Advertisement

State ಸರಕಾರಕ್ಕೆ ಸಂಕಷ್ಟ ; ಕೇಂದ್ರದಿಂದಲ್ಲ: ನಿರ್ಮಲಾ ಸೀತಾರಾಮನ್‌

11:25 PM Mar 24, 2024 | Team Udayavani |

ಮೈಸೂರು: ಎನ್‌ಡಿಆರ್‌ಎಫ್ ಅನುದಾನದ ನೀಡಿಲ್ಲ ಎಂದು ಆರೋಪಿಸಿ ಕರ್ನಾಟಕ ಸರಕಾರ ನ್ಯಾಯಾಲಯದ ಮೆಟ್ಟಿಲೇರಿದೆ. ಅಂತೆಯೇ ನಾವು ಅದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದೇವೆ. ಈ ವಿಚಾರದಲ್ಲಿ ಯಾರಿಂದ ಲೋಪವಾಗಿದೆ ಎನ್ನುವುದು ಮುಂದೆ ತೀರ್ಮಾನವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Advertisement

ಮೈಸೂರಿನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯಕ್ಕೆ ನೀಡಬೇಕಾದ ಸಂಪೂರ್ಣ ಹಣ ನೀಡಲಾಗಿದೆ. ಶೀಘ್ರದಲ್ಲೇ ಈ ಕುರಿತ ಆಡಿಟ್‌ ಪತ್ರ ನಮಗೆ ತಲುಪಲಿದ್ದು, ಅದನ್ನು ಬಿಡುಗಡೆ ಮಾಡುತ್ತೇವೆ. ಆ ದಾಖಲೆ ನಮಗೆ ತಲುಪದ ಕಾರಣ ಅದನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಗ್ಯಾರಂಟಿ ಅನುಷ್ಠಾನಕ್ಕೂ ಮುನ್ನ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿತ್ತು. ಕೇಂದ್ರದಿಂದಾಗಿ ಈ ಸ್ಥಿತಿ ಬಂದೊದಗಿದ್ದಲ್ಲ. ಉಚಿತ ಯೋಜನೆ ನೀಡುವುದು ತಪ್ಪಿಲ್ಲ. ಆದರೆ ಯೋಜನೆ ಘೋಷಿಸುವ ಮುನ್ನ ಅಗತ್ಯವಿರುವ ಬಜೆಟ್‌ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು. ರಾಜ್ಯ ಸರಕಾರ ಇದನ್ನು ಪರಿಗಣಿಸದೇ 60 ಸಾವಿರ ಕೋಟಿ ರೂ. ಮೊತ್ತದ ಗ್ಯಾರಂಟಿಗಳನ್ನು ಘೋಷಣೆ ಮಾಡಿತು. ಈ ಯೋಜನೆಗಳಿಗೆ ಹಣವಿಲ್ಲವೆಂದು ದೂರುವುದು ಸರಿಯಲ್ಲ ಎಂದರು.

ನಿರ್ಮಲಾಗೆ ಸಿಎಂ ಟಾಂಗ್‌
ಬೆಂಗಳೂರು: ನಾವು ನಮ್ಮ 5 ಗ್ಯಾರಂಟಿಗಳಿಗೆ ನಿಧಿ ಕೇಳುತ್ತಿಲ್ಲ. ಬಜೆಟ್‌ನಲ್ಲಿ ಅವಕಾಶವಿರುವ ಪಾಲು ಕೇಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಟ್ಯಾಗ್‌ ಮಾಡಿ ತಮ್ಮ ಎಕ್ಸ್‌ ಖಾತೆಯಲ್ಲಿ ನನ್ನ ತೆರಿಗೆ ನನ್ನ ಹಕ್ಕು ಹ್ಯಾಷ್‌ಟ್ಯಾಗ್‌ನೊಂದಿಗೆ ಪೋಸ್ಟ್‌ ಮಾಡಿದ್ದಾರೆ.
15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ 5495 ಕೋಟಿ ರೂ., ತೆಲಂಗಾಣಕ್ಕೆ 723 ಕೋಟಿ ರೂ. ಹಾಗೂ ಮಿಜೋರಾಂಗೆ 546 ಕೋಟಿ ರೂ. ಸೇರಿ ಒಟ್ಟು 6,764 ಕೋಟಿ ರೂ. ವಿಶೇಷ ನಿಧಿಯನ್ನು ಶಿಫಾರಸು ಮಾಡಿತ್ತು. ಮೂರು ರಾಜ್ಯಗಳ ಮೇಲಿನ ವಿಶೇಷ ಪ್ರೀತಿಯಿಂದ ಈ ಶಿಫಾರಸು ಮಾಡಿರಲಿಲ್ಲ. ಬದಲಿಗೆ ಹಿಂದಿನ ವರ್ಷಗಿಳಿಗಿಂತ ಕಡಿಮೆ ತೆರಿಗೆ ಹಂಚಿಕೆಯಾದ ರಾಜ್ಯಗಳಿಗೆ ಈ ವಿಶೇಷ ನಿಧಿ ಶಿಫಾರಸು ಮಾಡಲಾಗಿತ್ತು. ಅದೇ ರೀತಿ ಆಯೋಗದ ಅಂತಿಮ ವರದಿಯಲ್ಲಿ ಕೂಡ ಕರ್ನಾಟಕದ ಜಲಾಶಯಗಳ ಪುನರುಜ್ಜೀವನಕ್ಕೆ 3,000 ಕೋಟಿ ರೂ. ಮತ್ತು ಪೆರಿಫ‌ರಲ್‌ ರಿಂಗ್‌ ರಸ್ತೆಗಳಿಗೆ 3,000 ಕೋಟಿ ರೂ. ಸೇರಿ ಒಟ್ಟು 6,000 ಕೋಟಿ ರೂ.ಗಳನ್ನು ಶಿಫಾರಸು ಮಾಡಿತ್ತು. ಈ ಎರಡೂ ಶಿಫಾರಸುಗಳನ್ನು ನಿರ್ಮಲಾ ನಿರಾಕರಿಸಿದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next