Advertisement

ಇತಿಹಾಸ ನಿರ್ಮಿಸಲಿ ಅಮಿತ್‌, ಮನೀಷ್‌

01:46 AM Sep 20, 2019 | Team Udayavani |

ಎಕಟೆರಿನ್‌ಬರ್ಗ್‌ (ರಶ್ಯ): ಭಾರತದ ಖ್ಯಾತ ಬಾಕ್ಸರ್‌ಗಳಾದ ಅಮಿತ್‌ ಪಂಘಲ್‌ (52 ಕೆಜಿ) ಮತ್ತು ಮನೀಷ್‌ ಕೌಶಿಕ್‌ (63 ಕೆಜಿ) ಇತಿಹಾಸದ ಹೊಸ್ತಿಲಲ್ಲಿದ್ದಾರೆ. ಇಬ್ಬರೂ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಸೆಮಿಫೈನಲಿಗೆ ಏರಿದ್ದು, ದೊಡ್ಡ ಪದಕದ ಭರವಸೆ ಮೂಡಿಸಿದ್ದಾರೆ. ಶುಕ್ರವಾರ ಉಪಾಂತ್ಯ ಸ್ಪರ್ಧೆಗಳು ನಡೆಯಲಿವೆ.

Advertisement

ಹಾಗೆ ನೋಡಹೋದರೆ, ಹರ್ಯಾಣದ ಈ ಬಾಕ್ಸರ್‌ಗಳಿಬ್ಬರೂ ಈಗಾಗಲೇ ಇತಿಹಾಸ ನಿರ್ಮಿಸಿ ಆಗಿದೆ. ವಿಶ್ವ ಬಾಕ್ಸಿಂಗ್‌ ಪಂದ್ಯಾವಳಿ ಯೊಂದರಲ್ಲಿ ಭಾರತದ ಇಬ್ಬರು ಸ್ಪರ್ಧಿಗಳು ಸೆಮಿಫೈನಲ್‌ ತಲುಪಿದ್ದು ಇದೇ ಮೊದಲು. ಇವರೀಗ ಫೈನಲ್‌ಗೆ ಲಗ್ಗೆ ಇಡಬಹುದೇ, ಚಿನ್ನ ಅಥವಾ ಬೆಳ್ಳಿ ಗೆಲ್ಲಬಹುದೇ ಎಂಬುದು ಮುಂದಿನ ಕುತೂಹಲ.

ಈವರೆಗೆ ಭಾರತ ಬಾಕ್ಸಿಂಗ್‌ ವಿಶ್ವ
ಚಾಂ ಪಿಯನ್‌ಶಿಪ್‌ನಲ್ಲಿ ಕೇವಲ 4 ಪದಕ ಜಯಿಸಿದ್ದು, ಕೂಟವೊಂದರಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದದ್ದಿಲ್ಲ, ಮತ್ತು ಇವೆಲ್ಲವೂ ಕಂಚಿನ ಪದಕಗಳೇ ಆಗಿವೆ.

ಘಟಾನುಘಟಿ ಎದುರಾಳಿಗಳು
ಇವರಿಬ್ಬರ ಮುಂದೆ ಕಠಿನ ಸವಾಲು ಇರುವುದನ್ನು ಮರೆಯುವಂತಿಲ್ಲ. ಅಮಿತ್‌ ಪಂಘಲ್‌ ಕಜಾಕ್‌ಸ್ಥಾನದ ಪ್ರಬಲ ಎದುರಾಳಿ ಸಾಕೆನ್‌ ಬಿಬೊಸ್ಸಿನೋವ್‌ ವಿರುದ್ಧ ಸೆಣಸಬೇಕಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಇವರು “ಯುರೋಪಿಯನ್‌ ಚಾಂಪಿಯನ್‌’, ಅಮೆರಿಕದ 6ನೇ ಶ್ರೇಯಾಂಕದ ಆರ್ಥರ್‌ ಹೊವಾನಿಸ್ಯನ್‌ಗೆ ಸೋಲುಣಿಸಿದ್ದಾರೆ.

ಮನೀಷ್‌ ಕೌಶಿಕ್‌ ಕ್ಯೂಬಾದ ಅಗ್ರ ಶ್ರೇಯಾಂಕದ ಆ್ಯಂಡಿ ಗೋಮೆಜ್‌ ಕ್ರುಝ್ ವಿರುದ್ಧ ಸೆಣಸಲಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಕ್ರುಝ್ ರಶ್ಯದ 8ನೇ ಶ್ರೇಯಾಂಕದ ಪೊಪೋವ್‌ ವಿರುದ್ಧ ಜಯ ಸಾಧಿಸಿದ್ದರು. ಕ್ರುಝ್ 2017ರ ಆವೃತ್ತಿಯ ವಾಲ್ಟರ್‌ವೆàಟ್‌ 64 ಕೆಜಿ ವಿಭಾಗದಲ್ಲಿ ಚಿನ್ನ ಜಯಿಸಿದ ಸಾಧಕನಾಗಿದ್ದಾರೆ. ಜತೆಗೆ 2 ಬಾರಿ ಪಾಮ್‌ ಅಮೆರಿಕನ್‌ ಚಾಂಪಿಯನ್‌ ಕೂಡ ಆಗಿದ್ದಾರೆ.

Advertisement

ಅಮಿತ್‌, ಮನೀಷ್‌ ಇಬ್ಬರೂ ಎದುರಾಳಿಗಳ ವೀಡಿಯೊ ವೀಕ್ಷಿಸಿ ಸೆಮಿಫೈನಲ್‌ ಸ್ಪರ್ಧೆಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಪದಕಗಳ ಹೊಳಪು ಹೆಚ್ಚಬೇಕು
“ಇಬ್ಬರ ಮುಂದೆಯೂ ಕಠಿನ ಸವಾಲಿದೆ. ಇಬ್ಬರೂ ಪದಕಗಳನ್ನು ಖಾತ್ರಿಗೊಳಿಸಿದ್ದಾರೆ, ಆದರೆ ಪದಕಗಳ ಹೊಳಪು ಹೆಚ್ಚಬೇಕೆಂಬುದು ನಮ್ಮ ಆಸೆ’ ಎಂಬುದಾಗಿ ಭಾರತೀಯ ಬಾಕ್ಸಿಂಗ್‌ ನಿರ್ದೇಶಕ ಸ್ಯಾಂಟಿಯಾಗೊ ನೀವ ಹೇಳಿದ್ದಾರೆ.

“ನನಗೆ ಸಂತೋಷವಾಗಿದೆ. ಆದರೆ ಇದು ಪೂರ್ಣ ಪ್ರಮಾಣದ ಸಂತಸವಲ್ಲ. ಇಬ್ಬರೂ ಫೈನಲ್‌ ಪ್ರವೇಶಿಸಬೇಕು. ಆ ವಿಶ್ವಾಸ ಇದೆ. ಇವರಿಬ್ಬರೂ ಅಂಡರ್‌ ಡಾಗ್ಸ್‌ ಆಗಿದ್ದಾರೆ’ ಎಂಬುದು ಪ್ರಧಾನ ಕೋಚ್‌ ಸಿ.ಎ. ಕುಟ್ಟಪ್ಪ ಹೇಳಿಕೆ.

ಒಲಿಂಪಿಕ್‌ ಅರ್ಹತಾ ಸುತ್ತಿಗೆ ನೇರ ಪ್ರವೇಶ
ವಿಶ್ವ ಬಾಕ್ಸಿಂಗ್‌ನಲ್ಲಿ ಪದಕಗಳನ್ನು ಖಾತ್ರಿಗೊಳಿಸಿದ ಸಾಧನೆಯಿಂದಾಗಿ ಅಮಿತ್‌ ಪಂಘಲ್‌ ಮತ್ತು ಮನೀಷ್‌ ಕೌಶಿಕ್‌ ಇಬ್ಬರೂ ಒಲಿಂಪಿಕ್‌ ಅರ್ಹತಾ ಸುತ್ತಿಗೆ ನೇರ ಪ್ರವೇಶ ಪಡೆದಿದ್ದಾರೆ. ಈ ಸ್ಪರ್ಧೆ ಮುಂದಿನ ಫೆಬ್ರವರಿಯಲ್ಲಿ ಚೀನದಲ್ಲಿ ನಡೆಯಲಿದೆ.

“ಇಬ್ಬರಿಗೂ ಪದಕ ಒಲಿಯುವುದು ಖಚಿತವಾದ್ದರಿಂದ ಅಮಿತ್‌ ಮತ್ತು ಮನೀಷ್‌ ನೇರವಾಗಿ ಒಲಿಂಪಿಕ್‌ ಅರ್ಹತಾ ಸುತ್ತು ಪ್ರವೇಶಿಸಲಿದ್ದಾರೆ. ಇವರಿನ್ನು ಯಾವುದೇ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಬೇಕಿಲ್ಲ’ ಎಂದು ಸ್ಯಾಂಟಿಯಾಗೊ ನೀವ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next