Advertisement

ಸಿಎಂ ಸಲಹೆಯನ್ನು ಕೆಎಂಎಫ್ ಗಂಭೀರವಾಗಿ ಪರಿಗಣಿಸಲಿ

10:23 PM Sep 30, 2021 | Team Udayavani |

ಕರ್ನಾಟಕ ಹಾಲು ಮಹಾಮಂಡಳಿಯಿಂದ ಹಾಲು ಉತ್ಪಾದಕರಿಗಾಗಿಯೇ ಪ್ರತ್ಯೇಕ ಬ್ಯಾಂಕ್‌ ಸ್ಥಾಪಿಸಬೇಕೆಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಸಲಹೆ ಸಹಕಾರ ವಲಯದಲ್ಲಿ ಒಂದು ವಿಭಿನ್ನ ಚಿಂತನೆಯನ್ನು ಹುಟ್ಟು ಹಾಕಿದೆ. ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಸಹಕಾರ ಬ್ಯಾಂಕ್‌ಗಳು ಕಾರ್ಯನಿರ್ವ­ಹಿಸುತ್ತಿರುವಾಗ ಹೈನುಗಾರರಿಗಾಗಿಯೇ ಪ್ರತ್ಯೇಕ ಬ್ಯಾಂಕ್‌ ಸ್ಥಾಪಿಸು ವಂತೆ ಮುಖ್ಯಮಂತ್ರಿ ಕೆಎಂಎಫ್ಗೆ ಸಲಹೆ ನೀಡಿದ್ದೇ ಅಲ್ಲದೆ ಇದಕ್ಕಾಗಿ 100 ಕೋಟಿ ರೂ.ಗಳ ಮೂಲ ಬಂಡವಾಳವನ್ನು ಸರಕಾರ ನೀಡಲಿದೆ ಎಂಬ ಭರವಸೆ ನೀಡಿದ್ದಾರೆ. ಹಾಲು ಉತ್ಪಾದಕರ ಬ್ಯಾಂಕ್‌ ಸ್ಥಾಪನೆ ಯಾದದ್ದೇ ಆದಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿ­ಸುತ್ತಿರುವ ಎಲ್ಲ ಹಾಲು ಉತ್ಪಾದಕ ಒಕ್ಕೂಟಗಳನ್ನು ಸ್ವಾವಲಂಬಿಯಾಗಿ­ಸಲು ಸಾಧ್ಯ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಕೆಎಂಎಫ್ ಇಂಥ ಒಂದು ಬ್ಯಾಂಕ್‌ ಸ್ಥಾಪಿಸಿದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಣಕಾಸು ವಹಿವಾಟುಗಳ ನಿರ್ವಹಣೆ ಸುಲಭ­ವಾಗಲಿದೆ. ಇದರಿಂದ ರಾಜ್ಯದಲ್ಲಿ ಹೈನೋದ್ಯಮ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ. ಬ್ಯಾಂಕ್‌ ಸ್ಥಾಪನೆಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಕೆಎಂಎಫ್ ಹೊಂದಿದ್ದು ಇದನ್ನು ಬಳಸಿಕೊಂಡದ್ದೇ ಆದಲ್ಲಿ ಹಾಲು ಉತ್ಪಾದಕರ ಸಹಕಾರ ಒಕ್ಕೂಟಗಳು ಆರ್ಥಿಕವಾಗಿ ಮತ್ತಷ್ಟು ಸದೃಢವಾಗಿ ಮುನ್ನಡೆಯಬಹುದು. ಆರಂಭದಲ್ಲಿ ಸರಕಾರ ಬಂಡವಾಳ ಹೂಡುವ ಮೂಲಕ ಕೆಎಂಎಫ್ಗೆ ನೆರವಾಗಲಿದೆ.  ಬಳಿಕ ಕೆಎಂಎಫ್ ಈ ಬ್ಯಾಂಕ್‌ನ್ನು ಮುನ್ನಡೆಸಿಕೊಂಡು ಹೋಗಬೇಕು ಎಂಬ ಕಿವಿಮಾತನ್ನೂ ಹೇಳಿದ್ದಾರೆ.

ಸದ್ಯ ರಾಜ್ಯದಲ್ಲಿ 14 ಸಾವಿರ ಹಾಲು ಉತ್ಪಾದಕ ಸಂಘಗಳು ಕಾರ್ಯ­ನಿರ್ವಹಿಸುತ್ತಿದ್ದು ಸರಿಸುಮಾರು 25 ಲಕ್ಷ ಮಂದಿ ಸದಸ್ಯರಿದ್ದಾರೆ. ಕೆಎಂಎಫ್ ತನ್ನದೇ ಆದ ಬ್ಯಾಂಕ್‌ ಹೊಂದಿದಲ್ಲಿ ಹಾಲು ಉತ್ಪಾದಕರಿಗೆ ಹೈನುಗಾರಿಕಾ ಚಟುವಟಿಕೆಗಳಿಗೆ ಸಾಲ ಆದಿಯಾಗಿ ಇನ್ನಿತರ ಹಣಕಾಸು ನೆರವನ್ನು ನೀಡಲು ಸುಲಭ ಸಾಧ್ಯವಾಗಲಿದೆ. ಇದರಿಂದ ಹೈನುಗಾರರು ತಮ್ಮ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸ ಬಯಸಿದರೆ ಅವರಿಗೆ ಅನುಕೂಲವಾಗಲಿದೆಯಲ್ಲದೆ ಹೈನುಗಾರಿಕೋದ್ಯಮವೂ ಇನ್ನಷ್ಟು ಪ್ರಗತಿ ಕಾಣಲಿದೆ.  ಜತೆಗೆ ಹಾಲು ಉತ್ಪಾದಕರೂ ತಮ್ಮ ವ್ಯವಹಾರ ಗಳಿಗಾಗಿ ಇತರ ಬ್ಯಾಂಕ್‌ಗಳಿಗೆ ಅಲೆದಾಡುವುದು ತಪ್ಪಲಿದೆ. ಆದರೆ ಇಂತಹ ಬ್ಯಾಂಕ್‌ ಸ್ಥಾಪನೆಯ ಸಂದರ್ಭದಲ್ಲಿ ಅದರ ಭವಿಷ್ಯದ ದೃಷ್ಟಿ ಯಿಂದ ಅಲ್ಲಿನ ಒಟ್ಟಾರೆ ಆಡಳಿತ ವ್ಯವಸ್ಥೆಯ ಮೇಲೆ ಸರಕಾರ ಹದ್ದು ಗಣ್ಣಿರಿಸಬೇಕಿದೆ. ಹಾಗೆಂದ ಮಾತ್ರಕ್ಕೆ ಬ್ಯಾಂಕ್‌ನ ಕಾರ್ಯ ನಿರ್ವಹಣೆ ಯಲ್ಲಿ ಸರಕಾರದ ಹಸ್ತಕ್ಷೇಪ ಸಲ್ಲದು. ಇಲ್ಲವಾದಲ್ಲಿ ಸದ್ಯ ರಾಜ್ಯದಲ್ಲಿ ಕಾರ್ಯನಿರ್ವಹಿಸು­ತ್ತಿರುವ ಬಹುತೇಕ ಸಹಕಾರ ಬ್ಯಾಂಕ್‌ಗಳ ಮಾದರಿಯಲ್ಲೇ ಹಾಲು ಉತ್ಪಾದಕರ ಬ್ಯಾಂಕ್‌ ಕೂಡ ರಾಜಕೀಯ ಮೇಲಾಟಕ್ಕೆ ವೇದಿಕೆಯಾ­ಗುವ ಸಾಧ್ಯತೆ ಇದೆ.

ಮುಖ್ಯಮಂತ್ರಿ  ನೀಡಿರುವ ಸಲಹೆಯನ್ನು ಕೆಎಂಎಫ್  ಗಂಭೀರ ವಾಗಿ ಪರಿಗಣಿಸುವುದು ಸೂಕ್ತ. ಪ್ರತಿಯೊಂದು ಬಾರಿಯೂ ಸರಕಾರದ ಮುಂದೆ ಬೇಡಿಕೆಗಳ ಪಟ್ಟಿಯನ್ನು ಇರಿಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿರುವಾಗ ಬ್ಯಾಂಕ್‌ ಸ್ಥಾಪನೆಯಂಥ ನಿರ್ಧಾರ ಕೈಗೊಳ್ಳುವ ಕುರಿತು ಚರ್ಚೆ ನಡೆಸುವುದು ಆವಶ್ಯಕ. ಈ ವಿಚಾರವಾಗಿ ಕೆಎಂಎಫ್ ರಾಜ್ಯದ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳು, ಸಂಘಗಳ ಒಕ್ಕೂಟ ಗಳೊಂದಿಗೆ  ಸಮಾಲೋಚನೆ ನಡೆಸಿ ಮುಂದಡಿ ಇಡಲಿ.

Advertisement

Udayavani is now on Telegram. Click here to join our channel and stay updated with the latest news.

Next