Advertisement

ಕುಂದಾಪ್ರ ಕನ್ನಡ ಭಾಷಾ ಸಾಹಿತ್ಯ ಅಕಾಡೆಮಿಯಾಗಲಿ: ಡಾ|ಎ.ವಿ. ನಾವಡ

01:24 AM Apr 16, 2022 | Team Udayavani |

ಕುಂದಾಪುರ(ಕವಿಮುದ್ದಣ ವೇದಿಕೆ): ಭಾಷಾ ಅನನ್ಯತೆ ಯನ್ನು ಉಳಿಸಿಕೊಂಡಿರುವ “ಕುಂದಾಪ್ರ ಕನ್ನಡ’ಕ್ಕೆ ಭಾಷಾಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಬೇಕು. ಮಂಗಳೂರು ವಿ.ವಿ.ಯಲ್ಲಿ ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಅನುದಾನ ಬಿಡುಗಡೆಯಾಗಬೇಕು.

Advertisement

ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಮಹನೀಯರ ಹೆಸರಿನಲ್ಲಿ ಸರಕಾರ ಪ್ರತಿಷ್ಠಾನಗಳನ್ನು ಸ್ಥಾಪಿಸಬೇಕು. ಕನ್ನಡಪ್ರಜ್ಞೆ ಕಟ್ಟುವ ಕೆಲಸ ನಿರಂತರ ನಡೆಯಬೇಕು. ಕನ್ನಡವನ್ನು ಮರಳಿ ಕಟ್ಟುವ ಸಂಕಥನಗಳು, ಕಾರ್ಯಯೋಜನೆಗಳು ರೂಪುಗೊಳ್ಳಬೇಕು ಎಂದು ಉಡುಪಿ ಜಿಲ್ಲಾ 15ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ| ಎ.ವಿ. ನಾವಡ ಕಳಕಳಿ ವ್ಯಕ್ತಪಡಿಸಿದರು.

ಶುಕ್ರವಾರ ಇಲ್ಲಿನ ಕಲಾಮಂದಿರ ದಲ್ಲಿ ಉದ್ಘಾಟನೆಗೊಂಡ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲೆ ಮುಚ್ಚಬೇಡಿ
ಕನ್ನಡ ಶಾಲೆಗಳು ಮುಚ್ಚಿದರೆ, ಕನ್ನಡ ಪುಸ್ತಕಗಳನ್ನು ಓದದಿದ್ದರೆ, ಕನ್ನಡ ಶಾಲೆಗಳಲ್ಲಿ ಅಧ್ಯಾಪಕರೇ ಇಲ್ಲದಿದ್ದರೆ ಕನ್ನಡ ಉಳಿಯುವುದು ಹೇಗೆ? ಕನ್ನಡದ ಜ್ಯೋತಿ ನಿರಂತರ ಬೆಳಗು ವಂತೆ ನಾವೇ ಮಾಡಬೇಕು ಎಂದು ಸಮ್ಮೇಳನ ಉದ್ಘಾಟಿಸಿದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮ ದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ದ್ವೇಷಭಾಷೆ ಬೇಡ
ಭಾಷೆ ಹಗೆ, ದ್ವೇಷದ ಭಾಷೆಯಾಗಿ ಬದಲಾಗುತ್ತಿರುವುದು ಆತಂಕಕಾರಿ ಎಂದು ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ವೈದೇಹಿ ವೀಡಿಯೋ ಸಂದೇಶದಲ್ಲಿ ಹೇಳಿದರು.

Advertisement

ಕುಂದಗನ್ನಡ ಸೇರಿ ಉಪನ್ಯಾಸ ಮಾಲಿಕೆ, ಪ್ರಶಸ್ತಿ, ನಿರಂತರ ಕನ್ನಡ ಜಾಗೃತಿ, ಉದಯೋನ್ಮುಖರ ಬರಹ ಗಳಿಗೆ ಉತ್ತೇಜನ ನೀಡಲಾಗುವುದು, ಕಾಲೇಜುಗಳಲ್ಲಿ ಕಸಾಪ ಘಟಕ ಮಾಡ ಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಯಲ್ಲಿ ತಿಳಿಸಿದರು.

ಕಸಾಪ ಕಾಸರಗೋಡು ಅಧ್ಯಕ್ಷ ಸುಬ್ರಹ್ಮಣ್ಯ ವಿ. ಭಟ್‌ ಪುಸ್ತಕ ಮಳಿಗೆ ಉದ್ಘಾಟಿಸಿದರು. ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್‌ ಸಮ್ಮೇಳನಾಧ್ಯಕ್ಷರನ್ನು ಪರಿ ಚಯಿಸಿದರು. ಡಾ| ಗಾಯತ್ರಿ ನಾವಡ ಪುಸ್ತಕ ಬಿಡುಗಡೆ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್‌ ಕುಮಾರ್‌ ಶೆಟ್ಟಿ, ಜಿಪಿಯು ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಸ್ವಾಗತ ಸಮಿತಿ ಸಂಚಾಲಕ ಡಾ| ಉಮೇಶ್‌ ಪುತ್ರನ್‌, ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿ, ಸತೀಶ್‌ ವಡ್ಡರ್ಸೆ ವಂದಿಸಿದರು. ನರೇಂದ್ರ ಕುಮಾರ್‌ ಕೋಟ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next