ನೆಲಮಂಗಲ: ಹಳ್ಳಿಗಾಡಿನ ಜನರಿಂದ ಹುಟ್ಟಿ ಜಗತ್ತಿನ ಮನುಕುಲಕ್ಕೆ ಸಂಸ್ಕೃತಿ ಪರಿಚಯಿಸಿದ ಜಾನಪದ ಕಲೆಗಳು ಪ್ರತಿಯೊಬ್ಬರ ಮನೆಮನ ತಲುಪಬೇಕು ಎಂದು ತಾಪಂ ಸದಸ್ಯ ಬೆಟ್ಟೇಗೌಡ ಅಭಿಪ್ರಾಯಪಟ್ಟರು. ತಾಲೂಕಿನ ಯಲಚಗೆರೆ ಗ್ರಾಮದಲ್ಲಿ ಸಿಂಚನ ಕಲಾಕೇಂದ್ರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಾನಪದ ಕಲಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆ ಜೊತೆ ತಂತ್ರಜ್ಞಾನದ ಬೆಳವಣಿಗೆ ಹೆಚ್ಚಾದಂತೆ ಜಾನಪದ ಕಲೆಗಳು, ಗ್ರಾಮೀಣ ವೈಭವಗಳು ಕಡಿಮೆಯಾಗುತ್ತಿವೆ. ಗ್ರಾಮೀಣ ಪ್ರದೇಶದ ಜಾತ್ರೆಗಳಿಗೆ ನೂರಾರು ಕೀಲೋ.ಮೀಟರ್ ದೂರದ ನಗರದ ಬಂಧುಗಳು ಆಗಮಿಸಿ ಸಂಸ್ಕೃತಿಯ ರುಚಿಯನ್ನು ಸವಿಯುತ್ತಿದ್ದರು, ಆದರೆ ಅನೇಕ ಕಡೆಗಳಲ್ಲಿ ಈ ಸಂಪ್ರದಾಯ ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮಗಳಲ್ಲಿ ಜಾನಪದ ಕಲೆಗಳ ಮಹೋತ್ಸವದ ಮೂಲಕ ಕಲೆ ಹಾಗೂ ಕಲಾವಿದರನ್ನು ಪರಿಚಯಿಸುತ್ತಿರುವುದು ಉತ್ತಮ ಕಾರ್ಯ ಎಂದರು.
ಶ್ರೀನಿವಾಸಪುರ ಗ್ರಾಪಂ ಸದಸ್ಯ ಹನುಮಂತರಾಜು ಮಾತನಾಡಿ, ಗ್ರಾಮೀಣ ಭಾಗದ ಜನರು ಮರೆಯುತ್ತಿರುವ ಕಲೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸರಕಾರ ಜಾನಪದ ಕಲೆಗಳ ಉಳಿವಿಗಾಗಿ ಮುಂದಾಗಿರುವುದು ಸ್ವಾಗತಾರ್ಹ. ಹಳ್ಳಿಗಳಲ್ಲಿ ಈ ಹಿಂದೆ ಪೌರಾಣಿಕ ನಾಟಕಗಳ ಮೂಲಕ ರೈತರು ಆಯಾಸ ಮರೆಯುತಿದ್ದರು. ಅಂತಹ ಕಲೆಗಳನ್ನು ಹಳ್ಳಿಗಾಡಿನ ಜನರಿಗೆ ನೆನಪಾಗುವಂತೆ ಮಾಡಿದ ಕಲಾವಿದರಿಗೆ ಧನ್ಯವಾದಗಳು ಎಂದರು.
ಜನಪದ ಝೇಂಕಾರ: ಯಲಚಗೆರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜಾನಪದ ಕಲಾ ಮಹೋತ್ಸವದಲ್ಲಿ ಸುಗಮ ಸಂಗೀತ, ಜನಪದ ಗಾಯನ, ಸೋಬಾನೆ ಪದ, ಭಕ್ತಿಗೀತೆ, ಚೌಡಿಕೆ ಪದ, ತಮಟೆ ವಾದನ, ತತ್ವ ಪದ, ಕಂಸಾಳೆ, ಜಾಗೃತಿ ಗೀತೆ, ಭರತನಾಟ್ಯ, ಭಜನೆ ಸೇರಿದಂತೆ ಇನ್ನೂ ಅನೇಕ ಜಾನಪದ ಕಲೆಗಳನ್ನು ವಿವಿಧ ಕಲಾವಿದರು ನಡೆಸಿಕೊಟ್ಟರು.
ಯುವನಾಯಕ ಪ್ರಶಸ್ತಿ ಪ್ರದಾನ: ಯಲಚಗೆರೆ ಗ್ರಾಮದ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ, ಸಮಾಜ ಸೇವೆಯನ್ನು ಗುರುತಿಸಿ ಶ್ರೀನಿವಾಸಪುರ ಗ್ರಾಮ ಪಂಚಾಯಿತಿ ಸದಸ್ಯ ಹನುಮಂತರಾಜುವಿಗೆ ಸಿಂಚನ ಕಲಾ ಕೇಂದ್ರ ಟ್ರಸ್ಟ್‌ನಿಂದ ಯುವನಾಯಕ ಎಂಬ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಈ ವೇಳೆ ತಾಪಂ ಸದಸ್ಯ ರುದ್ರೇಶ್, ಶ್ರೀನಿವಾಸಪುರ ಗ್ರಾಪಂ ಅಧ್ಯಕ್ಷ ಗೋವಿಂದರಾಜು, ಸದಸ್ಯ ಹನುಮಂತರಾಯಪ್ಪ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರಾಮುಜೋಗಿಹಳ್ಳಿ, ಸಿಂಚನ ಕಲಾ ಕೇಂದ್ರ ಟ್ರಸ್ಟ್ ಅಧ್ಯಕ್ಷ ಸಿ.ಹೆಚ್ ಸಿದ್ದಯ್ಯ ಮತ್ತಿತರರಿದ್ದರು.