ಹಾಸನ: ಜಿಲ್ಲೆಯ ಎಲ್ಲಾ ಅರ್ಹ ಫಲಾನುಭವಿ ರೈತರಿಗೆ ಸಾಲಮನ್ನಾ ಸೌಲಭ್ಯ, ಬರ ಪರಿಹಾರ ಹಾಗೂ ಬೆಳೆ ವಿಮೆ ಸವಲತ್ತುಗಳು ಸಿಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೊನ್ಮುಖರಾಗಬೇಕು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್.ಶ್ವೇತಾ ಅವರು ಸೂಚಿಸಿದರು.
ಬರದಿಂದ ಕಂಗಾಲಾದ ರೈತರು: ಸತತ ಬರದಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಕೃಷಿ ಬಿತ್ತನೆ ಈವರೆಗೆ ಕೇವಲ ಶೇ.31ರಷ್ಟಾಗಿದೆ. ಹಾಗಾಗಿ ರೈತರಿಗೆ ಬರ ಪರಿಹಾರ, ಬೆಳೆ ವಿಮೆ ಸೌಲಭ್ಯಗಳು ಸಿಗಬೇಕು. ಈಗಿನ ಸ್ಥಿತಿಯಲ್ಲಿ ರೈತರು ಅನುಸರಿಸಬೇಕಾದ ಬೇಸಾಯ, ಅಲ್ಪಾವಧಿ ಬೆಳೆಗಳ ಬಗ್ಗೆ ಅರಿವು ಮೂಡಿಸಿ ಎಂದರು.
ಶುದ್ಧ ನೀರಿನ ಘಟಕ ದುರಸ್ತಿ ಮಾಡಿ: ಜಿಲ್ಲೆಯಲ್ಲಿ ಹಲವು ಕುಡಿಯುವ ನೀರಿನ ಯೋಜನೆಗಳನ್ನು ಮೊದಲ ಆದ್ಯತೆಯಲ್ಲಿ ಪೂರ್ಣಗೊಳಿಸಬೇಕು. ಕೆಲವು ಶುದ್ಧ ಕುಡಿಯು ನೀರಿನ ಘಟಕಗಳು ಹಾಳಾಗಿದ್ದು, ತಕ್ಷಣ ದುರಸ್ತಿಪಡಿಸಿ ಅಲ್ಲದೆ ಜಲ ಸಂರಕ್ಷಣೆ ಯೋಜನೆಗಳ ಬಗ್ಗೆ ಗಮನ ಹರಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಸಣ್ಣ ನೀರಾವರಿ ಇಲಾಖೆಗಳು ಉದ್ಯೋಗ ಖಾತರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ರೈತರಿಗೆ ನೆರವಾಗಬೇಕು. ಜಲ ಸಂವರ್ಧನೆ, ಜಲ ಮರುಪೂರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆಲೂಗೆಡ್ಡೆ ಬೆಳೆಗಾರರಿಗೆ ನೀಡಬೇಕಾಗಿರುವ ಸಬ್ಸಿಡಿ ಹಣವನ್ನು ತ್ವರಿತವಾಗಿ ವಿತರಿಸಬೇಕು ಎಂದು ನಿರ್ದೇಶನ ನೀಡಿದರು.
Advertisement
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಅರ್ಹ 1.25 ಲಕ್ಷ ರೈತರಿಗೆ ಸಾಲಮನ್ನಾ ಸೌಲಭ್ಯ ದೊರೆಯಬೇಕು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಮನ್ನಾ ಮತ್ತು ಹೊಸ ಕೃಷಿ ಸಾಲ ವಿತರಣೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Related Articles
Advertisement
ಬಯೋಮೆಟ್ರಿಕ್ ಕಡ್ಡಾಯಗೊಳಿಸಿ: ನ್ಯಾಯ ಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಯಂತ್ರಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಆ ಮೂಲಕವೇ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ವಿತರಿಸಬೇಕು ಎಂದು ಶ್ವೇತಾ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಅವರು ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ ಮಾತನಾಡಿ, ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಲ್ಲಾ ಇಲಾಖೆಗಳು ಭದ್ರತೆಯಿಂದ ಶ್ರಮಿಸಬೇಕು ಯೋಜನೆಗಳ ಕಾಲಬದ್ಧ ಅನುಷ್ಠಾನ, ವ್ಯವಸ್ಥಿತ ಮಾಹಿತಿ, ಶಿಕ್ಷಣ, ಸಂವಹನ ಕಾರ್ಯಗಳನ್ನು ಮಾಡಬೇಕು ಎಂದು ಎಂ.ಎಲ್.ವೈಶಾಲಿ ಹೇಳಿದರು.
ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಿ:
ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಇನ್ನಷ್ಟು ಸುಧಾರಣೆಯಾಗಬೇಕು ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಕಾಯ್ದುಕೊಳ್ಳಬೇಕು. ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ಭದ್ರತೆಗೆ ಮೊದಲ ಆದ್ಯತೆ ನೀಡಬೇಕು, ವಸತಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಉತ್ತಮಪಡಿಸಿ ಕಲಿಕಾ ವಾತಾವರಣ ಉತ್ತಮಗೊಳಿಸಬೇಕು. ಎಲ್ಲಾ ಹಾಸ್ಟೆಲ್ಗಳಲ್ಲಿ ಸಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯೂ ತರಬೇತಿ ಒದಗಿಸಿ ವಿಶೇಷ ತರಗತಿಗಳನ್ನು ನಡೆಸಿ ಸ್ಮಾರ್ಟ್ ಕ್ಲಾಸ್‌ಗಳನ್ನು ಅಳವಡಿಸಿ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್.ಶ್ವೇತಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.