Advertisement

ನಾನು ಯಾರಿಗಾಗಿ ಬದುಕಲಿ

04:51 PM Dec 02, 2018 | |

ಬಾಗಲಕೋಟೆ: ನನ್ನ ಮಗ ಆತ್ಮಹತ್ಯೆ ಮಾಡ್ಕೊಳ್ಳೊ ವ್ಯಕ್ತಿ ಅಲ್ಲ. ಇಲಾಖೆಯಲ್ಲಿ ಬಾಳ್‌ ಕೆಲ್ಸಾ ಕೊಡ್ತಾರ್‌ ಅಂದಿದ್ದ. ತಂದೆ ಇಲ್ಲದ ಒಬ್ಬನೇ ಮಗನ್‌ ಬೆಳಿಸಿ, ಪೊಲೀಸ್‌ ಮಾಡಿದ್ವಿ. ಈಗ ಅವನೇ ಇಲ್ಲ. ನಾ ಇನ್‌ ಯಾರಿಗಾಗಿ ಬದುಕ್ಲಿ. ಇದು ಶನಿವಾರ ನಸುಕಿನ ಜಾವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ನಿವಾಸದ ಎದುರು ಆತ್ಮಹತ್ಯೆಗೆ ಶರಣಾದ ಸಶಸ್ತ್ರ ಮೀಸಲು ಪಡೆಯ ಪೇದೆ ಮಂಜುನಾಥ ಹರಿಜನ ತಾಯಿ ಹನಮವ್ವಳ ಆಕ್ರಂದ್ರನದ ಮಾತುಗಳು.

Advertisement

ತಂದಿ ಇಲ್ಲದ ಮಗನ್‌ ಸಾಲಿ ಕಲಿಸಿ ಬೆಳೆಸಿದ್ವಿ. ಪೊಲೀಸ್‌ ಆಗಿ ಕೆಲ್ಸ ಮಾಡ್ತಿದ್ದ. ಎರಡ್‌ ದಿನದ ಹಿಂದ್‌ ಊರಿಗಿ ಬಂದಿದ್ದ. ನಮಗ್‌ ಸರಿಯಾಗಿ ಮಾತಾಡ್ಸಿ  ವಾಪಾಸ್ಸ ಬಂದಿದ್ದ. ಅಂವಾ ನೌಕರಿ ಸೇರಿದ್ದ ಮ್ಯಾಗ್‌ ಸಣ್ಣದೊಂದು ಮನಿನೂ ಕಟ್ಟಿದ್ವಿ. ಮದುವಿ ಮಾಡ್ಕೊಂಡು ಸುಃಖವಾಗಿ ಇರಬೇಕಾದ ಮಗ ಸತ್ತಾನ್‌. ಊರಿಗಿ ಬಂದಾಗ, ಕೆಲ್ಸ ಬಾಳ್‌ ಕೊಡ್ತಾರ್‌ ಅಂತಿದ್ದ. ಅಂವಾ ಗುಂಡ್‌ ಹಾರಿಸ್ಕೊಂಡು ಸಾಯೂ ಮಗಾ ಅಲ್ಲ. ಎಲ್ಲಿ ಏನ್‌ ಆಗೈತೋ ಎಂದು ಹನಮವ್ವ ಗೋಳಾಡುತ್ತಿದ್ದಳು.

ಮುಗಿಲು ಮುಟ್ಟಿದ ಆಕ್ರಂದನ: ಪೇದೆ ಮಂಜುನಾಥ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಬಾಗಲಕೋಟೆಗೆ ಆಗಮಿಸಿದ ಮಿಟ್ಟಲಗೋಡ ಗ್ರಾಮಸ್ಥರು ಹಾಗೂ ಕುಟುಂಬದವರು, ಎಸ್ಪಿ ನಿವಾಸದ ಎದುರೇ ಗೋಳಾಡಿ ಅಳುತ್ತಿದ್ದರು. ಹೆತ್ತ ತಾಯಿಯ ಆಕ್ರಂದನ ಕಂಡು, ನೆರೆದವರ ಕಣ್ಣಾಲಿ ಒದ್ದೆಯಾದವು. ಬಾಳಿ ಬದುಕಬೇಕಾದ ಯುವಕ, ಹೆಣವಾಗಿದ್ದಾನೆ ಎಂದು ಊರವರು ಹಳಹಳಿಸುತ್ತಿದ್ದರು.

ನಸುಕಿನ ಜಾವ ಡಬ್‌ ಎಂಬ ಶಬ್ಧ: ಜಿಲ್ಲಾಡಳಿತ ಭವನದ ಹಿಂಬದಿ ಎಸ್ಪಿಯವರ ನಿವಾಸವಿದ್ದು, ಅವರ ನಿವಾಸಕ್ಕೆ ರಾತ್ರಿ ಹೊತ್ತು ಇದೇ ಮಂಜುನಾಥ ಭದ್ರತೆಗೆ ನಿಯೋಜನೆಗೊಂಡಿದ್ದ. ಶುಕ್ರವಾರ ರಾತ್ರಿ ಎಂದಿನಂತೆ ಸೇವೆಗೆ ಬಂದಿದ್ದ ಆತ, ಬೆಳಗ್ಗೆಯ ಹೊತ್ತಿಗೆ ಹೆಣವಾಗಿದ್ದ. ಶನಿವಾರ ನಸುಕಿನ ಜಾವ ಸುಮಾರು 3 ಗಂಟೆಯ ಹೊತ್ತಿಗೆ ಡಬ್‌ ಡಬ್‌ ಎಂಬ ಶಬ್ದ ಬಂದಿತ್ತು. ಪಕ್ಕದಲ್ಲೇ ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ವಸತಿ ನಿಲಯಗಳಿದ್ದು, ಯಾವುದೋ ಸಪ್ಪಳ ಇರಬಹುದೆಂದು ಸುಮ್ಮನಾಗಿದ್ದರು. ಬೆಳಗ್ಗೆ ವಾಯು ವಿವಾಹರಕ್ಕೆ ಬರುವ ವ್ಯಕ್ತಿಗಳು ನೋಡಿದ ಬಳಿಕ, ಪೇದೆ ಮೃತಪಟ್ಟಿರುವ ವಿಷಯ ಗೊತ್ತಾಗಿದೆ.

ಮನೆಯಲ್ಲೇ ಇದ್ದ ಎಸ್ಪಿ ಸಿ.ಬಿ. ರಿಷ್ಯಂತ ಕೂಡ ತಕ್ಷಣ ಬಂದು ಪರಿಶೀಲಿಸಿದ್ದಾರೆ. ಬಳಿಕ ಇತರೇ ಪೊಲೀಸ್‌ ಅಧಿಕಾರಿಗಳು, ಶ್ವಾನದಳ, ಬಾಂಬ್‌ ಪತ್ತೆ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದರು. ಮಿಟ್ಟಲಕೋಡ ಗ್ರಾಮದಿಂದ ಕುಟುಂಬದವರು ಬರುವವರೆಗೂ ಕಾದು, ಶವ ಪರೀಕ್ಷೆಗೆ ಸಾಗಿಸಿದರು.

Advertisement

ರಾತ್ರಿ ಎಸ್ಪಿ ಪ್ರೀತಿಯಿಂದ ಮಾತನಾಡಿಸಿದ್ದರು: ಎರಡು ದಿನ ನಡೆದ ಪೊಲೀಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳೆಲ್ಲ ಶನಿವಾರ ರಾತ್ರಿ ಖಾಸಗಿಯಾಗಿ ಔತಣಕೂಟ ಇಟ್ಟುಕೊಂಡಿದ್ದರು. ಆ ವೇಳೆ ಅಲ್ಲಿಗೆ ಬಂದಿದ್ದ ಪೇದೆ ಮಂಜುನಾಥನನ್ನು ಎಸ್ಪಿ ರಿಷ್ಯಂತ ಕೂಡ ಆತ್ಮೀಯವಾಗಿ ಮಾತನಾಡಿಸಿ, ನೀನು ಇನ್ನೂ ಎಂಗ್‌ ಇದ್ದೀಯಾ, ಯಾವುದಾದರೂ ಕ್ರೀಡೆಯಲ್ಲಿ ಭಾಗವಹಿಸಬೇಕಿತ್ತಲ್ವಾ ಎಂದು ಕೇಳಿದ್ದರಂತೆ. ರಾತ್ರಿ ಔತಣಕೂಟ ಮುಗಿಸಿಕೊಂಡು ಎಸ್ಪಿ ಸಹಿತ ಎಲ್ಲ ಅಧಿಕಾರಿಗಳು ಮನೆಗೆ ಹೋಗಿ ಮಲಗಿದ್ದರು. ಬೆಳಗ್ಗೆಯ ಹೊತ್ತಿಗೆ ತಮ್ಮದೇ ಇಲಾಖೆಯ ಪೇದೆಯೊಬ್ಬ ಆತ್ಮಹತ್ಯೆಗೆ ಶರಣಾಗಿರುವುದು ಇತರೆ ಸಿಬ್ಬಂದಿಗೂ ಬರಸಿಡಿಲು ಬಡಿದಂತಾಗಿದೆ.

ಒಟ್ಟಾರೆ, ಯುವ ಪೊಲೀಸ್‌ ಪೇದೆಯೊಬ್ಬನ ಸಾವು, ಇಡೀ ಕುಟುಂಬದ ಜತೆಗೆ ಇಲಾಖೆಯನ್ನೂ ಖಾಸಗಿಗೊಳಿಸಿದೆ. ತನಿಖೆ ಮುಗಿದು, ಕುಟುಂಬದ ಆರೋಪದಕ್ಕೆ ಸತ್ಯಾಸತ್ಯತೆ ತಿಳಿಸಬಹುದು. ಆದರೆ, ಇಡೀ ಸಮಾಜದ ಜನರಿಗೆ ಧೈರ್ಯ ಹೇಳುವ ಸ್ಥಾನದಲ್ಲಿರುವ ಪೊಲೀಸ್‌ ಇಲಾಖೆಯ ವ್ಯಕ್ತಿಯೇ ಈ ರೀತಿ ಸಾವಿಗೀಡಾಗಿರುವುದು ದುರಂತ ಎಂಬ ಮಾತು ಕೇಳಿ ಬರುತ್ತಿವೆ.

ಎಸ್ಪಿಗೆ ಡಿ.1 ಆಗಿ ಬರಲ್ವಾ
ಸಿ.ಬಿ. ರಿಷ್ಯಂತ ಅವರು ಎಸ್ಪಿ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಒಂದಿಲ್ಲೊಂದು ಒತ್ತಡದಲ್ಲೇ ಕೆಲಸ ನಿರ್ವಹಿಸುವಂತಾಗಿದೆ. ಕಳೆದ ವರ್ಷ ಇದೇ ಡಿ.1ರಂದು, ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು, ನವನಗರ ಹೆಲಿಪ್ಯಾಡ್‌ನ‌ಲ್ಲಿ ಎಚ್ಚರಿಕೆ ನೀಡಿದ್ದರು. ಯಾರಿ ಇಲ್ಲಿನ ಎಸ್ಪಿ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಈಗ ಅದೇಡಿ.1ರಂದು ತಮ್ಮದೇ ನಿವಾಸದ ಎದುರು, ತಮ್ಮದೇ ಮನೆಯ ಭದ್ರತೆಗೆ ನಿಯೋಜನೆಗೊಂಡ ಪೇದೆ ಆತ್ಮಹತ್ಯೆ
ಮಾಡಿಕೊಂಡಿದ್ದಾನೆ. ಹೀಗಾಗಿ ಎಸ್ಪಿ ರಿಷ್ಯಂತ ಅವರಿಗೆ ಡಿ.1ರಂದು ಒಂದಿಲ್ಲೊಂದು ಕಿರಿಕಿರಿ ಬರುತ್ತಲೇ ಇರುತ್ತಿವೆ ಎಂದು ಪೊಲೀಸರೇ ಮಾತನಾಡಿಕೊಳ್ಳುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next