ಕಲಬುರಗಿ: ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾರ್ಯ ಜೀವನ ಉಸಿರಾಗಲಿ, ಪರಿಸರದಲ್ಲಿ ಹಸಿರು ಹೆಚ್ಚಾದಲ್ಲಿ ನಮ್ಮ ಉಸಿರು ಸದೃಢವಾಗುತ್ತದೆ ಎಂದು ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಹೇಳಿದರು. ಶನಿವಾರ ನಗರದ ವಿಕಾಸಸೌಧ (ಜಿಲ್ಲಾಧಿಕಾರಿ) ಕಚೇರಿ ಆವರಣದಲ್ಲಿ ಅರಣ್ಯ ಇಲಾಖೆ, ಜಿಲ್ಲಾಡಳಿತ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಆಚರಿಸಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಮ್ಮ ಮುಂದಿನ ಪೀಳಿಗೆಯ ಯೋಗ ಕ್ಷೇಮಕ್ಕಾಗಿ ಪ್ರತಿಯೊಬ್ಬರು ಸಸಿ ನೆಟ್ಟು ಬೆಳೆಸಬೇಕು. ನಮ್ಮೆಲ್ಲರಿಗೂ ಉಚಿತವಾಗಿ ಆಕ್ಸಿಜನ್ ನೀಡುವ ಸಸಿಗಳನ್ನು ಬೆಳೆಸಲು ಯಾರೂ ಹಿಂದೇಟು ಹಾಕಬಾರದು. ಸ್ವಯಂ ಪ್ರೇರಣೆಯಿಂದ ಮತ್ತು ಹೊಣೆಗಾರಿಕೆಯಿಂದ ಎಲ್ಲರೂ ಸಸಿ ಬೆಳೆಸಬೇಕು ಎಂದು ತಿಳಿಸಿದರು.
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮಳೆ ಉತ್ತಮವಾಗಿ ಬರುವ ಲಕ್ಷಣಗಳಿವೆ. ಹೀಗಾಗಿ ಈ ಸಲ ಒಂದು ಲಕ್ಷಕ್ಕೂ ಹೆಚ್ಚಿನ ಸಸಿಗಳನ್ನು ನೆಡಲು ತಯಾರಿ ನಡೆಸಲಾಗುತ್ತಿದೆ. ಸಾರ್ವಜನಿಕರು ಸಸಿಗಳನ್ನು ನೆಡಲು ಮುಂದಾದವರೆ ಅವರಿಗೆ ಅರಣ್ಯ ಇಲಾಖೆಯು ಉಚಿತವಾಗಿ ಸಸಿಗಳನ್ನು ನೀಡಲಿದೆ ಎಂದರು. ಪರಿಸರದಿಂದ ನಮಗೆ ಉಚಿತವಾಗಿ ಆಮ್ಲಜನಕ ದೊರೆಯುತ್ತದೆ.
ಇಡೀ ಜೀವಸಂಕುಲವನ್ನು ಪರಿಸರ ಪೋಷಿಸುತ್ತಿದೆ. ಹೀಗಾಗಿ ಪರಿಸರ ಕಾಳಜಿ ದಿನಾಚರಣೆಗೆ ಸೀಮಿತವಾಗದೆ, ಪ್ರತಿಯೊಬ್ಬರು ಪ್ರತಿನಿತ್ಯ ಪರಿಸರ ಸಂರಕ್ಷಣೆ ಕಾಳಜಿ ವಹಿಸಬೇಕು. ಕೊರೊನಾ ಅಬ್ಬರದಲ್ಲಿ ಆಕ್ಸಿಜನ್‌ಗಾಗಿ ಎಷ್ಟೊಂದು ಪರದಾಡಿದ್ದೇವೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಹಾಗೆ ಆಗಬಾರದು ಎಂದರೆ ಸಸಿಗಳನ್ನು ಬೆಳೆಸಿರಿ.
ಇಂತಹ ಕಾರ್ಯಕ್ಕೆ ಸಮಾಜದವರೆಲ್ಲರೂ ಕೈಜೋಡಿಸಬೇಕೆಂದು ಕೋರಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೇವು, ಚಳ್ಳೆ, ಸಿಸು, ಗುಲ್ ಮೋಹರ್ ಸಸಿಗಳನ್ನು ನೆಡಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಡಾ| ದಿಲೀಷ್ ಸಸಿ, ಎಸ್ಪಿ ಡಾ| ಸಿಮಿ ಮರಿಯಮ್ ಜಾರ್ಜ್, ಅರಣ್ಯ ಸಂರಕ್ಷಣಾಧಿಕಾರಿ ಎಂ. ವಾನತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಬುರಾವ್ ಪಾಟೀಲ, ಅರಣ್ಯ ಇಲಾಖೆ ಅಧಿಕಾರಿಗಳು ಮುಂತಾದವರಿದ್ದರು.