ಬೆಂಗಳೂರು : ಕಾಂಗ್ರೆಸ್‌ನವರು ತಮ್ಮ ಎಟಿಎಂ ತುಂಬಿಸಿಕೊಳ್ಳಲು ಕ್ಯಾಂಟೀನ್‌ಗೆ ಇಂದಿರಾಗಾಂಧಿ ಹೆಸರಿಟ್ಟಿದ್ದಾರೆ. ರಾಜ್ಯದ ಜನರ ದುಡ್ಡಿನಲ್ಲಿ ರಾಜಕಾರಣ ಮಾಡಬಾರದು, ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್, ನೆಹರು ಬಾರ್,ಹುಕ್ಕಾ ಬಾರ್ ತೆರೆಯಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರು ವಿವಾದದ ಮಾತುಗಳನ್ನು ಆಡಿದ್ದಾರೆ.
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ಕ್ಯಾಂಟೀನ್‌ನಲ್ಲಿ ಇಂದಿರಾ ಕ್ಯಾಂಟೀನ್, ನೆಹರು ಬಾರ್, ನೆಹರು ಹುಕ್ಕಾ ಬಾರ್ ತೆರೆಯಲಿ. ಇದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ರಾಜ್ಯದ ಜನರ ದುಡ್ಡನ್ನು ರಾಜಕಾರಣಕ್ಕೆ ಬಳಸಬಾರದು. ಇಂದಿರಾ ಕ್ಯಾಂಟೀನ್ 5-ಸ್ಟಾರ್ ಹೋಟೇಲ್? ಅದನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕಾರಣ ಮಾಡಿದರೆ ತಪ್ಪೇನಿದೆ ಎಂದು ಹೇಳಿದರು.
1984ರಲ್ಲಿ ಇಂದಿರಾ ಗಾಂಧಿ ಹತ್ಯೆ ನಡೆದಿದೆ. 2017-18ರಲ್ಲಿ ಇಂದಿರಾ ಗಾಂಧಿ ಕ್ಯಾಂಟೀನ್ ಆರಂಭಿಸಲಾಯಿತು. ಇಂದಿರಾ ಗಾಂಧಿ ಅವರ ಮೇಲೆ ಪ್ರೇಮದಿಂದ ಈ ಕ್ಯಾಂಟೀನ್ ಆರಂಭಿಸಿಲ್ಲ. ಅದು ರಾಜಕಾರಣಕ್ಕಾಗಿ ಮತ್ತು ದುಡ್ಡು ಹೊಡೆಯಲು ಮಾಡಿದ ನಿರ್ಧಾರವಾಗಿತ್ತು. 1989- 94, 1999-2006, 2013ರಿಂದ 2017ರ ನಡುವೆ ಕಾಂಗ್ರೆಸ್ ಸರ್ಕಾರ ಇದ್ದರೂ ಯಾಕೆ ಇಂದಿರಾ ಕ್ಯಾಂಟೀನ್ ತೆರೆದಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಪೊಲೀಸ್ ಮನೆ ಆವರಣದಲ್ಲಿ ಹಾವು ಪ್ರತ್ಯಕ್ಷ : ಮರಳಿ ಕಾಡಿಗೆ ತಲುಪಿಸಿದ ಉರಗಪ್ರೇಮಿ
ದೇಶಕ್ಕೆ ನೆಹರೂ, ಇಂದಿರಾ ಗಾಂಧಿ ಮಾತ್ರ ಕೊಡುಗೆ ಕೊಟ್ಟಿದ್ದಾರೆ ಎಂದರೆ ಅವರ ಗುಲಾಮರು ಒಪ್ಪಿಕೊಳ್ಳಲು ಸಾಧ್ಯ. ಸ್ವಾತಂತ್ರ್ಯ ಲಭಿಸಲು ಅವರು ಮಾತ್ರ ಕೊಡುಗೆ ಕೊಟ್ಟಿದ್ದಾರೆ ಎಂದರೆ ಮೂರ್ಖರು ಮತ್ತು ಗುಲಾಮರು ಮಾತ್ರ ಒಪ್ಪಿಕೊಳ್ಳುತ್ತಾರೆ. ಆದರೆ, ನಾವು ಮೂರ್ಖರು ಮತ್ತು ಗುಲಾಮರಲ್ಲ. 217 ಯೋಜನೆಗಳಿಗೆ ಅವರ ಹೆಸರು ಇಡಲಾಗಿದೆ. ಹಾಗಿದ್ದರೆ ಬೇರೆ ಯಾರೂ ದೇಶಕ್ಕೆ ಕೊಡುಗೆ ನೀಡಿಲ್ಲವೇ? ಅನ್ನಪೂರ್ಣೇಶ್ವರಿ ರಾಜಕೀಯ ವ್ಯಕ್ತಿಯಲ್ಲ. ಅನ್ನದ ದೇವತೆ. ದುರ್ಭಿಕ್ಷ ಬಂದಾಗ ಅನ್ನ ಕೊಡುವ ತಾಯಿ ಅವಳು. ಅದಕ್ಕೆ ಅನ್ನಪೂರ್ಣೇಶ್ವರಿ ಹೆಸರು ಇಡಲು ಹೇಳಿದ್ದೇನೆ. ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಹೆಸರು ಇಡಲು ಹೇಳಿದರೆ ಅದು ರಾಜಕಾರಣ ಆಗುತ್ತಿತ್ತು ಎಂದರು.
ನೆಹರೂ ಅವರ ಒಳ್ಳೆಯ ತೀರ್ಮಾನಗಳನ್ನು ಪಕ್ಷವು ನಮ್ಮ ತೀರ್ಮಾನ ಎಂದು ಭಾವಿಸಿ ಒಪ್ಪಿಕೊಳ್ಳಲಿದೆ. ಹಾಗೆಯೇ ಕೆಲವು ಎಡೆಬಿಡಂಗಿತನ ಮಾಡಿದ್ದಾರೆ. ಅಂಥ ಎಡೆಬಿಡಂಗಿತನವನ್ನು ಸರಿಪಡಿಸುವ ಕೆಲಸವನ್ನು 370ನೇ ವಿಧಿ ರದ್ದು ಮಾಡುವ ಮೂಲಕ ಮಾಡಲಾಗಿದೆ. ದೇಶದ ಹಿತದೃಷ್ಟಿಯಿಂದ ಸರಿಪಡಿಸಬೇಕಾದ ಕೆಟ್ಟ ತೀರ್ಮಾನವಿದ್ದರೆ, ಅದನ್ನು ಸರಿಪಡಿಸಲೇಬೇಕು ಎಂಬ ನಿಲುವು ತಮ್ಮದು. ನಮ್ಮ ಆಗ್ರಹದ ಕಾರಣಕ್ಕಾಗಿಯೇ ಗೋಹತ್ಯಾ ನಿಷೇಧದ ಕಾಯ್ದೆ ಜಾರಿಯಾಗಿದೆ. ಹಿಂದೂ ಕಾರ್ಯಕರ್ತರ ಮೇಲೆ ದುರುದ್ದೇಶದಿಂದ ಹಾಕಿದ್ದ ಪ್ರಕರಣಗಳನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿಲ್ಲ. ಅವರು ಬರೇ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ಕೇಸು ಹಿಂಪಡೆದಿದ್ದರು. ನಮ್ಮ ಆಗ್ರಹಕ್ಕಾಗಿಯೇ ಹಿಂದೂಗಳ ಮೇಲಿನ ದುರುದ್ದೇಶದ ಕೇಸು ರದ್ದಾಗುತ್ತಿದೆ ಎಂದು ಹೇಳಿದರು.