ದಾವಣಗೆರೆ: ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಎಲ್ಲರಂತೆ ನಮ್ಮ ಮನೆಗೂ ಬಂದು ಪ್ರಚಾರ ಮಾಡಿದ್ದಾರೆ. ಅಷ್ಟಕ್ಕೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಅಂದರೆ ಏನು ಅರ್ಥ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಖಾರವಾಗಿ ಪ್ರಶ್ನಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಚಾರದ ಸಂದರ್ಭದಲ್ಲಿ ನಮ್ಮ ಮನೆಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಬಂದಿದ್ದು ನಿಜ. ನಮ್ಮ ಗ್ರಾಮದಲ್ಲಿ ಪ್ರಚಾರಕ್ಕೆ ಬಂದಿದ್ದರು. ನಮ್ಮ ಮನೆಗೂ ಬಂದು ಮತಯಾಚನೆ ಮಾಡಿದ್ದಾರೆ. ಹಾಗಂತ ನಾವು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಅಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.
ಸಿದ್ದೇಶ್ವರ್ ಅವರು ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಸಲ ಗೆದ್ದು, ಒಂದು ಸಲ ಸೋತಿದ್ದಕ್ಕೆ ಆತಂಕ ಪಡುವ ಅಗತ್ಯ ಇಲ್ಲ. ಒಂದಷ್ಟು ದಿನ ಯಾವುದಾದರೂ ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ ಎನ್ನುವ ಮೂಲಕ ಟಾಂಗ್ ನೀಡಿದರು.
ನಾನು ಸಹ ಐದು ಸಲ ಗೆದ್ದು, ಐದು ಸಲ ಸೋತಿದ್ದೇನೆ. ನಾನೂ ಸೋತಾಗ ಸಿಕ್ಕ ಸಿಕ್ಕವರ ಮೇಲೆ ಆರೋಪ ಮಾಡುತ್ತಾ ಸುತ್ತಾಡಲಿಲ್ಲ. ಹಿಂದೆ ಬಿಜೆಪಿಯವರು ಚುನಾವಣಾ ಪ್ರಚಾರಕ್ಕೆ ಹೋದಾಗ ಕಲ್ಲು, ಕಣಗ ತೆಗೆದುಕೊಂಡು ಜನ ಹೊಡೆಯಲು ಬರುತ್ತಿದ್ದರು. ಈಗ ಆ ವಾತಾವಣ ಇಲ್ಲ. ನೀವು ಸೋತಿದ್ದೀರಿ. ಮತ್ತೆ ಕಾರ್ಯಕರ್ತರ ಬಳಿ ಹೋಗಿ ನಿಮ್ಮನ್ನಲ್ಲದಿದ್ದರೂ ನಿಮ್ಮ ಮಕ್ಕಳನ್ನಾದರು ಜನರು ಗೆಲ್ಲಿಸುತ್ತಾರೆ. ಸ್ವಲ್ಪ ದಿನ ಶಾಂತವಾಗಿ ಇರುವಂತೆ ಸಂಸದ ಸಿದ್ದೇಶ್ವರ ಅವರಿಗೆ ಸಲಹೆ ನೀಡಿದರು.
ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರನ್ನು ಹೊಸದುರ್ಗದಲ್ಲಿ ಸಾಮಾನ್ಯ ಸೊಸೈಟಿ ಅಧ್ಯಕ್ಷ ಸೋಲಿಸಿದ್ದ. ಹರಿಹರ ಹಿರಿಯ ರಾಜಕಾರಣಿ ಸಿದ್ದವೀರಪ್ಪ ಅವರನ್ನ ಅದೇ ತಾನೇ ವಕೀಲಿ ವೃತ್ತಿಗೆ ಕಾಲಿಟ್ಟ ಯುವಕ ಸೋಲಿಸಿದ್ದ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸೋಲು ಗೆಲುವು ಮಾಮೂಲು. ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.