Advertisement

ಶಿಕ್ಷಣ ಸಂಸ್ಥೆಗಳು ಕೌಶಲಾಭಿವೃದ್ಧಿಗೆ ಒತ್ತು ನೀಡಲಿ

12:49 AM Jul 04, 2019 | Team Udayavani |

ಬೆಂಗಳೂರು: ಶಿಕ್ಷಣ ಸಂಸ್ಥೆಗಳು ಕೇವಲ ಮಾಹಿತಿ ಕೇಂದ್ರಗಳಾಗಿ ಉಳಿಯದೇ ಜ್ಞಾನಕೇಂದ್ರಗಳಾಗಿ ಕೌಶಲಾಭಿವೃದ್ಧಿಗೆ ಒತ್ತು ನೀಡಬೇಕು ಎಂದು ಬೆಂಗಳೂರು ವಿವಿ ಕುಲಪತಿ ಕೆ.ಆರ್‌.ವೇಣುಗೋಪಾಲ್‌ ತಿಳಿಸಿದರು.

Advertisement

ಬೆಂಗಳೂರು ವಿಶ್ವವಿದ್ಯಾಲಯವು ದಿಶಾ ಸಂಸ್ಥೆ ಸಹಯೋಗದಲ್ಲಿ ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಾಂಶುಪಾಲರ ಸಮಾವೇಶದಲ್ಲಿ ಮಾತನಾಡಿದರು.

ಇಂದಿನ ಪರಿಸ್ಥಿತಿಯಲ್ಲಿ ಕೌಶಲ್ಯವಿಲ್ಲದೇ ವೃತ್ತಿ ಜೀವನ ಆರಂಭಿಸಲು, ಮುಂದುವರಿಸಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಕೌಶಲಾಭಿವೃದ್ಧಿ ಕೇಂದ್ರಗಳಾಗಿ ಕಾರ್ಯಹಿಸುವ ಅಶ್ಯಕತೆ ಹೆಚ್ಚಿದೆ ಎಂದು ಹೇಳಿದರು.

ಇಂದಿನ ಡಿಜಿಟಲ್‌ ಯುಗದಲ್ಲಿ ಮಾಹಿತಿ ಎಲ್ಲಡೆ ಲಭ್ಯವಿದೆ. ವಿದ್ಯಾರ್ಥಿಗಳು ಈ ಮಾಹಿತಿಯಿಂದ ಕೇವಲ ಪರೀಕ್ಷೆಗಳು ಉತ್ತಮವಾಗಿ ಎದುರಿಸಿ ಉತ್ತಮ ಅಂಕಪಡೆಯಬಹುದು. ಆದರೆ, ಅಂಕಪಟ್ಟಿಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದಿಲ್ಲ.

ಹೀಗಾಗಿ, ಆ ಮಾಹಿತಿಯನ್ನು ಜ್ಞಾನವಾಗಿ ನೀಡಿದಾಗ ವಿದ್ಯಾರ್ಥಿಗಳಲ್ಲಿ ಕೌಶಲ ಹೆಚ್ಚಾಗುತ್ತದೆ. ಕೌಶಲ ಹೆಚ್ಚಿಸುವಲ್ಲಿ ಪದವಿ ಶಿಕ್ಷಣ ಸಂಸ್ಥೆಗಳ ಪಾತ್ರ ಹೆಚ್ಚಿದೆ. ಆದರೆ, ಇಂದಿನ ಶಿಕ್ಷಣ ಸಂಸ್ಥೆಗಳು ಮಾಹಿತಿ ಕೇಂದ್ರಗಳಾಗಿ ಮಾತ್ರ ಉಳಿಯುತ್ತಿವೆ.

Advertisement

ಅಲ್ಲಿನ ಶಿಕ್ಷಕರು ಮಾಹಿತಿಗಾರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಮಾತನಾಡಿ, ಒಂದು ದೇಶದ ಶಿಕ್ಷಿತರ ಅಪ್ರಮಾಣಿಕತೆಯು ಆ ದೇಶದ ಅಶಿಕ್ಷಿತರ ಸಮುದಾಯಕ್ಕಿಂತ ಮಾರಕವಾಗಿರುತ್ತದೆ.

ಮೌಲ್ಯಾಧಾರಿತ ಶಿಕ್ಷಣವು ಪ್ರಾಮಾಣಿಕತೆ, ಸ್ವಾವಲಂಬನೆ, ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಯಾವುದೇ ತತ್ವಗಳನ್ನು ನಿರಂತರವಾಗಿ ಪಾಲಿಸಿದಾಗ ಭವಿಷ್ಯದಲ್ಲಿ ಅವುಗಳೇ ಮೌಲ್ಯಗಳಾಗುತ್ತವೆ. ಶಿಕ್ಷಕರ ಎಲ್ಲಾ ನಡೆಗಳು ಮಕ್ಕಳಿಗೆ ಮಾದರಿಯಾಗುವಂತಿರಬೇಕು. ಶಿಕ್ಷಕರ ನೀತಿ ಬೋಧನೆಗಿಂತ, ಅವರು ಅನುಸರಿಸಿ ಪಾಲಿಸುವುದಕ್ಕೆ ಮೌಲ್ಯವಿರುತ್ತದೆ ಎಂದರು.

ಸರ್ಕಾರದಿಂದ ಕಡಿವಾಣ ಅಗತ್ಯ: ನಮ್ಮಲ್ಲಿ ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆ ಹಿಂದುಳಿದಿರುವುದಕ್ಕೆ ಪ್ರಮುಖ ಕಾರಣ ಶಿಕ್ಷಕರನ್ನು ನಿರ್ಮಿಸುವ ಪದವಿ ಕೇಂದ್ರಗಳು ಖಾಸಗೀಕರಣವಾಗಿರುವುದು. ಶೇ.80 ಬಿ.ಎಡ್‌ ವಿದ್ಯಾರ್ಥಿಗಳು ಎರಡು ವರ್ಷ ಕಲಿಕಾ ಅವಧಿಯಲ್ಲಿ ಒಂದು ತರಗತಿಯನ್ನು ತೆಗೆದುಕೊಂಡು ಪಾಠ ಮಾಡದೇ ಪದವಿ ಪ್ರಮಾಣ ಪತ್ರ ಪಡೆದು ಹೊರಬರುತ್ತಿದ್ದಾರೆ.

ಅಂತಹ ಶಿಕ್ಷಕರಿಂದ ಮಕ್ಕಳು ಮೌಲ್ಯಾಧಾರಿತ ಶಿಕ್ಷಣ ನಿರೀಕ್ಷೆ ಅಸಾಧ್ಯ. ಸರ್ಕಾರ ಇವುಗಳಿಗೆ ಕಡಿವಾಣ ಹಾಕಬೇಕು. ಇನ್ನು ಸೆಮಿಷ್ಟರ್‌ ಪದ್ಧತಿಯು ನಿಜಕ್ಕೂ ವಿದ್ಯಾರ್ಥಿಗಳಿಗೆ ಒತ್ತಡ ಹೆಚ್ಚಿಸುತ್ತಿದೆ. ಇಲ್ಲಿ ವಿದ್ಯಾರ್ಥಿಗಳು ಯಂತ್ರದ ಮಾದರಿಯಲ್ಲಿ ಪರೀಕ್ಷೆಗಳಿಗೆ ಸಿದ್ಧರಾಗುತ್ತಿದ್ದಾರೆ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಹೇಳಿದರು.

ಉಡುಗೊರೆ ಪ್ರವೃತ್ತಿ ಅಧಿಕ: ಅಧಿಕಾರಿಗಳಿಗೆ ಕಾಲೇಜು ಮಂಡಳಿಗಳು ಪಂಚತಾರಾ ಹೋಟೆಲ್‌ ವ್ಯವಸ್ಥೆ, ಲಂಚದ ರೂಪದಲ್ಲಿ ಉಡುಗೊರೆಯ ನೀಡುವ ಪ್ರವೃತ್ತಿ ಹೆಚ್ಚಳವಾಗುತ್ತಿದೆ. ಇದು ಅಪ್ರಾಮಾಣಿಕತೆಯನ್ನು ತೋರುತ್ತಿದ್ದು, ಇಂತಹ ವ್ಯವಸ್ಥೆ ಬದಲಾಗಬೇಕಿದೆ.

ಪ್ರಸ್ತುತ ವಿದ್ಯಾರ್ಥಿಗಳಿಗೆ ವಿಷಯಾಧಾರಿತ ಶಿಕ್ಷಣ ಅವಶ್ಯಕತೆ ಹೆಚ್ಚಿದ್ದು, ಪ್ರಸ್ತುತ ಶಿಕ್ಷಣದಲ್ಲಿ ಶೇ.70ರಷ್ಟು ಯಂತ್ರಾಧಾರಿತ ಶಿಕ್ಷಣ ಹಾಗೂ ಶೇ.30ರಷ್ಟು ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ. ಕಂಪ್ಯೂಟರ್‌ ಸಿದ್ಧಪಡಿಸಿರುವ ವಿಷಯ ಅವಲಂಬನೆ ಹೆಚ್ಚಾಗಿದೆ. ಮಾನವಿಕ ಜ್ಞಾನ ಮರೆಯಾಗುತ್ತಿದೆ ಎಂದು ನ್ಯಾಕ್‌ ನಿರ್ದೇಶಕ ಡಾ.ಎಸ್‌.ಸಿ.ಶರ್ಮಾ ವಿಷಾದ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next