ಚಿತ್ರದುರ್ಗ: ಭಾರತವನ್ನು 2025ರೊಳಗೆ ಕ್ಷಯಮುಕ್ತ ದೇಶವನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ| ಸಿ.ಒ. ಸುಧಾ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ, ಜಿಲ್ಲಾ ಕ್ಷಯಯೋಗ ನಿರ್ಮೂಲನಾಧಿಕಾರಿ ಕಚೇರಿ, ಜಿಲ್ಲಾ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷಯ ರೋಗದಿಂದ ಯಾವ ರೋಗಿಯೂ ಮರಣ ಹೊಂದಬಾರದು ಎಂಬ ಉದ್ದೇಶದಿಂದ ಚಿಕಿತ್ಸಾ ಅವಧಿಯಲ್ಲಿ ಕ್ಷಯ ರೋಗಿಗಳ ಪೌಷ್ಟಿಕ ಆಹಾರಕ್ಕಾಗಿ ಪ್ರತಿ ತಿಂಗಳು 500 ರೂ.ಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.
ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸಮುದಾಯ, ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಹಾಗೂ ಪ್ರಧಾನಿ ಆಶಯದಂತೆ ಎಲ್ಲರೂ ಒಟ್ಟಾಗಿ 2025ರೊಳಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡಬೇಕು ಹಾಗೂ ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ದೇಶ, ರಾಜ್ಯದಿಂದ ಕ್ಷಯಮುಕ್ತ ಮಾಡಬಹುದಾಗಿದೆ ಎಂದು ಆಶಿಸಿದರು.
ಬಸವೇಶ್ವರ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ| ಬಸವರಾಜ್ ಸಂಗೊಳ್ಳಿ ಮಾತನಾಡಿ, ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಕ್ಷಯ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ರೋಗದ ಬಗ್ಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.
ಎರಡು ವಾರದ ಬಳಿಕವೂ ಕೆಮ್ಮು ಇದ್ದರೆ ಅಂಥವರನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿ ಅವರಿಗೆ ಚಿಕಿತ್ಸೆ ಕೊಡಿಸಬೇಕು. ಇದು ವಾಸಿಯಾಗದಂತಹ ಕಾಯಿಲೆಯೇನಲ್ಲ. ಸರಿಯಾಗಿ ಚಿಕಿತ್ಸೆ ತೆಗೆದುಕೊಂಡರೆ ಸಂಪೂರ್ಣ ಗುಣಮುಖರಾಗಬಹುದು. ನಿತ್ಯ ಜೀವನದಲ್ಲಿ ಉತ್ತಮ ಆರೋಗ್ಯ ರೂಢಿಸಿಕೊಳ್ಳುವುದರಿಂದ ಯಾವುದೇ ರೋಗಗಳು ನಮ್ಮ ಬಳಿ ಸುಳಿಯುವುದಿಲ್ಲ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಾಯುಪುತ್ರ ಆಸ್ಪತ್ರೆಯ ಶ್ವಾಸಕೋಶ ತಜ್ಞ ಜಗದೀಶ್, ಹಿರಿಯೂರು ವೈದ್ಯಾಧಿಕಾರಿ ವಿದ್ಯಾಶ್ರೀ, ನಿವಾಸಿ ವೈದ್ಯಾಧಿಕಾರಿ ಆನಂದ್‌ಪ್ರಕಾಶ್, ಮಕ್ಕಳ ತಜ್ಞ ಡಾ| ರಾಕೇಶ್, ಚಳ್ಳಕೆರೆ ವೈದ್ಯಾಧಿಕಾರಿ ವೀರೇಶ್, ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಜಾನಕಿ, ಮಾರುತಿ ಪ್ರಸಾದ್, ಆಶಾ ಕಾರ್ಯಕರ್ತೆಯರು, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು.