, ರಮೇಶ ಮಹಾದೇವಪ್ಪನವರ, ಶಿವಯ್ಯ ಸರಣಚಾರಿ, ಶಿವಾನಂದ ಹೊಸಳ್ಳಿ ಇನ್ನಿತರರಿದ್ದರು.