ಯಾದಗಿರಿ: ರೈತರು ವಿಮೆ ಮಾಡಿಸುವಾಗ ಒಂದು, ರೈತರಿಗೆ ವಿಮೆ ಹಣ ನೀಡುವಾಗಿ ಕಂಪನಿಗಳು ಹಲವು ನಿಯಮಗಳನ್ನು ಮುಂದಿಡುವುದರಿಂದ ಅದರ ಲಾಭವನ್ನು ಪಡೆಯುವಲ್ಲಿ ರೈತರಿಗೆ ಅನಾನೂಲವಾಗಿ ಹೆಚ್ಚಿನ ವಿಮೆ ಮಾಡಿಸಲು ಮುಂದಾಗುತ್ತಿಲ್ಲ. ಈ ಬಗ್ಗೆ ಅ ಧಿಕಾರಿಗಳು ಕಾಳಜಿವಹಿಸಬೇಕು ಎಂದು ರಾಯಚೂರು-ಯಾದಗಿರಿ ಸಂಸದ ರಾಜಾ ಅಮರೇಶ್ವರ ನಾಯಕ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ ಪ್ರಗತಿ ಪರಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ
ಅವರು ಮಾತನಾಡಿದರು. ಕೃಷಿ ಇಲಾಖೆ ಕುರಿತು ಮಾಹಿತಿ ನೀಡುವ ವೇಳೆ ಜಂಟಿ ಕೃಷಿ ನಿರ್ದೇಶಕರು ಸಭೆ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ರೈತರು
ಕಡಿಮೆ ಪ್ರಮಾಣದಲ್ಲಿ ವಿಮೆ ಮಾಡಿಸುತ್ತಿರುವ ವಿಷಯ ಮನಗಂಡು, ರೈತರು ಮೊದಲೇ ಕಷ್ಟದಲ್ಲಿ ವಿಮೆ ಹಣ ಪಾವತಿಸಿರುತ್ತಾರೆ. ಅವರಿಗೆ ಹಾನಿಯಾದ ಸಂದರ್ಭದಲ್ಲಿ ಹಣ ನೀಡದಿದ್ದರೆ ಇನ್ನೊಮ್ಮೆ ಹೇಗೆ ವಿಮೆ ಮಾಡಿಸುತ್ತಾರೆ ಎಂದರು. ಇದೇ ವೇಳೆ 2019ರ ವಿಮೆ ಹಣ ರೈತರಿಗೆ ತಲುಪದಿರುವ ವಿಷಯಯೂ ಪ್ರಸ್ತಾಪವಾಯಿತು.
ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಒದಗಿಸಿ ಉತ್ಪಾದಕತೆ ಹೆಚ್ಚಿಸುವ ಮೂಲಕ ಯಂತ್ರೋಪಕರಣಗಳ ಖರೀದಿಗೆ ಧನ ಸಹಾಯ ವಿತರಿಸಬೇಕು. ತೋಟಗಾರಿಕೆ ಇಲಾಖೆಯಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಮಾಡಿ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಕ್ರಮವಹಿಸಬೇಕೆಂದು ಹೇಳಿದರು.
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದ ರೀತಿಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಒಂದು ವೇಳೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯಾದರೆ ನೇರವಾಗಿ ಸಂಬಂಧ ಪಟ್ಟ ಅಧಿಕಾರಿಗಳೇ ಹೊಣೆಯಂದು ಹೇಳಿದರು. ನರೇಗಾದಡಿ ಮಾನವ ದಿನಗಳ ಹೆಚ್ಚಿಸುವ ಮೂಲಕ ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಕೈ ತುಂಬಾ ಕೆಲಸ ನೀಡಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.
ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರಡ್ಡಿ ಗೌಡ ಮುದ್ನಾಳ, ಜಿಪಂ ಅಧ್ಯಕ್ಷ ಬಸನಗೌಡ ಎಸ್.ಪಾಟೀಲ್ ಅವರು, ಯಡಿಯಾಪುರ ಜಿಲ್ಲೆಯ ಕುಡಿಯುವ
ನೀರಿನ ಸಮಸ್ಯೆಯ ಕುರಿತು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಲು ಸೂಚಿಸಿದರು.
ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್ ಮಾತನಾಡಿ, ಜಿಲ್ಲೆಯಲ್ಲಿ ಕೆ.ಬಿ.ಜೆ.ಎನ್.ಎಲ್ ಕಾಲುವೆಗಳು ಹೊಡೆದು ಹೋಗಿದ್ದು, ಈ ಬಗ್ಗೆ ರೈತರಿಂದ ದೂರಗಳು ಬರುತ್ತಿವೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕಾಲುವೆಗಳನ್ನು ರಿಪೇರಿ ಮಾಡಿ ಕೆಳಭಾಗದ ರೈತರಿಗೆ ನೀರನ್ನು ಒದಗಿಸುವ ಕೆಲಸ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.