ನವದೆಹಲಿ: ಕರ್ತಾರ್ಪುರ ಕಾರಿಡಾರ್ ವಿಚಾರದಲ್ಲಿ ಭಾರತದತ್ತ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೂಗ್ಲಿ ಎಸೆದಿದ್ದಾರೆ ಎಂದು ಪಾಕ್ ವಿದೇಶಾಂಗ ಸಚಿವ ಷಾ ಮೊಹಮ್ಮದ್ ಖುರೇಶಿ ಹೇಳಿದ್ದಕ್ಕೆ ಭಾರತ ತಕ್ಕ ತಿರುಗೇಟು ನೀಡಿದೆ. ಈ ಬಗ್ಗೆ ಪ್ರಧಾನಿ ಇಮ್ರಾನ್ ಖಾನ್ ಸ್ಪಷ್ಟೀಕರಣ ನೀಡಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಈ ವಿಚಾರ ಪಾಕಿಸ್ತಾನಕ್ಕೆ ಮುಜುಗರ ಉಂಟು ಮಾಡುತ್ತಿದೆ ಎಂದು ತಿಳಿಯುತ್ತಿ ದ್ದಂತೆಯೇ ಪಾಕ್ ವಿದೇಶಾಂಗ ಸಚಿವಾ ಲಯವು ಸ್ಪಷ್ಟನೆ ನೀಡಿದ್ದು, ಭಾರತದ ಮಾಧ್ಯಮಗಳಲ್ಲಿ ಈ ಬಗ್ಗೆ ಋಣಾತ್ಮಕವಾಗಿ ವರದಿ ಮಾಡಲಾಗುತ್ತಿದೆ. ಕರ್ತಾರ್ಪುರ ಕಾರಿಡಾರ್ ನಿರ್ಮಾಣ ಕ್ರಮವು ಸಿಖ್ ಸೋದರರ ದೀರ್ಘಕಾಲೀನ ಸಮಸ್ಯೆ ನಿವಾರಣೆಯ ಉದ್ದೇಶವಷ್ಟೇ ಆಗಿದೆ ಎಂದು ಹೇಳಿದೆ. ಅಷ್ಟೇ ಅಲ್ಲ, ಖುರೇಶಿ ಕೂಡ ಸ್ಪಷ್ಟನೆ ನೀಡಿ ಇದರಲ್ಲಿ ಯಾವುದೇ ಗೂಗ್ಲಿ ಇಲ್ಲ ಎಂದಿದ್ದಾರೆ.
ಖುರೇಶಿ ಹೇಳಿಕೆಯನ್ನು ಶನಿವಾರ ಖಂಡಿಸಿದ ಸುಷ್ಮಾ, ನೇಪಾಳ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್ ಜೊತೆಗೆ ನಾವು ಉತ್ತಮ ಸಂಬಂಧ ಹೊಂದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಕ್ಕಾಗಿ ಸಾರ್ಕ್ ನಾಯಕರು ಹಾಗೂ ಪಾಕ್ ಪ್ರಧಾನಿಯಾಗಿದ್ದ ನವಾಜ್ ಷರೀಫ್ರನ್ನು ಆಹ್ವಾನಿಸ ಲಾಗಿತ್ತು. ಪಾಕಿಸ್ತಾನದೊಂದಿಗೆ ಯಾಕೆ ಸಂಬಂಧ ಚೆನ್ನಾಗಿಲ್ಲ ಎಂಬುದನ್ನು ವಿಶ್ವವೇ ತಿಳಿದಿದೆ ಎಂದಿದ್ದಾರೆ.
ಸಿಖ್ ಧರ್ಮಗುರು ಗುರುನಾನಕರು ಹಲವು ವರ್ಷಗಳವರೆಗೆ ವಾಸ ಮಾಡಿದ್ದ ಕರ್ತಾರ್ಪುರಕ್ಕೆ ತೆರಳಲು ಕಾರಿಡಾರ್ ನಿರ್ಮಿಸುವ ಸಂಬಂಧ ಭಾರತದ ಜೊತೆಗೆ ಕೈಜೋಡಿಸಿದ ಪಾಕಿಸ್ತಾನ ಕೆಲವೇ ದಿನಗಳ ಹಿಂದೆ ಶಂಕುಸ್ಥಾಪನೆ ನೆರವೇರಿಸಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಹರಸಿಮ್ರತ್ ಕೌರ್ ಹಾಗೂ ಹದೀಪ್ ಸಿಂಗ್ ಪುರಿ ಭಾಗವಹಿಸಿದ್ದರು. ಅಲ್ಲದೆ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಭಾಗವಹಿಸಿದ್ದು ತೀವ್ರ ವಿವಾದಕ್ಕೀಡಾಗಿತ್ತು.
ಸಿಧು ರಾಜೀನಾಮೆಗೆ ಒತ್ತಾಯ: ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಗೆ ತೆರಳಿ ಬಂದ ನಂತರದಲ್ಲಿ ಎದ್ದ ವಿವಾದದ ಹಿನ್ನೆಲೆಯಲ್ಲಿ ಸಚಿವ ನವಜೋತ್ ಸಿಂಗ್ ಸಿಧು ರಾಜೀನಾಮೆಗೆ ಪಂಜಾಬ್ ಸಚಿವ ತೃಪ್ತ ರಾಜಿಂದರ್ ಸಿಂಗ್ ಬಾಜ್ವಾ ಆಗ್ರಹಿಸಿದ್ದಾರೆ. ನನಗೆ ರಾಹುಲ್ ಗಾಂಧಿಯೇ ಕ್ಯಾಪ್ಟನ್. ಅವರ ಅನು ಮತಿಯ ಮೇರೆಗೆ ನಾನು ಪಾಕಿಸ್ತಾನಕ್ಕೆ ಹೋಗಿದ್ದೆ ಎಂದು ಸಿಧು ಹೇಳಿದ್ದು, ಸಿಎಂ ಅಮರಿಂದರ್ ಸಿಂಗ್‌ರನ್ನು ಅವ ಮಾನಿಸಿದ್ದಾರೆ ಎಂದು ರಾಜಿಂದರ್ ಸಿಂಗ್ ಆರೋಪಿಸಿದ್ದಾರೆ. ಇನ್ನೊಂದೆಡೆ, ಸಿಧು ಶನಿವಾರ ಉಲ್ಟಾ ಹೊಡೆದಿದ್ದು, ಪಾಕ್‌ಗೆ ಹೋಗುವಂತೆ ರಾಹುಲ್ ನನಗೆ ಹೇಳಿರಲಿಲ್ಲ ಎಂದಿದ್ದಾರೆ.