Advertisement

ಶಾಲಾ ಮಕ್ಕಳ ಆರೋಗ್ಯ ರಕ್ಷಣೆಯೇ ಮೊದಲ ಆದ್ಯತೆಯಾಗಲಿ

12:49 AM Dec 06, 2021 | Team Udayavani |

ಕಳೆದೆರಡು ವಾರಗಳಿಂದೀಚೆಗೆ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣ ವಾಗಿದೆ. ಕೊರೊನಾ ಮಾರ್ಗಸೂಚಿಗಳೊಂದಿಗೆ ಶಾಲಾ ಕಾಲೇಜುಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆಯಾದರೂ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬಂದಿ ವರ್ಗವನ್ನು ಸೋಂಕು ಬಾಧಿಸತೊಡಗಿರುವುದು ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲದೆ ಹೆತ್ತವರಲ್ಲೂ ದಿಗಿಲು ಮೂಡಿಸಿದೆ.

Advertisement

ಕೊರೊನಾ ಹಿನ್ನೆಲೆಯಲ್ಲಿ ಸರಿಸುಮಾರು ಒಂದೂವರೆ ವರ್ಷ ಶೈಕ್ಷಣಿಕ ಚಟುವಟಿಕೆಗಳೆಲ್ಲವೂ ಸಂಪೂರ್ಣ ಗೋಜಲುಮಯವಾಗಿತ್ತು. ಈ ವರ್ಷದ ಆಗಸ್ಟ್‌ ವೇಳೆಗೆ ಕೊರೊನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾದ ಬಳಿಕ ಸರಕಾರ ಶಾಲಾ ಕಾಲೇಜುಗಳನ್ನು ಕೊರೊನಾ ಮಾರ್ಗಸೂಚಿಗಳೊಂದಿಗೆ ತೆರೆಯಲು ನಿರ್ಧರಿಸಿತ್ತು. ಅದರಂತೆ ಈಗ ಶಾಲಾಕಾಲೇಜುಗಳಲ್ಲಿ ಭೌತಿಕ ತರಗತಿಗಳು, ಪರೀಕ್ಷೆಗಳು, ಪಠ್ಯೇತರ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಎರಡು ವಾರಗಳಿಂದೀಚೆಗೆ ಧಾರವಾಡ, ಬೆಂಗಳೂರು, ತುಮಕೂರು, ಹಾಸನ, ಕೊಡಗು ಮತ್ತು ಈಗ ಚಿಕ್ಕಮಗಳೂರು ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ವಸತಿಸಹಿತ ಶಿಕ್ಷಣ ಸಂಸ್ಥೆ ಗಳಲ್ಲಿ ಮತ್ತು ಹಾಸ್ಟೆಲ್‌ಗ‌ಳಲ್ಲಿರುವ ವಿದ್ಯಾರ್ಥಿಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದು ಇಲ್ಲಿ ಮಾರ್ಗಸೂಚಿ ಪಾಲನೆ ಕಷ್ಟಸಾಧ್ಯವಾಗಿರುವಂತೆ ಕಂಡುಬರುತ್ತಿದೆ.

ವಿದ್ಯಾರ್ಥಿಗಳು ಮಾತ್ರವಲ್ಲದೆ ಶಿಕ್ಷಕರು, ಸಿಬಂದಿ ವರ್ಗದಲ್ಲೂ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿದ್ದು ಇದು ಕೇವಲ ಮಕ್ಕಳ ಹೆತ್ತವರು ಮಾತ್ರವಲ್ಲದೆ ಇಂತಹ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ನಿವಾಸಿಗಳ ಕಳವಳಕ್ಕೂ ಕಾರಣವಾಗಿದೆ. ಶಿಕ್ಷಣ ಸಂಸ್ಥೆ ಗಳನ್ನು ಆರಂಭಿಸುವುದಕ್ಕೂ ಮುನ್ನವೇ ಸರಕಾರ ಶಿಕ್ಷಣ ಸಂಸ್ಥೆಗಳಿಗಾಗಿ ಪ್ರತ್ಯೇಕ ಕೊರೊನಾ ಮಾರ್ಗಸೂಚಿಯನ್ನು ರೂಪಿಸಿ ಇದನ್ನು ಕಟ್ಟು ನಿಟ್ಟಾಗಿ ಅನುಸರಿಸುವಂತೆ ಸೂಚನೆ ನೀಡಿತ್ತು. ಆರಂಭದಲ್ಲಿ ಈ ಮಾರ್ಗಸೂಚಿಗಳ ಪಾಲನೆ ಬಗೆಗೆ ವಿದ್ಯಾರ್ಥಿಗಳು, ಶಿಕ್ಷಕರು, ಸಿಬಂದಿ ಮತ್ತು ಶಾಲಾಡಳಿತ ಮಂಡಳಿಗಳು ಒಂದಿಷ್ಟು ಆಸ್ಥೆ ವಹಿಸಿದವಾದರೂ ಆ ಬಳಿಕ ಇವೆಲ್ಲವೂ ಮೂಲೆಗೆ ಸರಿದಿವೆೆ.

ಇದನ್ನೂ ಓದಿ:ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಹಾನೆ ಅನುಮಾನ?

ದೇಶದಲ್ಲಿ ಇನ್ನೂ 18ಕ್ಕಿಂತ ಕೆಳ ಹರೆಯದವರಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭಗೊಂಡಿಲ್ಲ. ಎಲ್ಲ ಮಕ್ಕಳೂ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಶುಚಿತ್ವಕ್ಕೆ ಮಹತ್ವ ನೀಡಬೇಕೆಂದು ಹೇಳುತ್ತಲೇ ಬರಲಾಗಿದೆಯಾದರೂ ಬಹುತೇಕ ಕಡೆಗಳಲ್ಲಿ ಇವೆಲ್ಲವುಗಳನ್ನೂ ನಿರ್ಲಕ್ಷಿಸಲಾಗಿದೆ. ಇನ್ನು ತರಗತಿ ಕೋಣೆಗಳನ್ನು ನಿಯಮಿತವಾಗಿ ಸ್ಯಾನಿಟೈಸ್‌ ಮಾಡುವುದು ಕಡ್ಡಾಯ ಎಂದು ಆದೇಶ ಹೊರಡಿಸಲಾಗಿದೆಯಾದರೂ ಈಗ ಮಾಯವಾಗಿದೆ.

Advertisement

ಪ್ರಾರಂಭದಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾ ದಾಗ ತಲೆಕೆಡಿಸಿಕೊಳ್ಳದಿದ್ದ ಶಿಕ್ಷಣ ಇಲಾಖೆ ಮತ್ತು ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲೇಬೇಕಿದೆ. ಕೇವಲ ಮಾರ್ಗಸೂಚಿ ರೂಪಣೆ, ಆದೇಶ ಹೊರಡಿಸುವಿಕೆ ಮತ್ತು ಹೇಳಿಕೆಗೆ ಸೀಮಿತವಾಗದೆ ತಾನು ಹೊರಡಿ ಸಿದ ಆದೇಶಗಳು ಶಾಲಾಕಾಲೇಜುಗಳಲ್ಲಿ ಎಷ್ಟರಮಟ್ಟಿಗೆ ಪಾಲನೆಯಾ ಗುತ್ತಿವೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಆದೇಶಕ್ಕೆ ಬೆಲೆ ಕೊಡದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸದ್ಯದ ಪರಿಸ್ಥಿತಿಯಲ್ಲಿ ಶಾಲಾ ತರಗತಿಗಳು ನಡೆಯಬೇಕಿದ್ದರೂ ಮಕ್ಕಳ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲೂ ನಿರ್ಲಕ್ಷ್ಯ ಸಲ್ಲದು.

Advertisement

Udayavani is now on Telegram. Click here to join our channel and stay updated with the latest news.

Next