Advertisement

ವದಂತಿಗಳಿಗೆ ತಡೆ ಬೀಳಲಿ, ಆಡಳಿತ ಯಂತ್ರ ಚುರುಕಾಗಲಿ

02:05 AM Dec 30, 2021 | Team Udayavani |

ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ವಲಯದಲ್ಲಿ ಹಲವು ದಿನಗಳಲ್ಲಿ ಹರಿದಾಡುತ್ತಿದ್ದ ನಾಯಕತ್ವ ಬದಲಾವಣೆ ವದಂತಿಗೆ ತೆರೆ ಎಳೆಯುವ ಪ್ರಯತ್ನ ಎಂಬಂತೆ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶ ರವಾನಿಸಲಾಗಿದೆ. ರಾಜ್ಯ ಉಸ್ತುವಾರಿ ಹಾಗೂ ರಾಜ್ಯಾಧ್ಯಕ್ಷರು ಸ್ಪಷ್ಟವಾಗಿ ಈ ಕುರಿತು ಪಕ್ಷದ ನಿಲುವನ್ನು ಹೇಳಿದ್ದಾರೆ. ಇನ್ನು ಮುಂದಾದರೂ ಇಂತಹ ವದಂತಿಗಳಿಗೆ ವಿರಾಮ ಬಿದ್ದು ರಾಜ್ಯದ ಆಡಳಿತ ಯಂತ್ರ ಚುರುಕಾಗಬೇಕಾಗಿದೆ.

Advertisement

ವಿಧಾನಪರಿಷತ್‌ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಅಡೆ ತಡೆ ಉಂಟಾಗಿತ್ತು. ಇದರ ನಡುವೆ ಇದ್ದಕ್ಕಿದ್ದಂತೆ ನಾಯಕತ್ವ ಬದಲಾವಣೆ ವದಂತಿ ಯಿಂದಾಗಿ ಆಡಳಿತ ಯಂತ್ರದ ಮೇಲೆ ಪರಿಣಾಮದ ಆತಂಕವೂ ಎದುರಾಗಿತ್ತು.

ಇದೀಗ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವರಿಷ್ಠರು ನಾಯಕತ್ವ ಬದಲಾವಣೆ ವಿಚಾರವೇ ಇಲ್ಲ. ಬಸವರಾಜ ಬೊಮ್ಮಾಯಿ ಅವರ ನಾಯಕತ್ವ ದಲ್ಲಿಯೇ 2023ರ ಚುನಾವಣೆ ಎದುರಿಸಲಾಗುವುದು ಎಂಬ ಸಂದೇಶ ರವಾನಿಸಿ ದ್ದಾರೆ. ಇದರಿಂದ ಎಲ್ಲ ಅನುಮಾನ, ಗೊಂದಲಗಳಿಗೂ ತೆರೆ ಬಿದ್ದಂತಾಗಿದೆ.

ಮುಖ್ಯಮಂತ್ರಿಯವರು ಸಹ ಪದೇ ಪದೆ ನಾಯಕತ್ವ ಬದಲಾವಣೆ ವಿಚಾರಗಳಿಗೆ ಪ್ರತಿ ಕ್ರಿಯಿಸುವುದು ಬಿಟ್ಟು ಅಭಿವೃದ್ಧಿಯತ್ತ ಚಿತ್ತ ಹರಿಸಬೇಕಾಗಿದೆ.ಎದುರಾಗಲಿರುವ ಜಂಟಿ ಅಧಿವೇಶನ, ಬಜೆಟ್‌ ಅಧಿವೇಶನಕ್ಕೆ ಸಿದ್ಧತೆ
ನಡೆಸಬೇಕು. ಬಜೆಟ್‌ ಪೂರ್ವಭಾವಿ ಸಭೆ ಆರಂಭಿಸಿ ಹೊಸ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿಗೆ ಹೆಚ್ಚು ನೀಡಬೇಕು.
ಒಂದು ಹಂತದಲ್ಲಿ ಮುಖ್ಯಮಂತ್ರಿಯವರು ಮುಂದಿನ ಒಂದು ವರ್ಷ ರಾಜಕೀಯ ಕಡಿಮೆ ಮಾಡಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಹೇಳಿದ್ದಾರೆ. ಆ ಮಾತುಗಳು ಸ್ವಾಗತಾರ್ಹ. ಏಕೆಂದರೆ, ಸತತ ಎರಡು ವರ್ಷಗಳ ಕೊರೊನಾ, ಇದೀಗ ಒಮಿಕ್ರಾನ್‌ ಆತಂಕದಿಂದ ಜನರ ಜೀವನ ಪರಿಸ್ಥಿತಿಯಲ್ಲಿ ವ್ಯತ್ಯಾಸವಾಗಿದೆ. ಜನರಲ್ಲಿ ಸರಕಾರ ನಿಮ್ಮ ಜತೆ ಇದೆ ಎಂದು ವಿಶ್ವಾಸಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ.

ಅದೇ ರೀತಿ ಸಚಿವ ಸಹೋದ್ಯೋಗಿಗಳು ಸಹ ನಾಯಕತ್ವ ಬದಲಾವಣೆ ವಿಚಾರಕ್ಕೆ ಹೆಚ್ಚು ಒತ್ತು ಕೊಡುವುದು, ಅದರ ಬಗ್ಗೆಯೇ ಹೋದ ಕಡೆ ಬಂದ ಕಡೆಯೆಲ್ಲ ಮಾತನಾಡಿ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ವರಿಷ್ಠರೇ ಸ್ಪಷ್ಟ ಸಂದೇಶ ರವಾನಿಸಿದ ಮೇಲೆ ಆ ಕುರಿತು ಪ್ರತಿಕ್ರಿಯಿಸುವ ಬದಲು ನಿರ್ಲಕ್ಷ್ಯ ಮಾಡಿ ಅಭಿವೃದ್ಧಿ ನಿಟ್ಟಿನಲ್ಲಿ ಮುಖ್ಯಮಂತ್ರಿಯ ಜತೆಗೂಡಿ ಕಾರ್ಯನಿರ್ವಹಿಸಬೇಕಾಗಿದೆ.

Advertisement

ಇದರ ನಡುವೆಯೇ ಈಗ ಸಂಪುಟ ಪುನಾರಚನೆಯ ಮಾತುಗಳು ಕೇಳಿಬರಲು ಆರಂಭಿಸಿವೆ. ಗುಜರಾತ್‌ ಮಾದರಿಯಲ್ಲಿ ಇಲ್ಲೂ ಸಂಪುಟ ಪುನಾರಚನೆಯಾಗಬೇಕು ಎಂಬುದು ಆಕಾಂಕ್ಷಿಗಳ ಬಯಕೆಯಾಗಿದೆ. ಈಗ ಎಲ್ಲ ಅಡ್ಡಿಗಳು ನಿವಾರಣೆಯಾಗಿವೆ ಎಂಬ ಹೊತ್ತಲ್ಲಿ ಈ ಸಂಪುಟ ಸಂಘರ್ಷ ಹೊತ್ತಿರುವುದು ಒಳ್ಳೆಯದಲ್ಲ. ಈಗಾಗಲೇ ದೇಶದಲ್ಲಿ ಒಮಿಕ್ರಾನ್‌ ಭೀತಿ ಶುರುವಾಗಿದೆ. ಕೊರೊನಾ ಕೇಸ್‌ಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 3ನೇ ಅಲೆಯ ಹೊಸ್ತಿಲಲ್ಲಿ ಬಂದು ನಿಂತಿದ್ದೇವೆ. ಇದಕ್ಕೆ ಪೂರಕವೆಂಬಂತೆ ದಿಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಕೇಸ್‌ಗಳ ಸಂಖ್ಯೆಯಲ್ಲಿ ಬಹಳಷ್ಟು ಏರಿಕೆಯಾಗಿದೆ. ಈ ಎಲ್ಲ ಸಂಗತಿಗಳನ್ನು ಮುಂದಿಟ್ಟುಕೊಂಡು, ಆರೋಗ್ಯ ವ್ಯವಸ್ಥೆಗೆ ಮೂಲಸೌಕರ್ಯವೂ ಸೇರಿದಂತೆ ಬೇರೆ ಬೇರೆ ಅಗತ್ಯ ಕ್ರಮಗಳ ಬಗ್ಗೆ ಗಮನ ಹರಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next