Advertisement

Nirmala Sitharaman ಬಹಿರಂಗ ಚರ್ಚೆಗೆ ಬರಲಿ : ಕೃಷ್ಣಬೈರೇಗೌಡ

10:25 PM Mar 25, 2024 | Team Udayavani |

ಬೆಂಗಳೂರು: ಕರ್ನಾಟಕಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಕೊಡಬೇಕೆಂಬ 15ನೇ ಹಣಕಾಸು ಆಯೋಗದ ಶಿಫಾರಸನ್ನೇ ಸುಳ್ಳು ಎನ್ನುತ್ತಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸವಾಲು ಹಾಕಿದರು.

Advertisement

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019-20ರಲ್ಲಿ 14ನೇ ಹಣಕಾಸು ಆಯೋಗದ ಶಿಫಾರಸುಗಳು ಕೊನೆಗೊಂಡಿದ್ದು, ಆ ವರ್ಷ 36,675 ಕೋಟಿ ರೂ. ಕೊಟ್ಟಿದ್ದ ಕೇಂದ್ರ ಸರಕಾರ, 2020-21ರಲ್ಲಿ 31,180 ಕೋಟಿ ರೂ. ಕೊಟ್ಟಿತ್ತು. ಅಂದರೆ 5,495 ಕೋಟಿ ರೂ. ಕಡಿಮೆ ಆಗಿತ್ತು. ಇದನ್ನು ಸರಿದೂಗಿಸಲು 2020-21ರಲ್ಲಿ 5,495 ಕೋಟಿ ರೂ. ವಿಶೇಷ ಅನುದಾನ ನೀಡಲು ಹಣಕಾಸು ಆಯೋಗ ತನ್ನ ವರದಿಯಲ್ಲಿ ಶಿಫಾರಸು ಮಾಡಿದ್ದು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೇಳುವಂತೆ ಇದು ಮಧ್ಯಾಂತರ ವರದಿ ಅಲ್ಲ. ಇಡೀ ವರ್ಷಕ್ಕೆ ಕೊಟ್ಟಿರುವುದೊಂದೇ ವರದಿ. ಅದರಲ್ಲಿ ಈ ಅಂಶ ಇದೆ ಎಂದರು.

2020ರ ಸೆ.17ರಂದು ಅಂದಿನ ಸಿಎಂ ಯಡಿಯೂರಪ್ಪ ಅವರು ಈ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರು. ಅದೇ ರೀತಿ ಬಸವರಾಜ ಬೊಮ್ಮಾಯಿ ಸಿಎಂ ಆದಾಗಲೂ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿದ್ದ ನಿರ್ಮಲಾ ಅವರು, ನಿಮ್ಮ ಸಂಪನ್ಮೂಲದಿಂದಲೇ ಹೊಂದಾಣಿಕೆ ಮಾಡಿಕೊಳ್ಳಿ ಎಂದಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಆಯೋಗದ ಶಿಫಾರಸುಗಳ ಮೇಲೆ ಕೈಗೊಂಡ ಕ್ರಮಗಳ ಕುರಿತು ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದ ಕೇಂದ್ರ ಸರಕಾರ, ಆಯೋಗಕ್ಕೆ ತನ್ನ ಶಿಫಾರಸು ಮರುಪರಿಶೀಲನೆ ಮಾಡುವಂತೆ ಕೋರುವುದಾಗಿ ಹೇಳಿತ್ತು. ಈ ವಿಚಾರದಲ್ಲಿ ನಮ್ಮ ಸಿಎಂ ಹೇಳುವುದು ಸುಳ್ಳು ಎನ್ನುವುದಾದರೆ, ಇವೆಲ್ಲ ಸುಳ್ಳಾ ಎಂದು ಪ್ರಶ್ನಿಸಿದರು.

2021-26ರ ವರೆಗಿನ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ 6 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಕೊಡಬೇಕು. 2020-21ರ 5,495 ಕೋ. ರೂ. ಹಾಗೂ 6 ಸಾವಿರ ಕೋ. ರೂ. ಸಹಿತ ಒಟ್ಟು 11,495 ಕೋ.ರೂ. ಕೊಡಬೇಕು. ಕರ್ನಾಟಕದಿಂದ ಆಯ್ಕೆಯಾಗಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಸಚಿವೆ ನಿರ್ಮಲಾ ಅವರ ಬಳಿ ನಾವು ಭಿಕ್ಷಾಪಾತ್ರೆ ಹಿಡಿದು ಬೇಡುತ್ತಿಲ್ಲ. ನಮ್ಮ ಗ್ಯಾರಂಟಿಗೆ ನಿಮ್ಮ ನಯಾಪೈಸೆ ಬೇಕಿಲ್ಲ. ನಾವು ಸಾಮಾಜಿಕ ಭದ್ರತಾ ಪದ್ಧತಿಯಡಿ ನೀಡುತ್ತಿರುವ ಮಾಸಾಶನ ಪಿಂಚಣಿಗೆ ವಾರ್ಷಿಕ 11,200 ಕೋಟಿ ರೂ. ವ್ಯಯಿಸುತ್ತಿದ್ದು, ಇದರಲ್ಲಿ ಕೇಂದ್ರ ಪಾಲು 555 ಕೋಟಿ ರೂ. ಮಾತ್ರ. ಇದೆಲ್ಲದರ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ, ಬನ್ನಿ ಮೈಸೂರಿಗೆ ಎಂದು ಸವಾಲು ಹಾಕಿದರು.

ನಮ್ಮ ಪಾಲಿನ ಹಕ್ಕು ಕೇಳುತ್ತಿದ್ದೇವೆ. ನ್ಯಾಯ ಕೇಳುತ್ತಿದ್ದೇವೆ. ರಾಜಕೀಯ ತೆವಲಿಗಾಗಿ ಇದನ್ನೆಲ್ಲ ಹೇಳುತ್ತಿಲ್ಲ. ನಿಮ್ಮ ಉದಾರತನವೂ ನಮಗೆ ಬೇಕಿಲ್ಲ. ತೆರಿಗೆ ಕಟ್ಟಲು, ಮತ ಹಾಕಲಷ್ಟೇ ಕನ್ನಡಿಗರಿಲ್ಲ. ನಾವು ದ್ವಿತೀಯ ದರ್ಜೆ ನಾಗರಿಕರಲ್ಲ. ನಮಗೂ ಸಮಾನ ಪಾಲು ಕೊಡಿ ಅಷ್ಟೇ. ಜನರ ಮನ ಒಲಿಸಲಾಗಲಿಲ್ಲ ಎಂದು ಗೊಂದಲ ಮಾತ್ರ ಸೃಷ್ಟಿ ಮಾಡಬೇಡಿ.
-ಕೃಷ್ಣ ಬೈರೇಗೌಡ, ಕಂದಾಯ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next