ಬೆಂಗಳೂರು: ಕಾಂಗ್ರೆಸ್ ವಿಚಾರಗಳ ಕೊರತೆಯಿಂದ ಬಳಲುತ್ತಿದೆ. ಕರ್ನಾಟಕದ ವಿಷಯಗಳನ್ನು ಪ್ರಸ್ತಾಪಿಸುವ ಬದಲಿಗೆ ಜಾಹೀರಾತುಗಳ ಮೂಲಕ ಇತರೆ ವಿಷಯ ಪ್ರಸ್ತಾಪಿಸುತ್ತಿದೆ. ಬೇರೆ ವಿಷಯ ಪ್ರಸ್ತಾಪಿಸದೆ ಕರ್ನಾಟಕದ ಬಗ್ಗೆ ವಿಷಯ ಮಂಡಿಸುವಂತೆ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುವ ಜತೆಗೆ ಜನರಿಗೆ ಲೆಕ್ಕ ಕೊಡಿ ಎಂದು ಕೇಳಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಈಗ ಬೇರೆ ಪಕ್ಷದೊಂದಿಗೆ ಹೋರಾಟ ನಡೆಸುತ್ತಿಲ್ಲ. ಬದಲಿಗೆ ಜನರ ಮನಸ್ಸು ಗೆಲ್ಲುವ ವಿಶ್ವಾಸದೊಂದಿಗೆ ಕಾರ್ಯೋನ್ಮುಖರಾಗಿದೆ. ಕೇಂದ್ರ ಸಚಿವ ಅನಂತ ಕುಮಾರ್ ಅವರು ಕೇಳಿದ ಐದು ಪ್ರಶ್ನೆಗಳಿಗೆ ಕಾಂಗ್ರೆಸ್ ಉತ್ತರ ನೀಡಬೇಕು.
ರಾಜ್ಯದಲ್ಲಿ ರೈತರ ಸ್ಥಿತಿ ಶೋಚನೀಯವಾಗಲು ಕಾರಣವೇನು? ರೈತರ ಆತ್ಮಹತ್ಯೆ ಹೆಚ್ಚಾಗಲು ಕಾರಣವೇನು? ಕಾಂಗ್ರೆಸ್ ಆಡಳಿತವಿರುವ ಕಡೆ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿರುವುದು ಏಕೆ? ಎಂಬುದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರು ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ನಡೆಸಿದ ವಿಡಿಯೋ ಸಂವಾದ ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಮತ್ತಷ್ಟು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲು ಪ್ರೇರಣೆ ನೀಡಿದೆ. ರೈತರ ಸಮಸ್ಯೆಗಳಿಗೆ ಪರಿಹಾರವಾಗಿ ರೈತರ ಆದಾಯ ದ್ವಿಗುಣಗೊಳಿಸುವುದು ಹೇಗೆ ಎಂಬ ಬಗ್ಗೆ ತಮ್ಮ ಚಿಂತನೆಯನ್ನು ಹಂಚಿಕೊಂಡ ಪ್ರಧಾನಿಯವರು ರಾಜಧಾನಿ ಬೆಂಗಳೂರನ್ನು ಸುಂದರ ನಗರವನ್ನಾಗಿ ಮಾಡುವ ತಮ್ಮ ಚಿಂತನೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.
50 ಕ್ಷೇತ್ರಗಳನ್ನೂ ಗೆಲ್ಲೋಲ್ಲ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 50 ಕ್ಷೇತ್ರಗಳಲ್ಲೂ ಗೆಲ್ಲದೆ ಹೀನಾಯ ಸೋಲು ಅನುಭವಿಸಲಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಈ ಬಾರಿ ಗೆಲ್ಲುವುದಿಲ್ಲ. ಮೇ 15ರಂದು ಫಲಿತಾಂಶ ಪ್ರಕಟವಾದಾಗ ಕಾಂಗ್ರೆಸ್‌ಗೆ ಹತಾಶೆ ಕಟ್ಟಿಟ್ಟ ಬುತ್ತಿ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕದ ಪರಿಸ್ಥಿತಿ ಗಮನಿಸಿದರೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೋಲು ಒಪ್ಪಿಕೊಂಡಂತಿದೆ. ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಬರುವುದಿಲ್ಲ. ಕರ್ನಾಟಕದ ಜನ ಬುದ್ದಿವಂತರಾಗಿದ್ದು, ಬಿಜೆಪಿಗೆ ಸ್ಪಷ್ಟ ಜನಾದೇಶ ನೀಡಲಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ- ಚಂದ್ರರಷ್ಟೇ ಸತ್ಯ ಎಂದು ಹೇಳಿದರು.