ನಾವು ಎಷ್ಟೇ ಮುಂದುವರರಿದಿದ್ದರೂ ಸಹ ಪ್ರಕೃತಿಯ ಮುಂದೆ ನಾವು ತಲೆ ಬಾಗಲೇಬೇಕು ಯಾಕೆಂದರೆ ಮಾನವನ ಸೃಷ್ಟಿ ಆಗುವ ಮೊದಲೇ ಪ್ರಕೃತಿ ಇತ್ತು. ಇಂದು ನಾವು ವಿಶ್ವ ಪರಿಸರ ದಿನವನ್ನು ಆಚರಣೆ ಮಾಡುತ್ತಿದ್ದೇವೆ. ಆದರೆ ಆಚರಣೆ ಕೇವಲ ಬಾಯಿ ಮಾತಿಗೆ ಆಗಬಾರದು. ಪರಿಸರವನ್ನು ನಾವು ಹೇಗೆ ನೋಡಿಕೊಳ್ಳುತ್ತೇವೆಯೋ ಅದಕ್ಕೆ ತಕ್ಕಂತೆ ಪರಿಸರವೂ ಸಹ ನಮ್ಮನ್ನು ನೋಡಿಕೊಳ್ಳುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಆದರೆ ಜೂನ್ 5ರಂದು ವಿಶ್ವ ಪರಿಸರ ದಿನ ಎಲ್ಲೆಡೆ ಸಸಿಗಳನ್ನು ನೆಡುವ ಮೂಲಕ ಪರಿಸರಕ್ಕೆ ಗೌರವವನ್ನು ಸಮರ್ಪಿಸುವ ಕಾರ್ಯ ನಡೆಯುತ್ತದೆ. ಆದರೆ ಈ ದಿನಗಳಲ್ಲಿ ಅದು ಸಾಧ್ಯವೇ ? ಎಲ್ಲೆಡೆ ಕೋವಿಡ್ ಭೀತಿ ಎದುರಾಗಿದೆ ಏನು ಮಾಡುವುದು ಎಂಬ ಸವಾಲು ಶುರುವಾಗಿದೆ. ಮೊದಲಾದರೆ ಶಾಲಾ ಕಾಲೇಜು, ಸಂಘ ಸಂಸ್ಥೆಗಳು, ಕ್ಲಬ್‌ಗಳು ಸೇರಿದಂತೆ ಎಲ್ಲೆಡೆ ಸಸಿ ನೆಡುವ ಕಾರ್ಯ ನಡೆಯುತ್ತಿತ್ತು. ಆದರೆ ಇದೀಗ ಅವುಗಳು ತೆರೆದಿಲ್ಲ.
ಎಲ್ಲವೂ ಅನ್‌ಲೈನ್ ನಲ್ಲೇ ನಡೆಯುವಾಗ ಈ ವಿಶ್ವ ಪರಿಸರ ದಿನಾಚರಣೆಯು ಕೂಡ ಎಲ್ಲೋ ಕೂತು ನಡೆಸಿದರೆ ಏನು ಮಾಡುವುದು. ಹಾಗೆ ಮಾಡಿದರೆ ಏನು ಫಲ ಅಲ್ಲವೇ? ಪರಿಸರ ದಿನದಂದು ಸಸಿ ನೆಟ್ಟು ಅನಂತರ ನೆಟ್ಟ ಸಸಿಯನ್ನು ಪೋಷಣೆ ಮಾಡದೇ ಹೋದರೆ ಅದನ್ನು ನೆಟ್ಟ ಫಲವೇನು? ನೆಟ್ಟ ಗಿಡವನ್ನು ಒಂದು ಹಂತಕ್ಕೆ ಬರುವ ವರೆಗೆ ಸರಿಯಾಗಿ ಪೋಷಣೆ ಮಾಡಬೇಕು. ಆಗ ಮಾತ್ರ ಅದಕ್ಕೆ ಒಂದು ಅರ್ಥ ಸಿಗುತ್ತದೆ. ಕೆಲವೊಮ್ಮೆ ವಿಶ್ವ ಪರಿಸರ ದಿನದ ಮುಖ್ಯ ಅಂಶವೇ ತಿಳಿಯದೆ ಕೆಲವರು ಕೇವಲ ವೈಯಕ್ತಿಕ ಮನ್ನಣೆ ಗಳಿಸಲು ಒಂದು ಸಸಿ ನೆಟ್ಟು. ನಾಲ್ಕೆçದು ಫೋಟೋ ಕ್ಲಿಕ್ಕಿಸಿ ಕೊಳ್ಳುವವರೇ ಹೆಚ್ಚು. ಇದು ತಾತ್ಕಾಲಿಕ ಅಷ್ಟೆ. ಆದರೆ ಮುಂದಿನ ಪೀಳಿಗೆಗಾಗಿ ಇದು ಸಮಂಜಸವೇ ಎಂಬ ಪ್ರಶ್ನೆ ಮೂಡುತ್ತದೆ.
ಗ್ರಾಮ ಮಟ್ಟದಿಂದಲೇ ಈ ಕೆಲಸ ನಡೆಯಬೇಕು. ಜತೆಗೆ ಪ್ರತಿಯೊಬ್ಬ ನಾಗರಿಕನೂ ಈ ದಿನ ಒಂದೊಂದು ಸಸಿ ನೆಟ್ಟರೆ ಸಾಕು. ಆದರೆ ಇದು ನೈಜವಾಗಿ ಎಷ್ಟರ ಮಟ್ಟಿಗೆ ಆಗುತ್ತದೆ ಎಂಬುದು ದೊಡ್ಡ ಪ್ರಶ್ನೆ. ಪ್ರತಿಯೊಬ್ಬರೂ ಸಸಿ ನೆಡುವುದು ಬೇಡ ಒಂದೊಂದು ಮನೆಯಲ್ಲಿ ಒಂದು ಗಿಡ ನೆಟ್ಟರೆ ಸಾಕು. ಪರಿಸರವನ್ನು ಉಳಿಸಿಕೊಳ್ಳಲು ಇದಕ್ಕಿಂತ ಬೇರೆ ಒಳ್ಳೆಯ ಬೇರೆ ಉಪಾಯ ಇಲ್ಲ. ಸರಕಾರ ಹೆಚ್ಚಾಗಿರುವ ಅರಣ್ಯಗಳನ್ನು ಸಂರಕ್ಷಿತ ಅರಣ್ಯ ಎಂದು ಗುರುತಿಸಿ ಅದನ್ನು ರಕ್ಷಣೆ ಮಾಡುತ್ತಾ ಬಂದಿದೆ. ಜತೆಗೆ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಪಶ್ಚಿಮ ಘಟ್ಟವನ್ನು ಸೇರಿಸಿದೆ. ಪರಿಸರದ ರಕ್ಷಣೆ ನಮ್ಮಲ್ಲೇ ಇದೆ. ಅದನ್ನು ಸರಿಯಾಗಿ ಮಾಡಬೇಕು ಅಷ್ಟೆ. ಸರಕಾರಗಳೂ ಸಹ ಗಿಡ ಮರಗಳನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತಿದೆ. ಅದು ಮತ್ತಷ್ಟು ಹೆಚ್ಚಾಗಬೇಕು. ಜತೆಗೆ ಜನ ಪ್ರತಿನಿಧಿಗಳು ಸಹ ತಮ್ಮ ಕ್ಷೇತ್ರದಲ್ಲಿ ಗಿಡಗಳನ್ನು ಬೆಳೆಸಲು ಜನರಿಗೆ ಅರಿವು ಮೂಡಿಸಬೇಕು. ಹಿಂದೆ ಮಾಡಿದ ತಪ್ಪನ್ನು ಈ ಬಾರಿ ಮಾಡದೇ ಪರಿಸರದ ರಕ್ಷಣೆಗೆ ಎಲ್ಲರೂ ಒಟ್ಟಾಗಿ ನಿಂತರೆ; ಈ ವಿಶ್ವ ಪರಿಸರ ದಿನ ಅರ್ಥಪೂರ್ಣವಾಗಿ ಸಾಕ್ಷಿಯಾಗುತ್ತದೆ.
-ರಂಜನ್ ಪಿ.ಎಸ್. ಮಡಿಕೇರಿ