Advertisement

ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಲಿ

05:31 PM Jul 13, 2022 | Team Udayavani |

ಬೀಳಗಿ: ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದನೆ ಮಾಡಬೇಕು. ಪಿಂಚಣಿ ಹಾಗೂ ವಿವಿಧ ಸೌಲಭ್ಯಗಳನ್ನು ಪಡೆಯುವ ಫಲಾನುಭವಿಗಳ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಅಯಾ ಇಲಾಖೆಯ ಅಧಿಕಾರಿಗಳು ಮಾಡಲಿದ್ದಾರೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ| ಮುರುಗೇಶ ಆರ್‌. ನಿರಾಣಿ ಹೇಳಿದರು.

Advertisement

ಗಲಗಲಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಂದು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಯೋಜನೆ ತಂದು ಅಭಿವೃದ್ಧಿ ಪಡಿಸಲಾಗಿದೆ. ಇನ್ನೂ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಮುಕ್ತವಾಗಿ ಬಂದು ಪರಿಹಾರ ಪಡೆದುಕೊಳ್ಳಬಹುದು. ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯ ದೊರಕಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನಸಂಪರ್ಕ ಸಭೆಯಲ್ಲಿ ನೂರಾರು ಸಮಸ್ಯೆಗಳ ಮಹಾಪೂರವೇ ಹರಿದು ಬಂದಿತು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ದೊರಕಿಸಿದರು. ಕೆಲವು ಸಮಸ್ಯೆಗಳಿಗೆ ಕೂಡಲೆ ಸ್ಪಂದನೆ ಮಾಡಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಗಲಗಲಿಯ ಹೊಳಬಸು ಬಾಳಶೆಟ್ಟಿ ಗ್ರಾಮದಲ್ಲಿನ ಸಮಸ್ಯೆ ಹಾಗೂ ಹಲವು ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರು. ಕೆಇಬಿಯ ಕೆಲವು ಕಂಬಗಳು ಶಿಥಿಲ ಹಾಗೂ ತಂತಿ ಜೋತು ಬಿದ್ದಿದ್ದು, ಅವುಗಳ ದುರಸ್ತಿ, ಆಸ್ಪತ್ರೆವರೆಗೆ ರಸ್ತೆ ದುರಸ್ತಿ, ಹೆಣ್ಣು ಮಕ್ಕಳ ಶಾಲಾ ದುರಸ್ತಿ, ರುದ್ರಭೂಮಿ ಅಭಿವೃದ್ಧಿ, ಮುಕ್ತಿವಾಹನ ಸೌಲಭ್ಯ, ಬಸ್‌ ನಿಲ್ದಾಣ, ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.

ಗಲಗಲಿ ಗ್ರಾಮ ಮುಳುಗಡೆಯಾಗಿದ್ದು ಇಲ್ಲಿಯ ಫಲಾನುಭವಿಗಳಿಗೆ ತಮ್ಮ ಮನೆಗಳ ಕೆಲವು ಹಕ್ಕು ಪತ್ರ ನೀಡಿಲ್ಲ. ಕೆಲವು ಹಕ್ಕುಪತ್ರದಲ್ಲಿ ಬೇರೆಯವರ ಹೆಸರಿನಲ್ಲಿವೆ. ಇದರಿಂದ ನೈಜ ಸಂತ್ರಸ್ತರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಅವುಗಳನ್ನು ಸರಿಪಡಿಸಿಕೊಡಬೇಕು ಎಂದು ಸಭೆಯಲ್ಲಿ ಸಚಿವರಿಗೆ ಮನವಿ ಮಾಡಿದರು.

Advertisement

ಕೋಲೂರ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶಿವಾಪುರ ಗ್ರಾಮ ಕಂದಾಯ ಗ್ರಾಮವನ್ನಾಗಿ ಮಾಡಬೇಕು. ಬಿಸನಾಳ ಗ್ರಾಮದಿಂದ ಹಲಗಲಿಗೆ ಹೋಗುವ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಗ್ರಾಮದ ಹಣಮಂತ ಬುರ್ಲಿ ಸಚಿವರ ಗಮನಕ್ಕೆ ತರುತ್ತಿದ್ದಂತೆ ಸಚಿವರು ಈಗಾಗಲೆ ಈ ರಸ್ತೆ ಮಂಜೂರಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಕಂದಾಯ ಇಲಾಖೆಯಲ್ಲಿ ಸೌಲಭ್ಯಗಳ ಕುರಿತು ಸಭೆಯಲ್ಲಿ ತಹಶೀಲ್ದಾರ್‌ ಸುಹಾಸ ಇಂಗಳೆ ಸಾರ್ವಜನಿಕರಲ್ಲಿ ಮಾಹಿತಿ ನೀಡಿದರು. ಪಿಂಚಣಿ ಪಡೆಯಲು ಫಲಾನುಭವಿಗಳು ಕಚೇರಿಗೆ ಅಲೆಯುವ ಅವಶ್ಯ ಇಲ್ಲ. ನಮ್ಮ ಸಹಾಯವಾಣಿಗೆ ತಿಳಿಸಿ. 72 ಗಂಟೆಯಲ್ಲಿ ನಮ್ಮ ಸಿಬ್ಬಂದಿ ನಿಮ್ಮ ಮನೆಗೆ ಬಂದು ಅದಕ್ಕೆ ಬೇಕಾಗುವ ದಾಖಲಾತಿಗಳನ್ನು ಪಡೆದು ಪಿಂಚಣಿ ಸೌಲಭ್ಯ ನೀಡಲಿದ್ದಾರೆ ಎಂದರು.

ಸಿದ್ದಪ್ಪ ಕಡಪಟ್ಟಿ ಮಾತನಾಡಿ, ಗುಳಬಾಳ ಗ್ರಾಮಕ್ಕೆ ಹೋಗುವ ಬ್ರಿಜ್‌ ಎತ್ತರಿಸಬೇಕು. ಯಡಹಳ್ಳಿ ಗ್ರಾಮದಲ್ಲಿನ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ತಿಪ್ಪಣ್ಣ ಸಂಜೀವಪ್ಪಗೋಳ ಮನವಿ ಮಾಡಿದರು. ಕಂದಾಯ, ಪುನರ್ವಸತಿ, ಹೆಸ್ಕಾಂ ಇಲಾಖೆ, ತೋಟಗಾರಿಕೆ, ಅರಣ್ಯ ಹಾಗೂ ವಿವಿಧ ಇಲಾಖೆಯ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬಂದವು. ಸಂದರ್ಭದಲ್ಲಿ ತಹಶೀಲ್ದಾರ್‌ ಸುಹಾಸ ಇಂಗಳೆ, ಗ್ರಾಮೀಣ ಕುಡಿಯುವ ನೀರು ಮತ್ತು
ನೈರ್ಮಲ್ಯ ವಿಭಾಗದ ಎಇಇ ವಿಲಾಸ ರಾಠೊಡ, ಸಿಪಿಐ ಶಿವಾನಂದ ಕಮತಗಿ, ಹೆಸ್ಕಾಂ ಎ.ಇ.ಇ. ಮಂಜುನಾಥ ಬೋಕಿ, ಪುನರವಸತಿ ಅಧಿಕಾರಿ ಎ.ಎಮ್‌. ಬಾಗವಾನ, ಸಮಾಜ ಕಲ್ಯಾಣ ಅಧಿಕಾರಿ ಎಚ್‌.ಎಂ. ಪಾಟೀಲ, ಗೋವಿಂದಪ್ಪ ಅರಳಿಕಟ್ಟಿ, ಡಾ| ದಯಾನಂದ ಕರೆಣ್ಣವರ, ಅರಣ್ಯ ವಲಯ ಅಧಿಕಾರಿ ಎಚ್‌.ಬಿ. ಡೋಣಿ, ಪ್ರದೀಪ ರಾಠೊಡ, ಸುಭಾಸ ಸುಲ್ಪಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next