ರಾಯಚೂರು: ಜಿಲ್ಲೆಯಲ್ಲಿ ಲಭ್ಯವಿರುವ ಜಲಸಂಪನ್ಮೂಲ ಬಳಸಿಕೊಂಡು ಭತ್ತ ಹಾಗೂ ಮೀನುಗಾರಿಕೆ ಮಾಡುವ ಮೂಲಕ ರೈತರು ಆರ್ಥಿಕ ಸ್ವಾವಲಂಬನೆ ಕಂಡುಕೊಳ್ಳಬೇಕು ಎಂದು ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ತಿಳಿಸಿದರು.
ಯರಮರಸ್ ಹೊರವಲಯದ ಸರ್ಕಿಟ್ ಹೌಸ್‌ನಲ್ಲಿ ಮಂಗಳವಾರ ಮೀನುಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದ ಸಿರಗುಪ್ಪ ತಾಲೂಕಿನಲ್ಲಿ ಮೊದಲ ಮೀನು ಮಾರುಕಟ್ಟೆ ಪ್ರಾರಂಭಿಸಿದ್ದು, ಕೃಷಿಹೊಂಡ, ಮೀನಿನ ಕೆರೆ, ಬಂಜರು ಭೂಮಿ, ಸವಳು ಭೂಮಿಯಲ್ಲಿ ಭತ್ತದ ಬೆಳೆ ಜತೆ ಮೀನುಗಾರಿಕೆ ಕೃಷಿ ಅಳವಡಿಸಿಕೊಂಡರೆ ರೈತರು ಹೆಚ್ಚಿನ ಲಾಭ ಗಳಿಸಬಹುದು. ಅಲ್ಲದೇ ಮೀನು ಪೌಷ್ಟಿಕ ಆಹಾರವಾಗಿದ್ದು, ಇದರಿಂದ ಸುಮಾರು 19 ವಿವಿಧ ಆಹಾರ ತಯಾರಿಸಬಹುದು. ಮಾರುಕಟ್ಟೆಯಲ್ಲಿಯೂ ಭಾರೀ ಬೇಡಿಕೆ ಇದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಆತ್ಮ ನಿರ್ಭರ ಯೋಜನೆ ಮೂಲಕ ಅನೇಕ ಗುಂಪು ರಚಿಸಿ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡುತ್ತಿದ್ದಾರೆ. ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಬೇಕು, ಕರಾವಳಿ ಭಾಗದ 327 ಕಿ.ಮೀ, ಒಳನಾಡಿನ ಭಾಗದ ಮೀನುಗಾರರ ಸಮಸ್ಯೆ ಪರಿಶೀಲಿಸಿ ಇಲಾಖೆ ಮತ್ತು ನಿಗಮದಿಂದ ಅನೇಕ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.
ಬಡವರು, ಮಧ್ಯಮ ವರ್ಗದವರು ಮೀನುಗಾರಿಕೆಯಲ್ಲಿ ತೊಡಗಿ ಬದುಕು ರೂಪಿಸಿಕೊಳ್ಳಬೇಕು. ಸುಸಜ್ಜಿತ ಮೀನು ಮಾರುಕಟ್ಟೆಯಲ್ಲಿ ಮೀನಿನ ಗುಣಮಟ್ಟ ಕಾಪಾಡಲು ಕೋಲ್ಡ್ ಸ್ಟೋರೇಜ್ ಘಟಕ, ವ್ಯಾಪಾರಿಗಳಿಗೆ ವಿಶ್ರಾಂತಿ ಘಟಕ, ಮೀನಿನ ದುರಸ್ತಿ ಘಟಕ ಸ್ಥಾಪಿಸಲು ಅಭಿವೃದ್ಧಿ ನಿಗಮದಿಂದ ಅನೇಕ ಸೌಲಭ್ಯ ನೀಡಲಾಗುವುದು ಎಂದರು.
ಮೀನು ಸಂಪತ್ತನ್ನು ಅಭಿವೃದ್ಧಿ ಪಡಿಸುವುದು, ಉತ್ಪಾದಿಸಿದ ಮೀನುಮರಿಗಳನ್ನು ಹೆಚ್ಚಿನ ನೀರಿನ ಪ್ರಮಾಣ ಇರುವ ಕೆರೆಗಳಿಗೆ ಬಿತ್ತನೆ ಮಾಡುವುದು, ಹೆಚ್ಚಿನ ಮೀನು ಉತ್ಪಾದನೆಗೆ ತಾಂತ್ರಿಕ ಸಲಹೆ ನೀಡಿ ಮೀನು ಸಾಕಣೆ ಮಾಡಲು ಪ್ರೇರೇಪಿಸುವುದು ಮತ್ತು ಮೀನುಗಾರರ ಸಹಕಾರ ಸಂಘಗಳ ಸದಸ್ಯರಿಗೆ ಇಲಾಖೆ ಸೌಲಭ್ಯ ನೀಡಿ ಅವರ ಆರ್ಥಿಕ ಮಟ್ಟ ಸುಧಾರಿಸುವುದು ಇಲಾಖೆ ಗುರಿಯಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿಖೀಲ್, ಮೀನುಗಾರಿಕೆ ಇಲಾಖೆ ಅಪರ ನಿರ್ದೇಶಕ ಎಂ.ಎಲ್. ದೊಡ್ಡಮನಿ, ಮೀನುಗಾರಿಕೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ದಿನೇಶ್, ಮೀನುಗಾರಿಕೆ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ಸುಮಾ, ಸಚಿವರ ವಿಶೇಷ ಅಧಿ ಕಾರಿ ಎಂ. ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.