Advertisement

ಸಮಾನ ಶಾಲಾ ಶಿಕ್ಷಣ ನೀತಿ ಜಾರಿಯಾಗಲಿ

09:31 PM Nov 29, 2019 | Lakshmi GovindaRaj |

ಹಾಸನ: ಪ್ರಾಥಮಿಕ ಶಿಕ್ಷಣದಲ್ಲಿನ ತಾರತಮ್ಯ, ಅಸಮಾನತೆ ನಿವಾರಣೆಗೆ ಸಮಾನ ಶಾಲಾ ಶಿಕ್ಷಣ ನೀತಿ ಜಾರಿಯಾಗಬೇಕು ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಪ್ರತಿಪಾದಿಸಿದರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಹಾಸನ ಶಾಖೆ ವತಿಯಿಂದ ಹಾಸನದ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ಆರಂಭವಾದ ಎರಡು ದಿನಗಳ ಪ್ರಥಮ ಅಖೀಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳ ಉದ್ಘಾಟಿಸಿ ಮಾತನಾಡಿದರು.

Advertisement

ಶಿಕ್ಷಣ ಕ್ಷೇತ್ರದಲ್ಲಿ ಇಂದು ಸರ್ಕಾರಿ ಮಾದರಿ, ಇಂಗ್ಲಿಷ್‌ ಮಾಧ್ಯಮ, ಕನ್ನಡ ಮಾಧ್ಯಮ, ಕೇಂದ್ರ ಪಠ್ಯಕ್ರಮ, ಗ್ರಾಮೀಣ ಪ್ರದೇಶದ ಶಾಲೆಗಳು ಹಾಗೂ ನಗರ ಪ್ರದೇಶದ ಶಾಲೆಗಳು ಎಂಬ ಕಂದಕಗಳು ಶಿಕ್ಷಣ ಕ್ಷೇತ್ರದಲ್ಲಿ ಸೃಷ್ಟಿಯಾಗಿವೆ. ಇವು ಮಕ್ಕಳಲ್ಲಿ ಅಸಮಾನತೆಯ ವಿಷಬೀಜ ಬಿತ್ತುತ್ತಿವೆ. ಶಿಕ್ಷಣದಲ್ಲಿ ತಾರತಮ್ಯವಿರಬಾರದು.

ಸಮಾನ ಶಿಕ್ಷಣ ನೀತಿ ರೂಪಿಸಿ ಜಾರಿಗೊಳಿಸದಿದ್ದರೆ ಮುಗ್ಧ ಮಕ್ಕಳಲ್ಲಿ ತಾರತಮ್ಯ ಬೆಳೆಯುತ್ತಾ ಹೋಗಿ ಭವಿಷ್ಯದಲ್ಲಿ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಸಮಾನ ಶಾಲಾ ಶಿಕ್ಷಣ ನೀತಿ ಜಾರಿಗೆ ಬರಬೇಕು. ಸಮಾನ ಶಿಕ್ಷಣ ನೀತಿ ಜಾರಿಯಾದರೆ ಮಾತ್ರ ನಿಜನವಾದ ಮಾನವೀಯ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಅಭೀಪ್ರಾಯಪಟ್ಟರು.

ಸರ್ಕಾರಿ, ಖಾಸಗಿ ಶಾಲೆ ಸಮಾನವಾಗಿರಲಿ: ಜೀವನದಲ್ಲಿ ಸಂಭ್ರಮದ ಕ್ಷಣಗಳಿರಬೇಕು. ಸಣ್ಣ ಸಣ್ಣ ಸಂಭ್ರಮಗಳನ್ನು ಅನುಭವಿಸಬೇಕು. ಆದರೆ ಸಂಭ್ರಮದ ಹಿಂದೆ ಸಂಕಟವಿರುತ್ತದೆ. ಮಾತಿನ ಹಿಂದೆ ಮೌನವಿರುತ್ತದೆ ಎಂಬುದನ್ನು ತಿಳಿದರಿಬೇಕು. ಕೋಗಿಲೆಯ ಮೊಟ್ಟೆಗಳಿಗೆ ಕಾಗೆ ಕಾವು ಕೊಟ್ಟು ಮರಿ ಮಾಡುವ ಕಾಗೆಯ ಕಾರುಣ್ಯ ನಮಗೆ ಆದರ್ಶವಾಗಬೇಕು. ಕಾಗೆ ಕೋಗಿಲೆ, ಬಡವ ಬಲ್ಲಿದ ಸರ್ಕಾರಿ ಶಾಲೆ ಖಾಸಗಿ ಶಾಲೆ ಸಮಾನವಾಗಿ ಪರಿಗಣಿತವಾಗಬೇಕು. ಆಗ ಮಾತ್ರ ಆದರ್ಶದ ಸಮ ಸಮಾಜದ ನಿರ್ಮಾಣದ ಕನಸು ನನಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಚರಿತ್ರೆಯ ಚಾರಿತ್ರ್ಯ ಹರಣ ಬೇಡ: ವಿಜ್ಞಾನಿಗಳಲ್ಲೆಲ್ಲಾ ವೈಜ್ಞಾನಿಕ ಮನೋಭಾವನೆ ಇರಲ್ಲ. ಸಮಾಜಶಾಸ್ತ್ರಜ್ಞರಲ್ಲೆಲ್ಲಾ ವಿಚಾರವಂತಿಕೆ ಇರಲ್ಲ. ರಾಜಕಾರಣಿಗಲ್ಲೆಲ್ಲಾ ರಾಜಕೀಯ ಪ್ರಜ್ಞೆ ಇರಲ್ಲ. ಧರ್ಮಪೀಠಗಳಲ್ಲೆಲ್ಲಾ ಧಾರ್ಮಿಕ ಪ್ರಜ್ಞೆ ಇರಲ್ಲ. ಸಾಹಿತಿಗಳಲ್ಲೆಲ್ಲಾ ಸಾಂಸ್ಕೃತಿ ಪ್ರಜ್ಞೆ ಇರಲ್ಲ ಎಂಬುದನ್ನು ಇತ್ತೀಚಿನ ಬೆಳವಣಿಗೆಗಳಿಂದ ಕಾಣುತ್ತಿದ್ದೇವೆ ಎಂದು ವಿಷಾದಿಸಿದ ಅವರು, ಈ ದೇಶವನ್ನು ಎಲ್ಲ ಜಾತಿ, ಧರ್ಮದವರೂ ಕಟ್ಟಿದ್ದಾರೆ ಎನ್ನುವ ಜ್ಞಾನವನ್ನು ಮಕ್ಕಳಲ್ಲಿ ಬಿತ್ತಬೇಕು. ಗಾಂಧಿ- ಅಂಬೇಡ್ಕರ್‌, ನೆಹರೂ – ಸರ್ದಾರ್‌ ವಲ್ಲಭಾಯಿ ಪಟೇಲ್‌ ಸಮಾನರು ಎಂಬ ನೈಜ ಮಾಹಿತಿಯನ್ನು ಮಕ್ಕಳಿಗೆ ತಿಳಿಸಬೇಕು.

Advertisement

ಒಬ್ಬ ಮಹಾಪುರಷನ್ನು ನಾಯಕನಾಗಿ ಮತ್ತೂಬ್ಬರನು ಖಳನಾಯಕನಾಗಿ ಚಿತ್ರಿಸಿ ಚರಿತ್ರೆಯ ಚಾರಿತ್ರ್ಯ ಹರಣ ಮಾಡಬಾರದು. ಚಾರಿತ್ರಿಕ ಅಂಶಗಳನ್ನು ಸಕಾರಾತ್ಮಕವಾಗಿ ಪ್ರಸ್ತುತಪಡಿಸಿ ಮಕ್ಕಳಿಗೆ ಸತ್ಯ ಹೇಳಬೇಕು. ಗಾಂಧಿ ಪ್ರತಿಪಾದಿಸಿದ ಹಿಂದೂ ಧರ್ಮ, ಗೂಡ್ಸೆಯ ಹಿಂದೂ ಧರ್ಮಕ್ಕೆ ಸಮಾನವಲ್ಲ. ಗಾಂಧಿಯ ಹಿಂದೂ ಧರ್ಮ ಸಹಿಷ್ಣುತೆಯನ್ನು ಪ್ರತಿಪಾದಿಸುವಂತದ್ದು. ವಿವೇಕಾನಂದರ ಹಿಂದೂ ಧರ್ಮ ಆಧ್ಯಾತ್ಮಕವಾಗಿದ್ದು, ನಾವು ಅನುಸರಿಸಬೇಕಾದದ್ದು ಗಾಂಧಿ ಮತ್ತು ವಿವೇಕಾನಂದರ ಹಿಂದೂ ಧರ್ಮವನ್ನು ಎಂದರು.

ಮಕ್ಕಳಿಗೆ ಸತ್ಯ ತಿಳಿಸಿ: ಗಾಂಧಿಯ ಜಾಗದಲ್ಲಿ ಗೂಡ್ಸೆಯನ್ನು, ಮಹಮ್ಮದ್‌ ಪೈಗಂಬರ್‌ ಜಾಗದಲ್ಲಿ ಬಿನ್‌ ಲಾಡೆನ್‌ನನ್ನು, ಮದರ್‌ ತೆರೆಸಾ ಸ್ಥಾನದಲ್ಲಿ ಬೆನ್ನಿಹಿನ್‌ ಕೂರಿಸಿ ಚರಿತ್ರೆಗೆ ಅಪಮಾನ ಮಾಡಬಾರದರು. ನೈಜ ಪರಿಸ್ಥಿತಿ, ಸತ್ಯವನ್ನು ಮಕ್ಕಳಿಗೆ ಹೇಳಬೇಕು. ಸರ್ವ ಧರ್ಮ ಸಮಭಾವ ಮಕ್ಕಳಲ್ಲಿ ಬೆಳೆಸಬೇಕು. ಆದರೆ ಕಲ್ಯಾಣ ರಾಜ್ಯ ನಿರ್ಮಿಸುವ ಬದಲು ಕಾಂಚಾಣ ರಾಜ್ಯ ನಿರ್ಮಿಸುವ ಪ್ರಯತ್ನ ಮಾಡಬಾರದು. ಈ ದೇಶದಲ್ಲಿ ಜಾತಿಗಳಿವೆ, ಧರ್ಮಗಳಿವೆ. ಆದರೆ ನಾವು ಜಾತಿವಾದಿಗಳಾಗಬಾರದು, ಧರ್ಮಾಂಧರಾಗಬಾರದು ಎಂದು ಹೇಳಿದರು.

ಮಕ್ಕಳ ಸಾಹಿತ್ಯ ರಚಿಸುವವರಲ್ಲಿ ಮಗುವಿನಂತಹ ಮನಸ್ಸು ಇರಬೇಕು. ಆಗ ಮಾತ್ರ ಮಕ್ಕಳ ಸಾಹಿತ್ಯ ರಚನೆ ಸಾಧ್ಯ. ಮಗುವಿನ ಮನಸ್ಸಿನಲ್ಲಿ ಸ್ವಾರ್ಥವಿರುವುದಿಲ್ಲ. ಮಕ್ಕಳು ಹುಟ್ಟುವುದು ವಿಶ್ವಮಾನವಾಗಿ. ಮಗುವಿನ ಮನಸ್ಸಿನಲ್ಲಿ ಜಾತಿ, ತಾರತಮ್ಯ, ಆಹಂ ಇರುವುದಿಲ್ಲ. ಮಗುವಿನಲ್ಲಿ ಮುಗ್ಧತೆ ಇರುತ್ತದೆ. ಹಾಗಾಗಿ ದೊಡ್ಡವರ ಮನಸ್ಸಿನಳ್ಳು ಮಗುವಿನ ಮನಸ್ಸು ಹುಟ್ಟುತ್ತಾ ಹೋಗಬೇಕು ಎಂದು ಆಶಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷ ಶ್ರೀ ನಿರ್ಮಿಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮ್ಮೇಳನಾಧ್ಯಕ್ಷೆ ಕೀರ್ತನಾ ನಾಯಕ್‌ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಶಂಭುನಾಥ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಡಿಡಿಪಿಐ ಪ್ರಕಾಶ್‌, ಬಿಇಒ ಬಲರಾಂ, ಚನ್ನರಾಯಪಟ್ಟಣದ ಸಿ.ನಂಜುಂಡೇಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಉಪಸ್ಥಿತರಿದ್ದರು. ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಅಧ್ಯಕ್ಷ ಚ.ನಂ.ಅಶೋಕ್‌ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಧ್ವಜಾರೋಹಣ: ರಾಷ್ಟ್ರಧ್ವಜಾರೋಹಣವನ್ನು ಮಹಾ ಪೋಷಕರು ಹಾಗೂ ಕಾರ್ಯದರ್ಶಿ ಆದಿ ಚುಂಚನಗಿರಿ ಶಾಖಾಮಠ, ಹಾಸನದ ಶಂಭುನಾಥ ಸ್ವಾಮೀಜಿಯವರು ನೇರವೇರಿಸಿದರು. ಪರಿಸರವಾದಿ, ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ‌ ಸಿ.ಎನ್‌. ಅಶೋಕ್‌ ಅವರು ಮಕ್ಕಳ ಸಾತ್ಯ ಪರಿಷತ್ತಿನ ಧ್ವಜಾರೋಹಣ ಮಾಡಿದರು. ವಸ್ತು ಪ್ರದರ್ಶನದ ಉದ್ಘಾಟನೆ: ಅಖೀಲ ಭಾರತ ಪ್ರಪಥಮ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ವಸ್ತು ಪ್ರದರ್ಶನವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದ ಮಹಾಸ್ವಾಮೀಜಿಯವರು ಉದ್ಘಾಟಿಸಿದರು.

ಅತಃಕರಣ ಶುದ್ಧ ಸಾಹಿತಿಗಳ ಸಾಹಿತ್ಯ ಚಿರಸ್ಥಾಯಿ: ಚುಂಚಶ್ರೀ
ಹಾಸನ: ಅಂತಃಕರಣ ಶುದ್ಧ ಸಾಹಿತಿಗಳಿಂದ ಮಾತ್ರ ಉತ್ತಮ ಸಾಹಿತ್ಯ ರಚನೆ ಸಾಧ್ಯ. ಅತಃಕರಣ ಶುದ್ಧ ಸಾಹಿತಿಯ ಸಾಹಿತ್ಯವೂ ನೂರ್ಕಾಲ ಚಿರಸ್ಥಾಯಿಯಾಗಿರುತ್ತದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷ ನಿರ್ಮಿಲಾನಂದನಾಥ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಮತ್ತು ಆದಿಚುಂಚನಗಿರಿ ಮಹಾ ಸಂಸ್ಥಾನದ ಹಾಸನ ಶಾಖೆ ವತಿಯಿಂದ ಹಾಸನದ ಕ್ರೀಡಾಂಗಣದಲ್ಲಿ ಆರಂಭವಾದ ಎರಡು ದಿನಗಳ ಪ್ರಥಮ ಅಖೀಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನೀಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಕ್ಕಳಲ್ಲಿ ಅತಃಕರಣ ಶುದ್ದಿ ಇರುತ್ತದೆ. ಇದು ದೊಡ್ಡವರಲ್ಲೂ ಇರಬೇಕು ಎಂದು ಬಯಸಿದರು.

ಕನ್ನಡ ಸಾಹಿತ್ಯ ಲೋಕ ಸೊರಗಿದಂತೆ ಕಾಣುತ್ತಿದೆ ಎಂಬ ಸಾಮಾನ್ಯ ಭಾವನೆಯಿದೆ. ಆದರೆ ಇಂದು ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗುತ್ತಿರುವ ಮಕ್ಕಳ ಕವನ ಸಂಕಲಗಳ ಸಂಖ್ಯೆನ್ನು ಗಮನಿಸಿದರೆ, ಕನ್ನಡ ನಾಡಿನಲ್ಲಿ ಪಂಪ ಮತ್ತೆ ಹುಟ್ಟಿ ಬರಬಹುದು. ಕುವೆಂಪು ಅವತರಿಸಬಹುದು ಎಂದೆನಿಸುತ್ತಿದೆ. ಎಳೆವೆಯಲ್ಲೇ ಸಾಹಿತ್ಯಾಸಕ್ತಿ ಮೂಡಿದರೆ ಏನಾಗುತ್ತದೆ ಎಂಬುದಕ್ಕೆ ಇಂದು ಬಿಡುಗಡೆಯಾಗುತ್ತಿರುವ ಮಕ್ಕಳ ಕೃತಿಗಳೇ ಸಾಕ್ಷಿಯಾಗಿವೆ ಎಂದರು.

ಕವಿಗಳು, ಸಾಹಿತಿಗಳು ದೇಶದ ಆಸ್ತಿ, ಆಂತಹ ಕವಿ, ಸಾಹಿತಿಗಳು ಸೃಷ್ಟಿಯಾಗಲಿ ಎಂಬ ಉದ್ದೇಶದಿಂದ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಸಾಹಿತ್ಯ ಪ್ರಭೆ ಮಕ್ಕಳಲ್ಲಿ ಉಜ್ವಲಿಸಲಿ. ಆ ಮೂಲಕ ಸಮಾಜಮುಖೀ ಕವಿ, ಸಾಹಿತಿಗಳು ಸೃಷ್ಠಿಯಾಗಲಿ ಎಂದು ಆಶಿಸಿದರು.

ಚಳುವಳಿಯಂದ ನಾಡಿನ ಸಮಸ್ಯೆ ಪರಿಹಾರ ಸಮ್ಮೇಳನದ ಅಧ್ಯಕ್ಷೆ ಕೀರ್ತನಾ ನಾಯಕ್‌ ಅಭಿಮತ
ಹಾಸನ: ಕನ್ನಡ ನಾಡು, ನುಡಿ, ಜಲದ ಸಮಸ್ಯೆ, ಮುಚ್ಚುತ್ತಿರುವ ಕನ್ನಡ ಮಾಧ್ಯಮ ಶಾಲೆಗಳು, ಕನ್ನಡಿಗರಿಗೆ ಉದ್ಯೋಗ ನೀಡಿಕೆಯಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮತ್ತಿತರ ಸಮಸ್ಯೆಗಳಿಗೆ ಕನ್ನಡ ನಾಡಿನ ಏಕೀಕರಣದಂತಹ ಚಳುವಳಿ ನಾಡಿನಲ್ಲಿ ಮತ್ತೆ ನಡೆಯಬೇಕು. ಆಗ ಮಾತ್ರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದು ಪ್ರಥಮ ಅಖೀಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ದ್ವಿತೀಯ ಪಿ.ಯು. ವಿದ್ಯಾರ್ಥಿನಿ ಕೀರ್ತನಾ ನಾಯಕ್‌ ಅಭಿಪ್ರಾಯಪಟ್ಟರು.

ಹಾಸನದ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ಆರಂಭವಾದ ಎರಡು ದಿನಗಳ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಮಾತನಾಡಿದ ಆವರು, ಪರಭಾಷಾ ವ್ಯಾಮೋಹಕ್ಕೆ ಸಿಲುಕಿರುವ ಕನ್ನಡಿಗರ ಸ್ಥಿತಿಯು ಹಾವಿನ ಬಾಯಿಯೊಳಗಿನ ಕಪ್ಪೆಯು ಹಸಿದು ಹಾರುವ ನೊಣಕೆ ಹಾತೊರೆದಂತೆ, ಮಾರಿಯ ಮುಂದಿನ ಹರಕೆಯ ಕುರಿಯು ಹಸಿದು ತಳಿರು ತೋರಣವ ಮೇಯ್ದಂತಾಗಿದೆ. ಹಲವು ಮಹನೀಯರ ಹೋರಾಟದ ಫ‌ಲವಾಗಿ ಕರ್ನಾಟಕವೇನೋ ಹೆಸರಾಯಿತು.

ಆದರೆ ಕನ್ನಡಿಗನಿಗೆ ಉಸಿರಾಗಲಿಲ್ಲ. ಕನ್ನಡವನ್ನು ಜಾಗೃತಗೊಳಿಸಬೇಕಾದರೆ ಕುವೆಂಪುರವರ ಬಾರಿಸು ಕನ್ನಡ ಡಿಂಡಮವ, ಓ ಕರ್ನಾಟಕ ಹೃದಯ ಶಿವ. ಸತ್ತಂತಿಹರನ್ನು ಬಡಿದೆಚ್ಚರಿಸು ಎಂಬ ಘೋಷಣೆ ಇಂದಿಗೆ ಪ್ರಸ್ತುತವಾಗಿದೆ ಎಂದರು. ಚ.ನಂ.ಅಶೋಕ್‌ ಅವರ ಸಾರಥ್ಯದಲ್ಲಿ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ರಚನೆಯಾಗಿರುವುದು ಶ್ಲಾಘನೀಯ.

ಹಿರಿಯರಿಗಾಗಿಯೇ ಮೀಸಲು ಎಂಬಂತಿದ್ದ ಕನ್ನಡ ಸಾಹಿತ್ಯ ಸಮ್ಮೇಳನಗಳು ಮಕ್ಕಳಿಗೇಕಿಲ್ಲ ಎಂಬ ಕೊರಗು ನಿವಾರಣೆಯ ಹಿನ್ನಲೆಯಲ್ಲಿ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಆದಿಚುಂಚನಗಿರಿ ಮಠದ ನೆರವಿನಲ್ಲಿ ಹೋಬಳಿ, ತಾಲೂಕು. ಜಿಲ್ಲಾ, ರಾಜ್ಯ ಮಟ್ಟದ ಸಮ್ಮೇಳನಗಳನ್ನು ನಡೆಸಿಕೊಂಡು ಬಂದಿದೆ. ಇದೀಗ ಅಖೀಲ ಭಾರತ ಮಟªದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನೂ ಹಾಸನದಲ್ಲಿ ಹಮ್ಮಿಕೊಂಡು ಕನ್ನಡ ಸಾಹಿತ್ಯ ಲೋಕದಲ್ಲಿ ದಾಖಲೆ ಸೃಷ್ಟಿಸಿದೆ. ಮಕ್ಕಳ ಬಹುಮುಖೀ ಪ್ರತಿಭೆಗೆ ವೇದಿಕೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next