ಚೊಚ್ಚಲ ಬಜೆಟ್ ಮಂಡನೆಗೆ ಸಜ್ಜಾಗುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದೆ ಸಂಪನ್ಮೂಲ ಕ್ರೋಡೀಕರಣ, ಹೊಸ ಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನದ ದೊಡ್ಡ ಸವಾಲು ಇದೆ.
ಕೊರೊನಾ ಲಾಕ್‌ಡೌನ್, ಪ್ರವಾಹದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಎರಡು ವರ್ಷಗಳಿಂದ ಸಂಕಷ್ಟಕ್ಕೀಡಾಗಿದ್ದು ಇದೀಗಷ್ಟೇ ಚೇತರಿ ಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ಆದರೆ ಜಿಎಸ್‌ಟಿ ಪರಿಹಾರ 2022ಕ್ಕೆ ಮುಕ್ತಾಯವಾಗುವ ಆತಂಕ, ಕೇಂದ್ರದ ಸಹಾಯಧನ, ತೆರಿಗೆ ಹಂಚಿಕೆ ಪ್ರಮಾಣ ಇಳಿಕೆ ಮತ್ತಿತರ ಕಾರಣಗಳಿಂದ 2022-23ನೇ ಸಾಲಿನ ಬಜೆಟ್‌ನಲ್ಲಿ ಹಣಕಾಸು ಹೊಂದಾಣಿಕೆ ಮಾಡಲು ಹರಸಾಹಸ ಮಾಡಬೇಕಾಗಿರುವುದಂತೂ ಹೌದು.
ಜತೆಗೆ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕಾರಣ ಈ ಬಾರಿಯ ಬಜೆಟ್ ಚುನಾವಣೆ ಬಜೆಟ್ ಎಂದೇ ಬಿಂಬಿಸ ಲಾಗಿದೆ. ಹೀಗಾಗಿ ಆಡಳಿತ ಪಕ್ಷದ ಶಾಸಕರಷ್ಟೇ ಅಲ್ಲದೆ ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೈಗಾರಿಕೆ, ಪ್ರವಾಸೋದ್ಯಮ ವಲಯದ ಬೇಡಿಕೆಗಳೂ ಹೆಚ್ಚಾಗಿವೆ. ಶಿಕ್ಷಣ, ಆರೋಗ್ಯ, ಆಹಾರ ಮತ್ತು ನಾಗರಿಕ ಪೂರೈಕೆ, ಇಂಧನ, ಕೃಷಿ, ತೋಟಗಾ ರಿಕೆ, ಕಂದಾಯ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ಸಮಾಜ ಕಲ್ಯಾಣ ಇಲಾಖೆಗಳ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲೇ ಇವೆ.
ರಾಜ್ಯದ ಪ್ರತೀ ಜಿಲ್ಲೆಯಿಂದಲೂ ಬಜೆಟ್‌ನಲ್ಲಿ ಹೊಸ ಯೋಜನೆಗಳು ಹಾಗೂ ಕಾರ್ಯಕ್ರಮ, ಈ ಹಿಂದೆ ಘೋಷಣೆಯಾದ ಯೋಜನೆಗಳಿಗೆ ಅನುದಾನ ಒದಗಿಸುವ ಬೇಡಿಕೆ ಇದೆ. ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಪಾಲ್ಗೊಂಡಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ, ಎಫ್ಕೆಸಿಸಿಐ, ರೈತ ಸಂಘ ಟನೆಗಳು ಹೀಗೆ ಪ್ರತಿಯೊಬ್ಬರೂ ತಮ್ಮ ತಮ್ಮ ವಲಯಕ್ಕೆ ಹೊಸ ಯೋಜನೆ ರೂಪಿಸಲು ಬೇಡಿಕೆ ಇಟ್ಟಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಬಜೆಟ್ ನಿರೀಕ್ಷೆಗಳ ದೊಡ್ಡ ಪಟ್ಟಿಯೇ ಇದೆ. ರಾಜ್ಯ ಬಿಜೆಪಿ ಸರಕಾರದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಹೊಣೆಗಾರಿಕೆಯೂ ಇದೆ. 2023 ಚುನಾ ವಣೆ ವರ್ಷ ಆಗಿರುವುದರಿಂದ ಪ್ರಣಾಳಿಕೆಯ ಎಲ್ಲ ಆಶ್ವಾಸನೆ ಈಡೇರಿಸ ಬೇಕು. ಹಾಗೆಯೇ ಇದು ಬೊಮ್ಮಾಯಿ ಅವರು ಮಂಡಿಸುತ್ತಿರುವ ಈ ಸರಕಾರದ ಕಡೆಯ ಮತ್ತು ಈ ಸರಕಾರವೇ ಅನುಷ್ಠಾನ ಮಾಡಬಹುದಾದ ಪೂರ್ಣ ಬಜೆಟ್.
ಮತ್ತೊಂದು ಬಜೆಟ್ ಮಂಡನೆಯ ಅವಕಾಶ ಇದ್ದರೂ ಅದು ಕೇವಲ ಲೇಖಾನುದಾನದ ರೀತಿ ಇರುತ್ತದೆ. ಜತೆಗೆ ಅನುಷ್ಠಾನ ಚುನಾವಣೆ ಅನಂತರದ ಸರಕಾರದ ಜವಾಬ್ದಾರಿಯಾಗಿರುತ್ತದೆ ಆದರೆ ಮುಂದಿನ ವರ್ಷ ಚುನಾವಣೆ ಇರುವುದರಿಂದ ಈ ಬಜೆಟ್‌ನಲ್ಲಿ ಘೋಷಣೆಯಾದ ಕಾರ್ಯಕ್ರಮ ಹಾಗೂ ಯೋಜನೆಗಳಿಗೆ ಮಹತ್ವವಿದೆ. ಇದರ ಜಾರಿ ಬಗ್ಗೆಯೂ ವಿಪಕ್ಷಗಳೂ ನಿಗಾ ವಹಿಸಿರುತ್ತವೆ.
ಅತ್ತ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ, ಕೇಂದ್ರದಿಂದ ಬರುವ ತೆರಿಗೆ ಹಂಚಿಕೆ ಹಾಗೂ ಅನುದಾನ, ಜಿಎಸ್‌ಟಿ ಪರಿಹಾರ ಮುಂದುವರಿಯದಿದ್ದರೆ ಎದುರಾಗಬಹುದಾದ ಸಂಕಷ್ಟ ಎಲ್ಲವನ್ನೂ ನೋಡಿ ಕೊಂಡೇ ಬಜೆಟ್ ರೂಪಿಸಬೇಕಾಗುತ್ತದೆ. ನಮ್ಮ ಬದ್ಧತೆ ಮತ್ತು ರಾಜ್ಯದ ಅಭಿವೃದ್ಧಿಯ ಬಗೆಗಿನ ಸ್ಪಷ್ಟತೆ ಬಜೆಟ್‌ನಲ್ಲಿ ತೋರಿಸುತ್ತೇವೆ ಎಂದು ಖುದ್ದು ಮುಖ್ಯಮಂತ್ರಿಯವರು ವಿಧಾನಸಭೆಯಲ್ಲಿ ಹೇಳಿದ್ದಾರೆ. ಹೀಗಾಗಿ ಹಣಕಾಸು ಖಾತೆಯ ಹೊಣೆಗಾರಿಕೆಯೂ ವಹಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಬಾರಿಯ ಬಜೆಟ್ ಸವಾಲೇ ಸರಿ.