Advertisement
ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ನಂತರ ಮೊದಲ ಬಾರಿ ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಎಲ್ಲಾ ಇಲಾಖೆಗಳ ಮಾಹಿತಿ ಜೊತೆಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸರ್ಕಾರದಿಂದ ಪ್ರತಿ ಇಲಾಖೆಗೆ ಬರಬೇಕಾಗಿರುವ ಅನುದಾನ, ಆಗಬೇಕಿರುವ ಮಂಜೂರಾತಿ ಒಳಗೊಂಡಂತೆ ಯಾವುದೇ ರೀತಿಯ ಸಮಸ್ಯೆಯೇ ಇರಲಿ ಅಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ತಮ್ಮ ಗಮನಕ್ಕೆ ತರಬೇಕು. ಸಂಬಂಧಿತರೊಂದಿಗೆ ಚರ್ಚಿಸಿ, ಅನುದಾನ ಬಿಡುಗಡೆ, ಅನುಮೋದನೆ, ಮಂಜೂರಾತಿಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
Related Articles
Advertisement
ಅಂಬೇಡ್ಕರ್, ದೇವರಾಜ ಅರಸು ಅಭಿವೃದ್ಧಿ ನಿಗಮ ಒಳಗೊಂಡಂತೆ ಜಿಲ್ಲೆಯಲ್ಲಿ 548 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಬೇಕಾಗಿದೆ ಎಂದು ಬೆಸ್ಕಾಂ ಸಹಾಯಕ ಇಂಜಿನಿಯರ್ ತಿಳಿಸಿದಾಗ, ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಿರುವ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವುದು ಸಾಕಷ್ಟು ತಡವಾಗುತ್ತಿದೆ. ವಿದ್ಯುತ್ಸಂಪರ್ಕ ಕಲ್ಪಿಸುವ ಹೊತ್ತಿಗೆ ಬೋರ್‌ನಲ್ಲಿ ನೀರೇ ಖಾಲಿ ಆಗಿರುತ್ತದೆ. ಆ ರೀತಿ ಆಗಬಾರದು. ಪೈಲಟ್ ಯೋಜನೆಯಂತೆ ಬೋರ್ ಕೊರೆಸಿದ ವರ್ಷದಲ್ಲೇ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಸಚಿವ ಶ್ರೀನಿವಾಸ್ ಸೂಚಿಸಿದರು. ಜಿಲ್ಲೆಯಲ್ಲಿ 627 ಶಾಲಾ ಕೊಠಡಿಗಳು ಅತಿ ಶಿಥಿಲಾವಸ್ಥೆಯಲ್ಲಿವೆ. 350 ಕೊಠಡಿಗಳ ದುರಸ್ತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಎಸ್. ಪರಮೇಶ್ವರಪ್ಪ ಮಾಹಿತಿ ನೀಡಿದರು. ಯಾವುದೇ ಸಂದರ್ಭದಲ್ಲಿ ಬೀಳಬಹುದಾದಂತಹ ಕೊಠಡಿಗಳನ್ನು ಕೆಡವಿ ಬಿಡಿ. ಯಾವುದೇ ರೀತಿಯ ಅನಾಹುತಕ್ಕೆ ಆಸ್ಪದ ಕೊಡಲೇಬೇಡಿ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದರು. ನರೇಗಾ ಯೋಜನೆಯಡಿ ಅಕ್ಟೋಬರ್ 2 ರ ವೇಳೆಗೆ ಎಲ್ಲಾ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಪಟ್ಟಿಯಲ್ಲಿ ದಾವಣಗೆರೆ ಜಿಲ್ಲೆ ಟಾಪ್-10 ಪಟ್ಟಿಯ ಒಳಗಡೆ ಇರುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಕೃಷಿ, ಲೋಕೋಪಯೋಗಿ, ಮೀನುಗಾರಿಕೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಡಿ. ದೇವರಾಜ ಅರಸು ಅಭಿವೃದ್ಧಿ, ಸಹಕಾರ, ಸಾರಿಗೆ, ಭೂ ಮತ್ತು ಗಣಿ ವಿಜ್ಞಾನ, ನೋಂದಣಿ, ಅಬಕಾರಿ, ಕನ್ನಡ ಮತ್ತು ಸಂಸ್ಕೃತಿ, ಅರಣ್ಯ… ಹೀಗೆ ಪ್ರತಿ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿದರು. ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ| ಎನ್. ಲಿಂಗಣ್ಣ, ಎಸ್. ರಾಮಪ್ಪ, ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷೆ ಸವಿತಾ ಕಲ್ಲೇಶಪ್ಪ, ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಎಸ್. ಅಶ್ವತಿ ಇತರರು ಇದ್ದರು.