Advertisement

ಕನ್ನಡ ಉದ್ಯೋಗದ ಮಾಧ್ಯಮವಾಗಲಿ

10:28 PM Nov 03, 2019 | Lakshmi GovindaRaju |

ಮೈಸೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಕಣ್ಮರೆಯಾಗುತ್ತಿದೆ ಎಂಬ ಆತಂಕವಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಭಾಷೆಯ ಬೆಳವಣಿಗೆ ಆಶಾದಾಯಕವಾಗಿದೆ. ಇದರ ಜೊತೆಗೆ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರ ಗಮನಹರಿಸಬೇಕು. ಶಿಕ್ಷಣದ ಜೊತೆಗೆ ಉದ್ಯೋಗದ ಮಾಧ್ಯಮವಾಗಿ ಕನ್ನಡವನ್ನು ರೂಪಿಸಬೇಕು ಎಂದು ಮಹಾರಾಜ ಕಾಲೇಜು ಪ್ರಾಧ್ಯಾಪಕಿ ಕೆ.ಸೌಭಾಗ್ಯವತಿ ಹೇಳಿದರು.

Advertisement

ನಗರದ ಕೆ.ಜಿ.ಕೊಪ್ಪಲಿನ ನೇಗಿಲಯೋಗಿ ಮರುಳೇಶ್ವರ ಸೇವಾ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ವಿಚಾರಗೋಷ್ಠಿ, ಕರ್ನಾಟಕ ರಾಜ್ಯೋತ್ಸವ ಕವಿಗೋಷ್ಠಿ ಸಮಾರಂಭದಲ್ಲಿ “ಕನ್ನಡ ಬದುಕಿನ ಸಬಲೀಕರಣ ಸವಾಲುಗಳು ಮತ್ತು ಸಾಧ್ಯತೆಗಳು’ ಕುರಿತು ಮಾತನಾಡಿದರು.

ಕನ್ನಡಕ್ಕೆ 2 ಸಾವಿರ ವರ್ಷಗಳ ಇತಿಹಾಸ: ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಭಾಷೆ 2 ಸಾವಿರ ವರ್ಷಗಳ ಇತಿಹಾಸದಲ್ಲಿ ತನ್ನದೇ ಸಾಹಿತ್ಯ ಕೊಡುಗೆ ನೀಡಿದೆ. ಸ್ವತಂತ್ರ ಭಾರತದಲ್ಲಿ ಕನ್ನಡ ಭಾಷೆ, ಸಾಹಿತ್ಯ ಚಳವಳಿಯಾಗಿ ರೂಪುಗೊಂಡಿತು. ಅದಕ್ಕೆ ಸಾಹಿತಿಗಳು ಹಾಗೂ ಕನ್ನಡ ಪುರೋಹಿತರ ಕೊಡುಗೆ ಸ್ಮರಣೀಯ ಎಂದು ತಿಳಿಸಿದರು.

ನಮ್ಮ ಭಾಷೆಯನ್ನೇ ಕಲಿಸೋಣ: ಸಾಹಿತಿ ಕೆ.ಎಸ್‌.ಭಗವಾನ್‌ ಮಾತನಾಡಿ, ಕರ್ನಾಟಕದಲ್ಲಿ ಕೆಲವು ರಾಜಕಾರಣಿಗಳನ್ನು ಹೊರತು ಪಡಿಸಿ ಉಳಿದ ಯಾವುದೇ ರಾಜಕಾರಣಿಗಳಿಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ, ಪ್ರೇಮ, ವ್ಯಾಮೋಹ ಇಲ್ಲವೇ ಇಲ್ಲ. ಕರ್ನಾಟಕದಲ್ಲಿ ಸಾಹಿತಿಗಳಷ್ಟೇ ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ತಮಿಳುನಾಡಿನ ರಾಜಕಾರಣಿಗಳು ತಮ್ಮ ಭಾಷೆಯ ಬಗ್ಗೆ ಅತ್ಯಂತ ಅಭಿಮಾನ ಹೊಂದಿದ್ದಾರೆ.

ಇದರಿಂದ ತಮಿಳುನಾಡಿನಲ್ಲಿ ತಮಿಳು ಭಾಷೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲೇ ಕನ್ನಡವನ್ನು ಹುಡುಕಬೇಕಿರುವ ಪರಿಸ್ಥಿತಿ ಇದೆ. ಬೇರೆ ಯಾವುದೇ ಭಾಷೆಯವರು ನಮ್ಮಲ್ಲಿ ವ್ಯವಹರಿಸಿದಾಗ ನಾವು ಅದೇ ಭಾಷೆಯಲ್ಲಿ ಮಾತನಾಡುತ್ತೇವೆ. ಇದು ತಪ್ಪು ನಮ್ಮ ಭಾಷೆಯನ್ನು ಅವರಿಗೆ ಕಲಿಸಬೇಕು ಎಂದರು.

Advertisement

ಹೊಸ ಚಿಂತನೆಗಳು ಮುಖ್ಯ: ಕನ್ನಡ ಶಕ್ತಿಯುತ ಭಾಷೆ. ಈ ಭಾಷೆ ಬೆಳೆಯಲು ಕನ್ನಡದಲ್ಲಿ ಹೊಸ ಹೊಸ ಚಿಂತನೆಗಳನ್ನು ಹುಟ್ಟುಹಾಕಬೇಕಿದೆ. ತತ್ವಶಾಸ್ತ್ರ, ವಿಜ್ಞಾನ, ಭೌತಶಾಸ್ತ್ರ ಸೇರಿದಂತೆ ಯಾವುದೇ ವಿಚಾರವಾಗಿ ಹೊಸ ಚಿಂತನೆಗಳನ್ನು ಕನ್ನಡದಲ್ಲಿ ಹುಟ್ಟಿಹಾಕಿದರೆ ವಿಶ್ವವು ನಮ್ಮ ಭಾಷೆ ಕಲಿಯಲು ಒಲವು ತೋರುತ್ತದೆ. ಈ ನಿಟ್ಟಿನಲ್ಲಿ ಸಾಹಿತಿಗಳು, ವಿಜ್ಞಾನಿಗಳು, ಲೇಖಕರು ಹೊಸ ಹೊಸ ವಿಚಾರಗಳನ್ನು ಕನ್ನಡದಲ್ಲಿ ಹುಟ್ಟು ಕಾಕುವುದರ ಮೂಲಕ ಕನ್ನಡವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ಸಹಾಯಕ ಪೊಲೀಸ್‌ ಆಯುಕ್ತ ವಿ.ಮರಿಯಪ್ಪ ಮಾತನಾಡಿ, ಕನ್ನಡದ ನೆಲ, ಜಲ ಭಾಷೆಯ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ. ಹೋರಾಟದ ಮೂಲಕ ಅವುಗಳನ್ನು ತಡೆಗಟ್ಟಬೇಕು. ನಮ್ಮ ವೃತ್ತಿ ಬೇರೆ ಇದ್ದರೂ ಕನ್ನಡ ಕಟ್ಟುವ ಕೆಲಸದಲ್ಲಿ ನಾವು ಎಂದಿಗೂ ನಿಮ್ಮ ಜತೆ ಇರುತ್ತೇವೆ ಎಂದರು.

ಕರ್ನಾಟಕ ರಾಜ್ಯೋತ್ಸವ ಕವಿಗೋಷ್ಠಿ ನಡೆಯಿತು. ಎ.ಆರ್‌. ಮದನ್‌ಕುಮಾರ್‌, ಜಿ.ಮಾದಪ್ಪ, ಎಸ್‌.ಶಿವರಂಜನಿ, ಬಿ.ಮೂರ್ತಿ, ದುಂಡಯ್ಯ, ನಾಗೇಂದ್ರ ಹೆಬ್ಟಾರ, ಎಚ್‌.ಎಸ್‌.ಸೌಮ್ಯ, ಎಸ್‌.ಕಿರಣ್‌, ವಿ.ಸ್ವಾಮಿನಾಥ್‌, ಮಂಜುಳಾ, ಕೆ.ಆದೆಪ್ಪ, ಎಂ.ಪಿ.ಒಹಿಲಾ, ಎನ್‌.ಸಿದ್ದಪ್ಪಾಜಿ, ನಾಗಮಣಿ ವಿಜಯಕುಮಾರ್‌, ಮಮತಾ, ಕೆ.ಎಂ.ಮಿಲನಾ, ಎಂ.ಎನ್‌.ದಿನೇಶ್‌, ದಿವ್ಯಾ, ಶೃತಿ ಲಕ್ಷ್ಮಣ್‌, ಕೃಷ್ಣಪ್ಪ, ಕೆ.ಎಸ್‌.ಮಹೇಶ್ವರಿ, ಬೆಮೆಲ್‌ ರಮೇಶ್‌ ಶೆಟ್ಟಿ, ಎಸ್‌.ಶ್ವೇತ, ಹರೀಶ್‌, ನಾಗೇಶ್‌ ಕಾವ್ಯಪ್ರಿಯ, ಸೌಗಂ—ಕ ಜೋಯಿಸ್‌ ವಿವಿಧ ಆಶಯಗಳ ಕವಿತೆ ವಾಚಿಸಿದರು.

ಕನ್ನಡ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷ ಕೊಟ್ರೇಶ್‌ ಎಸ್‌.ಉಪ್ಪಾರ್‌, ಗೌರವಾಧ್ಯಕ್ಷ ಟಿ.ಸತೀಶ್‌ ಜವರೇಗೌಡ, ವೇದಿಕೆ ಜಿಲ್ಲಾಧ್ಯಕ್ಷ ಬಿ.ಬಸವರಾಜು, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್‌ ಅಧ್ಯಕ್ಷ ಡಿ.ರವಿಕುಮಾರ್‌, ಸವಿಗನ್ನಡ ಪತ್ರಿಕೆ ಸಂಪಾದಕ ರಂಗನಾಥ್‌ ಮೈಸೂರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next