Advertisement

ನಗರದಲ್ಲಿ ಫ್ಲೈಓವರ್‌ ಪ್ರಸ್ತಾವನೆಗಳು ಕಾರ್ಯಗತಗೊಳ್ಳಲಿ 

07:51 PM Aug 29, 2021 | Team Udayavani |

ಮಂಗಳೂರು ನಗರ ಅಭಿವೃದ್ಧಿ ಹೊಂದುತ್ತಿದೆ. ರಸ್ತೆಗಳು ಉನ್ನತೀಕರಣಗೊಳ್ಳುತಿವೆ. ನಗರದ ಮೂಲಕ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪಥವಾಗಿವೆ. ಖಂಡಿತವಾಗಿಯೂ ಇವೆಲ್ಲ ಉತ್ತಮ ಬೆಳವಣಿಗೆ. ಆದರೆ ಅಭಿವೃದ್ಧಿಯ ಸಂದರ್ಭದಲ್ಲಿ ಆಗಿರುವ ಕೆಲವು ಪ್ರಮಾದಗಳು, ಕೊರತೆಗಳಿಂದ ಜನತೆ ಕಿರಿಕಿರಿ ಅನುಭವಿಸುವಂತಾಗಿದೆ. ಇದರಲ್ಲಿ ಪ್ರಮುಖವಾದುದು ನಂತೂರು ಹಾಗೂ ಕೆಪಿಟಿ ವೃತ್ತಗಳಲ್ಲಿ ಫ್ಲೈಓವರ್‌ನಿರ್ಮಾಣವಾಗದಿರುವುದು.

Advertisement

ನಗರದ ಹೃದಯಭಾಗದಲ್ಲಿರುವ ನಂತೂರು ಹಾಗೂ ಕೆಪಿಟಿ ವೃತ್ತಗಳಲ್ಲಿ ಭಾರೀ ವಾಹನದಟ್ಟಣೆ ಆಗಾಗ ಸಂಚಾರ ತಡೆಗೆ ಕಾರಣವಾಗುತ್ತಿದೆ. ಇಲ್ಲಿ ಸಮಸ್ಯೆ ಎಂದರೆ ಏಕಕಾಲಕ್ಕೆ ಎಲ್ಲ ಕಡೆಯಿಂದ ವಾಹನಗಳು ಬರುವ ಹಿನ್ನೆಲೆಯಲ್ಲಿ ಕೆಲವು ಸಂದರ್ಭ ಯಾರು ಎತ್ತಕಡೆ ತಿರುಗುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ದ್ವಿಚಕ್ರ, ಕಾರು, ರಿಕ್ಷಾಗಳ ಚಾಲಕರು ಆತಂಕದಿಂದಲೇ ವಾಹನ ಚಲಾಯಿಸಬೇಕಾದ ಪರಿಸ್ಥಿತಿ. ಪರಿಣಾಮ ವಾಹನ ಸಂಚಾರ ಪದೇ ಪದೆ ಸ್ಥಗಿತಗೊಳ್ಳುವುದು ಇಲ್ಲಿ ನಿರಂತರವಾಗಿ ಕಾಡುವ ಸಮಸ್ಯೆ. ನಂತೂರಿನಲ್ಲಿ ದಿನದಲ್ಲಿ ಹಲವು ಬಾರಿ ಅರ್ಧ ಕಿ.ಮೀ.ವರೆಗೆ ವಾಹನಗಳ ಸಾಲು ಇರುತ್ತವೆ. ಸಂಚಾರಿ ಪೊಲೀಸರಿಗೂ ಇಲ್ಲಿ ಸಂಚಾರ ವ್ಯವಸ್ಥೆ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.

ನಂತೂರಿನಲ್ಲಿ ಹಾಗೂ ಕೆಪಿಟಿ ವೃತ್ತದಲ್ಲಿ ಓವರ್‌ ಪಾಸ್‌ ಅಥವಾ ಅಂಡರ್‌ ಪಾಸ್‌ ನಿರ್ಮಾಣ ಹಲವು ವರ್ಷದ ಬೇಡಿಕೆ. ನಾಗರಿಕರು, ಜನಪ್ರತಿನಿಧಿಗಳು ಹೆದ್ದಾರಿ ಇಲಾಖೆ ಹಾಗೂ ಸರಕಾರವನ್ನು ಹಲವಾರು ಸಮಯಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ. ಮಹಾನಗರ ಪಾಲಿಕೆ ಸಾಮಾನ್ಯಸಭೆ, ತ್ತೈಮಾಸಿಕ ಕೆಡಿಪಿ ಸಭೆಗಳು, ಹೆದ್ದಾರಿ ಇಲಾಖೆಗೆ ಸಂಬಂಧಪಟ್ಟ ಸಭೆಗಳಲ್ಲಿ ಜನಪ್ರತಿನಿಧಿಗಳು ಪ್ರಸ್ತಾವಿಸುತ್ತಲೇ ಬಂದಿದ್ದರು.

ಸುರತ್ಕಲ್‌ನಿಂದ ಬಿ.ಸಿ. ರೋಡು ಜಂಕ್ಷನ್‌ ವೃತ್ತದ ವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿ ಮೇಲ್ದರ್ಜೆಗೇರುವ ಯೋಜನೆಯಲ್ಲಿ ನಂತೂರಿನಲ್ಲಿ  ಫ್ಲೈಓವರ್‌ ನಿರ್ಮಾಣ ಕಾಮಗಾರಿ ಒಳಗೊಂಡಿತ್ತು. ಆದರೆ ಸಕಾಲದಲ್ಲಿ ಭೂಸ್ವಾಧೀನವಾಗದೆ ಕಾಮಗಾರಿ ನಡೆಯಲಿಲ್ಲ. ಇದೇ ಕಾರಣಕ್ಕಾಗಿ ಹೆದ್ದಾರಿ ಪ್ರಾಧಿಕಾರ ಈ ಕಾಮಗಾರಿಯನ್ನು ಕೈಬಿಟ್ಟಿತ್ತು. ಜಿಲ್ಲಾಡಳಿತ ಅನಂತರ ಎಚ್ಚೆತ್ತು ಭೂಸ್ವಾಧೀನ ಮಾಡಿದ್ದರೂ ಗುತ್ತಿಗೆ ವಹಿಸಿಕೊಂಡಿರುವ ಇರ್ಕಾನ್‌

ಯೋಜನ ವೆಚ್ಚ ದುಪ್ಪಟ್ಟು ಆಗಿರುವ ಕಾರಣ ಮತ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿತ್ತು. ಆದರೆ ನಂತೂರು ವೃತ್ತದಲ್ಲಿ ದಿನದಿಂದ ದಿನಕ್ಕೆ ಸಂಚಾರ ಸಮಸ್ಯೆ ಬಿಗಡಾಯಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲ್ಲಿ ಆರಂಭದಲ್ಲಿ ಫ್ಲೈಓವರ್‌ ಬಳಿಕ ಇದನ್ನು ಮಾರ್ಪಾಡು ಮಾಡಿ ಓವರ್‌ಪಾಸ್‌ ಪ್ರಸ್ತಾವನೆಯನ್ನು ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ ಕಳುಹಿಸಿತ್ತು. ಆದರೆ ಇದು ಕಾರ್ಯರೂಪಕ್ಕೆ ಈವರೆಗೂ ಬಂದಿಲ್ಲ.

Advertisement

ಬೆಳೆಯುತ್ತಿರುವ ನಗರದಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಸ್ತುತ ಪ್ರಸ್ತಾವನೆಯಲ್ಲಿರುವ ಫ್ಲೈಓವರ್‌ ನಿರ್ಮಾಣ ಯೋಜನೆಗಳನ್ನು ಶೀಘ್ರ ಕೈಗೆತ್ತಿಕೊಂಡು ಅನುಷ್ಠಾನಗೊಳಿಸುವ ಕಾರ್ಯ ನಗರದ ಸುಗಮ ಸಂಚಾರ ನಿಟ್ಟಿನಲ್ಲಿ ಅವಶ್ಯವಾಗಿದೆ.

ಸಂ.

Advertisement

Udayavani is now on Telegram. Click here to join our channel and stay updated with the latest news.

Next