ಹುಬ್ಬಳ್ಳಿ: ಮೇಕೆದಾಟು ವಿಷಯವಾಗಿ ಕಾಂಗ್ರೆಸ್ ಪ್ರತಿಷ್ಠೆ ಹಾಗೂ ಮತಬ್ಯಾಂಕ್ ದೃಷ್ಟಿಯಿಂದ ಪಾದಯಾತ್ರೆ ಕೈಗೊಂಡಿದೆ. ಇಂತಹ ಸಂಕಷ್ಟ ಸ್ಥಿತಿನಲ್ಲಿ ಪಾದಯಾತ್ರೆ ಬಗ್ಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮ ಉಲ್ಲಂಘಿಸಿ ಸಾವಿರಾರು ಜನರೊಂದಿಗೆ ಪಾದಯಾತ್ರೆ ಕೈಗೊಂಡವರ ವಿರುದ್ಧ ಕ್ರಮ ನಿಟ್ಟಿನಲ್ಲಿ ಸರಕಾರ ಅಸಮರ್ಥವಾಗಿಲ್ಲ. ಆದರೆ ಕಾಂಗ್ರೆಸ್ ನಾಯಕರು ಪರಿಸ್ಥಿತಿ ಅರ್ಥ ಮಾಡಿಕೊಳ್ಳಲಿ ಎಂದರು.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಇನ್ನಿತರರು ಮಾಸ್ಕ್ ಧರಿಸದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದರು.
ಇದನ್ನೂ ಓದಿ:ನನ್ನ ಬಗ್ಗೆ ಮಾತಾಡುವಾಗ ಬಹಳ ಎಚ್ಚರದಿಂದಿರಿ… ಪಾಟೀಲ್ ಗೆ ಕಾರಜೋಳ ಎಚ್ಚರಿಕೆ
ಕಾಂಗ್ರೆಸ್ ನಾಯಕರು ಪಾದಯಾತ್ರೆ ವಿಚಾರದಲ್ಲಿ ಪ್ರತಿಷ್ಠೆ, ಹಠದ ಧೋರಣೆ ತೊರೆದು ಸರಕಾರದ ಜತೆ ಮಾತುಕತೆಗೆ ಬರಲಿ, ನಮಗೆ ರಾಜ್ಯದ ಹಿತ ಮುಖ್ಯ ಎಂದರು.
ಬೆಳಗಾವಿ ಅಧಿವೇಶನದಲ್ಲಿ ಮೇಕೆದಾಟು ಬಗ್ಗೆ ಒಂದೇ ಒಂದು ಚಕಾರವೆತ್ತದ ಕಾಂಗ್ರೆಸ್ ನವರು, ಇದೀಗ ಪಾದಯಾತ್ರೆ ನಡೆಸುತ್ತಿದ್ದಾರೆ. ಅವರಿಗೆ ಪರಿಹಾರ, ಜನರ ಹಿತದ ಬದಲು ಪ್ರಚಾರ, ಮತಬ್ಯಾಂಕ್ ಮುಖ್ಯವಾಗಿದೆ ಎಂದು ಅವರು ಆರೋಪಿಸಿದರು.