ಭದ್ರಾವತಿ: ಭಗವಂತನ ನಾಮಸ್ಮರಣೆಯನ್ನು ಅವರವರ ಭಾಷೆಗಳಲ್ಲಿ ವಿನಯಪೂರ್ವಕವಾಗಿ ಯಾಚಿಸುವವನೇ ನಿಜವಾದ ಅರ್ಚಕ ಎಂದು ಡಾ| ನರೇಂದ್ರ ಭಟ್ ಹೇಳಿದರು.
ಜನ್ನಾಪುರದ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಶ್ರೀ ಧರ್ಮ ಜಾಗರಣ ಅರ್ಚಕರ ಮಹಾಸಭಾದ 18 ನೇ ವಾರ್ಷಿಕೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಭಗವಂತನ ರೂಪವಾಗಿರುವ ನಮ್ಮ ತಂದೆ-ತಾಯಿಯನ್ನು ಪ್ರೀತಿಯಿಂದ ಗೌರವಯುತವಾಗಿ ಕಾಣಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಮ್ಮಲ್ಲಿರುವ ಧರ್ಮಪ್ರಜ್ಞೆ ಹಾಗು ಸಂಸ್ಕಾರ ನಮ್ಮ ಜೀವನದ ಆಸ್ತಿಯಾಗಬೇಕು. ಸತ್ಯ, ಪ್ರಾಮಾಣಿಕತೆ, ನಡೆ- ನುಡಿ, ಆಚಾರ ವಿಚಾರಗಳಲ್ಲಿ ಯಾವುದೇಲೋಪವಿಲ್ಲದಂತೆ ನಡೆದುಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎನ್.ಎಸ್. ಕೃಷ್ಣಮೂರ್ತಿ ಸೋಮಯಾಜಿ, ಅರ್ಚಕರಲ್ಲಿ ಯಾವುದೇ ಜಾತಿ ಮತ ಬೇಧವಿರುವುದಿಲ್ಲ. ಎಲ್ಲಾ ಜಾತಿಯ ಅರ್ಚಕರು ಕೂಡ ದೇವರನ್ನು ಆರಾ ಧಿಸುವ ಮೂಲಕ ಧರ್ಮದ ಅರಿವನ್ನು, ದೈವಾನುಗ್ರಹದ ಮಹತ್ವವನ್ನು ಭಕ್ತರಿಗೆ ತಿಳಿಸಿವ ಕೆಲಸ ಮಾಡುತ್ತಿರುತ್ತಾರೆ ಎಂದರು.
ಇದನ್ನೂ ಓದಿ:ಸರ್ಕಾರಿ ಶಾಲೆಗೆ ಅಭಿವೃದ್ಧಿಗೆ ಬದ್ಧ
ಕಾರ್ಯಕ್ರಮದಲ್ಲಿ 5 ಹಿರಿಯ ಅರ್ಚಕ ದಂಪತಿಯನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ಅಧ್ಯಕ್ಷಎಸ್.ವಿ. ರಾಮಾನುಜ ಅಯ್ಯಂಗಾರ್ ಅಧ್ಯಕ್ಷತೆ ವಹಿಸಿದ್ದರು. ಮುರಳೀಧರ ಶರ್ಮ, ಜೆ.ಪಿ. ಗಣೇಶ್‌ಪ್ರಸಾದ್, ಡಿ. ಸಂಜೀವಕುಮಾರ್, ಎಂ. ಸತೀಶ್ ಭಟ್ರಾ, ಸುರೇಶ್, ಪ್ರಮೋದ್‌ಕುಮಾರ್ ಮತ್ತಿತರರು ಇದ್ದರು.