Advertisement

ಬದುಕಿಗೆ ಬಾಧಕವಾಗದೆ ನಿರ್ಬಂಧ ಜಾರಿಗೆ ಬರಲಿ

12:51 AM Dec 04, 2021 | Team Udayavani |

ಕೊರೊನಾ ರೂಪಾಂತರ ಒಮಿಕ್ರಾನ್‌ ಪ್ರಕರಣಗಳು ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತುರ್ತು ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದು ಮಾರ್ಗ ಸೂಚಿ ಹೊರ ಡಿ ಸಿರುವುದು ಸ್ವಾಗತಾರ್ಹ. ಒಮಿಕ್ರಾನ್‌ ಜೀವಹಾನಿ ಮಾಡು ವಂತಹ ರೂಪಾಂತರಿ ಅಲ್ಲ ಎಂದು ತಜ್ಞರು ಹೇಳಿರುವುದು ಸಮಾಧಾನಕರ ಸಂಗತಿ. ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಸರಕಾರವು ಪರಿಸ್ಥಿತಿ ನಿಭಾಯಿಸಬಹುದಾಗಿದೆ.

Advertisement

ಪ್ರಮುಖವಾಗಿ ಒಮಿಕ್ರಾನ್‌ ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರಕಾರದ ಮೇಲಿದೆ. ಕೊರೊನಾ ಒಂದು ಹಾಗೂ ಎರಡನೇ ಅಲೆಯಿಂದ ಉದ್ಯಮ, ವ್ಯಾಪಾರ ಸೇರಿದಂತೆ ಎಲ್ಲ ವಲಯವೂ ಸಾಕಷ್ಟು ಸಂಕಷ್ಟ ಅನುಭವಿಸಿದೆ. ಈ ಹಂತದಲ್ಲಿ ಮತ್ತೆ ಒಮಿಕ್ರಾನ್‌ನಿಂದಾಗಿ ಸಂಕಷ್ಟ ಎದುರಾದರೆ ಭವಿಷ್ಯದ ಚಿತ್ರಣ ಊಹಿಸಲು ಅಸಾಧ್ಯವಾಗಲಿದೆ.

ರಾಜ್ಯ ಸರಕಾರವು ಕಟ್ಟುನಿಟ್ಟಿನ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ. ಅದು ಶಾಲೆ- ಕಾಲೇಜು, ಚಿತ್ರಮಂದಿರ, ಮಾಲ್‌, ಕಲ್ಯಾಣ ಮಂಟಪ, ಸಾರ್ವಜನಿಕ ಸ್ಥಳ, ಬಸ್‌, ರೈಲ್ವೇ, ವಿಮಾನ ನಿಲ್ದಾಣ ಎಲ್ಲೇ ಆಗಿರಲಿ. ಮಾರ್ಗಸೂಚಿ ಪಾಲಿಸದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು.

ಇದರ ಜತೆಯಲ್ಲೇ ಆರ್ಥಿಕ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರದಂತೆಯೂ ಎಚ್ಚರಿಕೆ ವಹಿಸಬೇಕು. ದೈನಂದಿನ ವ್ಯವ ಹಾರ ವಹಿವಾಟು, ಕೈಗಾರಿಕೆ, ಪ್ರವಾಸೋದ್ಯಮ ವಲಯಗಳು ಎಂದಿನಂತೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಬಗ್ಗೆಯೂ ಹೆಚ್ಚು ಒತ್ತು ಕೊಡಬೇಕು. ಇದರಿಂದ ಆರ್ಥಿಕ ವಲಯಕ್ಕೆ ನಷ್ಟವಾಗುವುದು ತಪ್ಪುತ್ತದೆ.

ಕೊರೊನಾ ಪರಿಸ್ಥಿತಿ ನಿವಾರಣೆಯಿಂದಾಗಿ ಉದ್ಯಮ ವಲಯ ನಿಟ್ಟುಸಿರು ಬಿಟ್ಟು ಸಹಜ ಸ್ಥಿತಿ ನಿರ್ಮಾಣವಾಗುವ ನಿರೀಕ್ಷೆಯಲ್ಲಿದ್ದಾರೆ. ಒಮಿಕ್ರಾನ್‌ನಿಂದಾಗಿ ಆತಂಕ, ಭೀತಿ ಎದುರಾಗದಂತೆ ನೋಡಿ ಕೊಳ್ಳ ಬೇಕಿದೆ. ಆರ್ಥಿಕ ಚೇತರಿಕೆಗೆ ಇದು ಸಹಕಾರಿಯೂ ಸಹ. ವಾಣಿಜ್ಯೋದ್ಯಮ ಸಂಘಟನೆಗಳನ್ನೂ ಈ ನಿಟ್ಟಿನಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರ ಮುನ್ನಡೆಯಬೇಕಾಗಿದೆ.

Advertisement

ತತ್‌ಕ್ಷಣಕ್ಕೆ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳು ಒಳ್ಳೆಯ ಹಾದಿಯಲ್ಲಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹ ಸರ್ವ ರೀತಿಯಲ್ಲಿ ಸಜ್ಜಾಗಿರುವುದು ಉತ್ತಮವಾದ ಬೆಳವಣಿಗೆ. ಇದರಲ್ಲಿ ಸಾರ್ವಜನಿಕರ ಹೊಣೆಗಾರಿಕೆಯೂ ಹೆಚ್ಚಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್‌ ಬಳಕೆ, ಅನಗತ್ಯವಾಗಿ ಗುಂಪು ಸೇರದಿರುವುದು, ಮದುವೆ, ಸಭೆ, ಸಮಾರಂಭಗಳಲ್ಲಿ ಸ್ವಯಂ ಮಿತಿ ಹೇರಿಕೊಂಡು ಕಡಿಮೆ ಜನರನ್ನು ಸೇರುವಂತೆ ನೋಡಿಕೊಳ್ಳಬೇಕಿದೆ.

ಸರಕಾರದ ಮಾರ್ಗಸೂಚಿ ಪಾಲನೆ ಮೂಲಕ ಜವಾಬ್ದಾರಿ ನಿಭಾಯಿ ಸಬೇಕಾಗಿದೆ. ಹಿಂದಿನ ಎರಡು ಅಲೆಗಳ ಸಂದರ್ಭಗಳಲ್ಲಿ ಮಾರ್ಗಸೂಚಿ ಜಾರಿ ಮಾಡಿದ್ದಾಗ ಕೆಲವು ಇಲಾಖೆಗಳ ಅಧಿಕಾರಿಗಳು ಅತ್ಯುತ್ಸಾಹ ತೋರಿಸುವ ನಿಟ್ಟಿನಲ್ಲಿಯೋ, ಕಟ್ಟುನಿಟ್ಟಿನಲ್ಲಿ ನಿಯಮಗಳನ್ನು ಜಾರಿ ಮಾಡಲಾಗುತ್ತಿದೆ ಎನ್ನುವುದನ್ನು ತೋರಿಸಿ ಕೊಳ್ಳುವುದಕ್ಕೆ ಎಂದು ಅತಿರೇಕವಾಗಿ ವರ್ತಿಸಿದ ಉದಾಹರಣೆಗಳು ಇವೆ. ಅಂಥ ಅನಪೇಕ್ಷಿತ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವ ಹೊಣೆ ಅಧಿಕಾರಿಗಳಿಗೆ ಮಾತ್ರವಲ್ಲ, ಸಾರ್ವಜನಿಕರಿಗೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next