ಪರೀಕ್ಷಾ ಅಕ್ರಮದಿಂದಾಗಿ ಭಾರೀ ವಿವಾದಕ್ಕೀಡಾಗಿದ್ದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳ ನೇಮಕಾತಿ ಪರೀಕ್ಷೆಯನ್ನು ನಡೆಸುವ ಹೊಣೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಡಿಲಿಗೆ ಬಿದ್ದಿದೆ. ಇತ್ತೀಚೆಗಷ್ಟೇ ಪಿಎಸ್‌ಐ ಮರು ಪರೀಕ್ಷೆಗೆ ಆದೇಶಿಸಿದ್ದ ಹೈಕೋರ್ಟ್, ಸ್ವತಂತ್ರ ಸಂಸ್ಥೆಗೆ ಪರೀಕ್ಷಾ ಹೊಣೆ ನೀಡುವಂತೆ ರಾಜ್ಯ ಸರಕಾರಕ್ಕೆ ಹೇಳಿತ್ತು. ಹೀಗಾಗಿ ಬುಧವಾರವಷ್ಟೇ ರಾಜ್ಯ ಸರಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪರೀಕ್ಷೆ ನಡೆಸುವ ಹೊಣೆಗಾರಿಕೆ ನೀಡಿದೆ.
2021ರ ಜ.21ರಂದು ಪಿಎಸ್‌ಐ ಪರೀಕ್ಷೆಗೆ ಅಧಿಸೂಚನೆ ಹೊರಟಿದ್ದು, ಅದೇ ವರ್ಷದ ಅ.3ರಂದು 92 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಆಗ ದೈಹಿಕ ಸಾಮರ್ಥ್ಯ ಪರೀಕ್ಷೆ ಬಳಿಕ 54,103 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. 2022ರ ಜ.19ರಂದು ಪ್ರಾವಿಷನಲ್ ಪಟ್ಟಿ ಬಿಡುಗಡೆಯಾಗಿತ್ತು. ಆದರೆ ಪರೀಕ್ಷೆ ಬರೆದಿದ್ದ ಕೆಲವು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ದೂರು ನೀಡಿದ್ದರಿಂದ ರಾಜ್ಯ ಸರಕಾರ ಸಿಐಡಿ ತನಿಖೆಗೆ ಆದೇಶ ನೀಡಿತ್ತು. ತನಿಖೆ ಆರಂಭಿಸಿದ್ದ ಸಿಐಡಿ, ಆರ್.ಡಿ.ಪಾಟೀಲ್ ಸೇರಿದಂತೆ ಹಲವು ಮಂದಿ ಆರೋಪಿಗಳು, ಪೊಲೀಸರು ಮತ್ತು ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಿತ್ತು.
ಭಾರೀ ಪ್ರಮಾಣದ ಅಕ್ರಮ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮರು ಪರೀಕ್ಷೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಕೆಎಟಿ ಮೊರೆ ಹೋಗಿದ್ದರು. ಅಲ್ಲದೆ ಹೈಕೋರ್ಟ್‌ಗೂ ಅರ್ಜಿ ಸಲ್ಲಿಕೆಯಾಗಿದ್ದು, 2022ರ ಸೆ.28 ರಂದು ಮರು ಪರೀಕ್ಷೆ ನಡೆಸದಂತೆ ಸೂಚಿಸಿತ್ತು. ಆದರೆ ಇತ್ತೀಚೆಗಷ್ಟೇ ವಿಚಾರಣೆ ನಡೆಸಿದ್ದ ಹೈಕೋರ್ಟ್, ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿತ್ತು. ಈ ಮೂಲಕ ವಂಚನೆಗೊಳಗಾಗಿದ್ದ ಅಭ್ಯರ್ಥಿಗಳಿಗೆ ಸಮಾಧಾನ ನೀಡಿತ್ತು.
ಈಗ ರಾಜ್ಯ ಸರಕಾರ ಕೆಇಎಗೆ ಪರೀಕ್ಷಾ ಹೊಣೆ ಹೊರಿಸಿರುವುದರಿಂದ ಬಹುದೊಡ್ಡ ಜವಾಬ್ದಾರಿ ಈ ಸಂಸ್ಥೆ ಮೇಲೆ ಬಿದ್ದಂತಾಗಿದೆ. ಈಗಾಗಲೇ ಎಫ್ಡಿಎ ಪರೀಕ್ಷೆ ವೇಳೆ ಅಕ್ರಮಗಳಾಗಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದು ಮತ್ತೆ ಆರ್.ಡಿ.ಪಾಟೀಲ್‌ನನ್ನು ಬಂಧಿಸಲಾಗಿದೆ. ಇದರ ಮಧ್ಯೆಯೇ ಹೊಸ ಪರೀಕ್ಷೆ ನಡೆಸಬೇಕಾಗಿರುವುದರಿಂದ ಮೈಯೆಲ್ಲ ಎಚ್ಚರಿಕೆಯಿಂದ ಇರಬೇಕಾದದ್ದು ಅನಿವಾರ್ಯವಾಗಿದೆ.
ಸದ್ಯ ಕೆಇಎಗೆ ಸಿಇಟಿ ಜತೆಗೆ, ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ಪಿಡಿಒ, ಸಿವಿಲ್ ನ್ಯಾಯಾಧೀಶರು ಸೇರಿದಂತೆ ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷೆ ನಡೆಸಿದ ಅನುಭವವಿದೆ. ಹೀಗಾಗಿ ಈ ಪರೀಕ್ಷೆಯನ್ನೂ ಸರಿಯಾಗಿ ನಡೆಸಲಿದೆ ಎಂಬ ನಂಬಿಕೆ ಸರಕಾರದ್ದು. ಈಗ ಪಿಎಸ್‌ಐ ನೇಮಕಾತಿ ಪರೀಕ್ಷೆ ಮತ್ತು ಪಿಡಿಎ ಪರೀಕ್ಷೆಯಲ್ಲಿನ ಅಕ್ರಮಗಳಿಂದಾಗಿ, ಜನರಲ್ಲಿ ಸರಕಾರಗಳು ನಡೆಸುವ ನೇಮಕಾತಿ ಪರೀಕ್ಷೆಗಳ ಮೇಲೆ ಅಪನಂಬಿಕೆ ಮೂಡುವಂತಾಗಿದೆ. ಈ ಅಪನಂಬಿಕೆ ಹೋಗಬೇಕಾದರೆ ನ್ಯಾಯ ಸಮ್ಮತವಾಗಿ ಮತ್ತು ಶಿಸ್ತುಬದ್ಧವಾಗಿ ಪರೀಕ್ಷೆ ನಡೆಯಲೇಬೇಕು. ಇಲ್ಲದಿದ್ದರೆ ಸರಕಾರಿ ಹುದ್ದೆಗಳು ಕಾಸಿದ್ದವರಿಗೆ ಮಾತ್ರ ಎಂಬ ಮಾತು ನಿಜವಾಗುವ ಎಲ್ಲ ಅಪಾಯಗಳು ಇರುತ್ತವೆ. ಯಾರ ಮರ್ಜಿಗೂ ಬೀಳದಂತೆ, ಪಾರದರ್ಶಕವಾಗಿ ಪರೀಕ್ಷೆ ನಡೆಸಿದರೆ ಮಾತ್ರ ಜನರ ನಂಬಿಕೆ ವಾಪಸ್ ಬರಲು ಸಾಧ್ಯವಾಗುತ್ತದೆ. ಅಲ್ಲದೆ ಈ ಹಿಂದೆ ಪರೀಕ್ಷಾ ಅಕ್ರಮ ನಡೆಸಿದವರ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಿ, ಪರೀಕ್ಷೆ ಹೊತ್ತಲ್ಲಿ ಇವರ ಆಟ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸರಕಾರದ ಮೇಲಿದೆ ಎಂಬುದನ್ನು ಮರೆಯಬಾರದು. ಕೆಇಎ ತನ್ನ ಮೇಲಿನ ನಂಬಿಕೆ ಉಳಿಸಿಕೊಳ್ಳಲು ಇದೊಂದು ಅವಕಾಶ ಎಂಬಂತೆ ಪರಿಗಣಿಸಬೇಕು.