ಹಾವೇರಿ: ಬಿಜೆಪಿ ಎಲ್ಲಾ ಪತ್ರಿಕೆಗಳಲ್ಲಿ ಬಿಜೆಪಿ ಜಾಹೀರಾತು ಕೊಟ್ಟಿದೆ. ರಾಜಸ್ಥಾನದಲ್ಲಿ ಮೋದಿಯವರು ಭಾಷಣ ಮಾಡಿದ್ದಾರೆ. ನರೇಂದ್ರ ಮೋದಿ ಹಾಗೆ ಮಾತಾಡಲು ಅವರು ಯಾವುದೋ ಪಂಚಾಯಿತಿ ಸದಸ್ಯನಲ್ಲ, ಅವರು ಪ್ರಧಾನಮಂತ್ರಿ. ಎಲ್ಲಾ ನಾಗರೀಕರ ಜೀವ ಕಾಪಾಡುವ ಮೂಲಭೂತ ಜವಾಬ್ದಾರಿ ಅವರ ಮೇಲಿದೆ. ಆದರೆ ಮೋದಿಯವರು ಜವಾಬ್ದಾರಿ ಮರೆತಿರುವ ಹಾಗೆ ಕಾಣುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೋ ಸಮುದಾಯ ಗುರಿ ಮಾಡಿ ಹೇಳಿಕೆ ಕೊಟ್ಟಿದ್ದಾರೆ ಚುನಾವಣಾ ಆಯೋಗ ನಿಷ್ಪಕ್ಷಪಾತ ಚುನಾವಣೆ ಮಾಡುವುದಾದರೆ ಮೋದಿಯವರ ಮೇಲೆ ಕ್ರಮ ಜರುಗಿಸಲಿ. ಪ್ರಚೋದನಕಾರಿ ಮಾತಾಡಿದರೆ ಪೊಲೀಸರೂ ಸೋಮೋಟೋ ಎಫ್ಐಆರ್ ದಾಖಲಿಸಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಇದೆ ಎಂದರು.
ತೆರಿಗೆ ಹಣ ಯಾವುದೋ ಒಂದು ಸಮುದಾಯಕ್ಕೆ ಹೋಗುತ್ತೆ ಅಂತ ಮೋದಿಯವರು ಹೇಳಿದ್ದಾರೆ. ತೆರಿಗೆ ಕಟ್ಟಬೇಕಾದರೆ ಒಂದೇ ಧರ್ಮ, ಭಾಷೆಯವರು ತೆರಿಗೆ ಕಟ್ಟಿರುವುದಿಲ್ಲ. ತೆರಿಗೆಯನ್ನು ಸರ್ವರಿಗೂ ಸಮಪಾಲು, ಸಮಬಾಳು ಆಶಯದ ಮೇಲೆ ತೆರಿಗೆ ಹಣ ಹಂಚಬೇಕು. ತೆರಿಗೆ ಹಣ ಸರಿ ಸಮಾನವಾಗಿ ಹಂಚಬೇಕಾಗುತ್ತದೆ ಎಂದರು.
ಬಿಜೆಪಿಯವರು ಜಾಹೀರಾತಿನಲ್ಲಿ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸ್ತಿದ್ದಾರೆ. ಬಿಹಾರ್ ನಲ್ಲಿ ಮೀಸಲಾತಿ ಬಗ್ಗೆ ಮಾತಾಡಿದ್ದಕ್ಕೆ ಸೋತರು. ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾಡಬೇಕು ಎಂದಿದ್ದರು. ಸಂವಿಧಾನದಲ್ಲಿ ಸಮಾನ ಅವಕಾಶದ ಹಕ್ಕಿಗೆ ವಿರುದ್ಧ ಇರುವವರು ಬಿಜೆಪಿ ಸೂತ್ರದಾರರು. ನಕ್ಸಲ್ ದಾಳಿಯೆಂದು ಹೇಳಿದ್ದಾರೆ. 19 ರಾಜ್ಯಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಮಹಾರಾಷ್ಟ್ರ ಛತ್ತೀಸ್ ಘಡ್, ಒಡಿಸ್ಸಾದಲ್ಲಿ ಕೆಲಸ ಮಾಡಿದ್ದೇನೆ. ಹಿಂದೆ ನಕ್ಸಲ್ ಅಟ್ಯಾಕ್ ಮಾಡಿದಾಗ 27 ಕಾಂಗ್ರೆಸ್ ನಾಯಕರನ್ನು ಕಳೆದುಕೊಂಡಿದ್ದೇವೆ. ನಕ್ಸಲ್ ನವರು ಹಾಗೂ ಬಿಜೆಪಿ ಸೂತ್ರದಾರರ ನಡುವೆ ಒಳ್ಳೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೋದಿಯವರು ಅಮೃತ್ ಕಾಲ ಎಂದು ದೊಡ್ಡದಾಗಿ ಭಾಷಣ ಮಾಡಿದರು. ಜಾಹೀರಾತಿನಲ್ಲಿ ತಮ್ಮ ಹತ್ತು ವರ್ಷ ಏನು ಮಾಡಿದಾರೆ ಎಂದು ಎಲ್ಲೂ ಹೇಳಿಲ್ಲ. ಸಾಲ ಯಾರಿಗಾಗಿ ಮಾಡಿದಾರೆ ಎಂದು ಪ್ರಣಾಳಿಕೆಯಲ್ಲಿ ಹೇಳಿಲ್ಲ. ಅವರ ಪ್ರಣಾಳಿಕೆಯಲ್ಲಿ ಹತ್ತು ವರ್ಷದ ಸಾಧನೆ ಹೇಳೀಯೇ ಇಲ್ಲ. ಅಮೃತಕಾಲ ಅಲ್ಲ, ಅದು ರಾಹುಕಾಲದಲ್ಲಿ ಹೇಳಿರಬೇಕು, ಅನ್ಯಾಯ ಕಾಲ ಎಂದು ಹೇಳಿದ್ದೆವು. ನಾವು ಐದು ನ್ಯಾಯ ಪತ್ರ ಕೊಟ್ಟಿದ್ದೇವೆ ಎಂದು ಬಿಜೆಪಿ ವಿರುದ್ದ ಹರಿಪ್ರಸಾದ್ ಕಿಡಿಕಾರಿದರು.
ಇವರು ಬರೀ ಪಾಕಿಸ್ತಾನ, ಹಿಂದೂ ಮುಸ್ಲಿಂ, ಪಾಳು ಬಿದ್ದಿರುವ ದೇವಸ್ಥಾನ, ಮಸೀದಿ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಬದುಕುವುದಕ್ಕೆ ಏನು ಮಾಡಬೇಕು ಅದನ್ನು ಮಾಡಿಲ್ಲ. ಕೇಂದ್ರದಲ್ಲಿ 30 ಲಕ್ಷ ಹುದ್ದೆ ಖಾಲಿ ಇದೆ ಅದನ್ನು ಭರ್ತಿ ಮಾಡಿಲ್ಲ ಎಂದರು.