Advertisement

ಮಾಧ್ಯಮ ಸತ್ಯಕ್ಕೆ ಆದ್ಯತೆ ನೀಡಲಿ

12:57 PM Jan 25, 2018 | |

ಬೆಂಗಳೂರು: ಮಾಧ್ಯಮಗಳು ಸತ್ಯವನ್ನು ತಿಳಿಸಲು ಆದ್ಯತೆ ನೀಡಬೇಕು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಕರ್ನಾಟಕ ಮಾಧ್ಯಮ ಅಕಾಡೆಮಿಯು ನಗರದ ಮಿಲ್ಲರ್ ರಸ್ತೆಯಲ್ಲಿರುವ ಡಾ. ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಸರ್ಕಾರ ತಪ್ಪು ಮಾಡಿದಾಗ ಎಚ್ಚರಿಸಬೇಕು. ಒಳ್ಳೆಯ ಕೆಲಸ ಕಾರ್ಯಗಳನ್ನು ಪ್ರಸಾರ ಮಾಡಬೇಕು ಎಂದು ತಿಳಿಸಿದರು.

Advertisement

ಸುದ್ದಿ ವಾಹಿನಿಗಳಲ್ಲಿ ಟಿಆರ್‌ಪಿಗಾಗಿ ಸ್ಫರ್ಧೆ ಹೆಚ್ಚಾದಂತೆ ಜನರಿಗೂ ತೊಂದರೆಯಾಗುತ್ತಿದೆ. ಟಿಆರ್‌ಪಿಗಾಗಿ ವಿಶ್ವಾಸಾರ್ಹತೆಯನ್ನು ಖಾತರಿಪಡಿಸಿಕೊಳ್ಳದೆ ಸುದ್ದಿ ಬಿತ್ತರಿಸುವುದು ಸರಿಯಲ್ಲ. ವಾಸ್ತವಾಂಶ ಪತ್ತೆ ಹಚ್ಚಿ ನಿಜವಾದ ಸುದ್ದಿ ಪ್ರಸಾರ ಮಾಡಬೇಕು. ತನಿಖಾ ವರದಿಗಾರಿಕೆ ನಿಂತು ಹೋಗಿದೆ. ರಾಜಕಾರಣಿಗಳ ಆರೋಪ- ಪ್ರತ್ಯಾರೋಪವನ್ನು ಪ್ರಸಾರ ಮಾಡಲಾಗುತ್ತಿದ್ದು, ಸತ್ಯಾಂಶವನ್ನು ಜನರಿಗೆ ತಿಳಿಸುವಂತಾಗಬೇಕು ಎಂದು ಹೇಳಿದರು. 

ನಾವು ಹೇಳಿದನ್ನೂ ಪ್ರಸಾರ ಮಾಡಲಾಗುತ್ತದೆ. ಬಿಜೆಪಿ, ಜೆಡಿಎಸ್‌ ಸೇರಿದಂತೆ ಎಲ್ಲ ಪಕ್ಷದವರು ಹೇಳಿದ್ದನ್ನೂ ಪ್ರಸಾರ
ಮಾಡಲಾಗುತ್ತದೆ. ಆದರೆ ರಾಜಕಾರಣಿಗಳ ಹೇಳಿಕೆಯಲ್ಲಿ ಸತ್ಯಾಂಶವಿದೆಯೇ ಎಂಬುದನ್ನು ಪತ್ತೆ ಹಚ್ಚಿ ಪ್ರಸಾರ ಮಾಡಬೇಕು ಎಂದರು.

ಬಂಡವಾಳಶಾಹಿಗಳು ಮಾಧ್ಯಮ ಕ್ಷೇತ್ರ ಪ್ರವೇಶಿಸುತ್ತಿದ್ದು, ಸಂಪಾದಕರು ಸ್ವತಂತ್ರ ನಿರ್ಧಾರ ಕೈಗೊಳ್ಳದಂತೆ ಕೈ ಕಟ್ಟಿ
ಹಾಕಲಾಗುತ್ತಿದೆ. ಇದರಿಂದ ಸತ್ಯ ಹೊರಬರದಂತಾಗುತ್ತಿದೆ. ಹಿಂದೆಲ್ಲಾ ಸಂಪಾದಕರೇ ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತಿದ್ದರು. ಮಾಲೀಕರು ಅದಕ್ಕೆ ಅಡ್ಡಿಪಡಿಸುತ್ತಿರಲಿಲ್ಲ ಎಂದು ಹೇಳಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಮೂಕನಾಯಕ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು
ಪ್ರಶಸ್ತಿ ಪುರಸ್ಕೃತ ಪರವಾಗಿ ಮಾತನಾಡಿ, ಹಿಂದೆಲ್ಲಾ ವೃತ್ತಿ- ಪ್ರವೃತ್ತಿಯವರು ಪತ್ರಿಕೆ, ಮಾಧ್ಯಮ ನಡೆಸುತ್ತಿದ್ದರು. ಇದೀಗ ರಾಜಕೀಯ ಪಕ್ಷಗಳ ನೇತಾರರು ಮಾಧ್ಯಮ ನಡೆಸುವ ಮಟ್ಟಿಗೆ ಸ್ಥಿತ್ಯಂತರಗೊಂಡಿರುವುದು ಇಂದಿನ ದೊಡ್ಡ
ಅಪಾಯ. ರಾಜಕೀಯ ಪಕ್ಷಗಳ ನೇತಾರರು ಮಾಲೀಕರಾಗಿದಾಗ ಅವರ ಬಳಿ ಕೆಲಸ ಮಾಡುವುದರ ಕಷ್ಟ ಅರಿವಾಗುತ್ತದೆ ಎಂದು ಹೇಳಿದರು.

Advertisement

ಅಧಿಕಾರ ಅಹಂಕಾರವಾಗಬಾರದು, ಅಕ್ಷರ ಆತ್ಮರತಿಯಾಗಬಾರದು. ಮಾಧ್ಯಮ ಮದವಾಗಬಾರದು. ಅಂತಹ ಸಮಾಜ ನಿರ್ಮಿಸಲು ಸಾಧ್ಯವೇ. ಸತ್ಯವನ್ನು ಹೇಳುವ ವಾತಾವರಣ ನಿರ್ಮಿಸಬಹುದೇ ಎಂಬುದನ್ನು ಚಿಂತಿಸಬೇಕು ಎಂದು ಹೇಳಿದರು. ಮಾಧ್ಯಮ, ಸಿನಿಮಾ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇಂದು ವಿಶ್ವಾಸಾರ್ಹತೆಯ ಬಿಕ್ಕಟ್ಟು ಎದುರಿಸುತ್ತಿದೆ. ಪ್ರಜಾಪ್ರಭುತ್ವಕ್ಕೆ ಪಾರದರ್ಶಕತೆ ಮುಖ್ಯ. ಇಷ್ಟವಾಗದ್ದನ್ನು ವಿರೋಧಿಸಲು ಅವಕಾಶವಿದೆ. ಹಾಗೆಂದು ಬೆಂಕಿ ಹಚ್ಚುವ, ಹತ್ಯೆ ಮಾಡುವ ಪ್ರತಿರೋಧ ಸರಿಯಲ್ಲ. ಆ ಮೂಲಕ ಹಿಂಸೆಯ ಭಾರತ ನಿರ್ಮಿಸುತ್ತಿರುವುದು ಸರಿಯೇ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

44 ಮಂದಿ ಹಾಗೂ ಒಂದು ಸಂಸ್ಥೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು,
ಕಾರ್ಯದರ್ಶಿ ಎಸ್‌.ಶಂಕರಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್‌.ಹರ್ಷ, ನಿವೃತ್ತ
ಐಪಿಎಸ್‌ ಅಧಿಕಾರಿ ಕೆ.ವಿ.ಆರ್‌.ಟ್ಯಾಗೋರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next