ಶ್ರೀನಗರ್: ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಯ ಕಮಾಂಡರ್ ಸಜ್ಜಾದ್ ಹೈದರ್ ಸೇರಿದಂತೆ ಮೂವರು ಉಗ್ರರು ಭದ್ರತಾ ಪಡೆಯ ಎನ್ ಕೌಂಟರ್ ಗೆ ಗುರುವಾರ (ಆಗಸ್ಟ್ 20, 2020) ಸಾವನ್ನಪ್ಪಿರುವ ಘಟನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದಿದೆ.
ಜಮ್ಮು-ಕಾಶ್ಮೀರ ಡಿಜಿಪಿ ಡಿಲ್ಬಾಗ್ ಸಿಂಗ್ ಅವರ ಮಾಹಿತಿ ಪ್ರಕಾರ, ಬಾರಾಮುಲ್ಲಾ ಎನ್ ಕೌಂಟರ್ ನಲ್ಲಿ ಲಷ್ಕರ್ ಎ ತೊಯ್ಬಾದ ಉತ್ತರ ಕಾಶ್ಮೀರದ ಮುಖ್ಯ ಕಮಾಂಡರ್ ಸಜ್ಜಾದ್ ಹೈದರ್, ಆತನ ಪಾಕಿಸ್ತಾನಿ ಸಹಚರ ಉಸ್ಮಾನ್ ಹಾಗೂ ಸ್ಥಳೀಯ ಸಹಾಯಕ ಅನೈತ್ ಉಲ್ಲಾ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ನಡೆದ ಮೂರು ಕಾರ್ಯಾಚರಣೆಯಲ್ಲಿ ಆರು ಮಂದಿ ಉಗ್ರರು ಬಲಿಯಾಗಿದ್ದಾರೆ. ಕಾಶ್ಮೀರದಲ್ಲಿ ಸಕ್ರಿಯರಾಗಿರುವ ಹತ್ತು ಪ್ರಮುಖ ಉಗ್ರರ ಪಟ್ಟಿಯನ್ನು ತಯಾರಿಸಿದ್ದು, ಇದರಲ್ಲಿ ನಾಲ್ಕು ಮಂದಿ ಹೊರತು ಪಡಿಸಿ ಆರು ಉಗ್ರರು ಸಾವನ್ನಪ್ಪಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಜ್ಜಾದ್ ಹೈದರ್ ಸಾವನ್ನಪ್ಪಿದ್ದು, ಸ್ಥಳೀಯರಿಗೆ ಮತ್ತು ಹಲವು ಯುವಕರಿಗೆ ನಿರಾಳತೆ ತಂದಿದೆ. ಹಲವಾರು ಉಗ್ರ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಸಜ್ಜಾದ್, ಹಲವು ಕಾಶ್ಮೀರಿ ಯುವಕರನ್ನು ಜಿಹಾದ್ ಗೆ ಸೆಳೆದಿದ್ದ ಎಂದು ವಿವರಿಸಿದ್ದರು.
ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಗುರುವಾರ ಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ಉಗ್ರನೊಬ್ಬ ಸಾವನ್ನಪ್ಪಿದ್ದ. ಹತ್ಯೆಗೀಡಾದ ಪಾಕಿಸ್ತಾನಿ ಭಯೋತ್ಪಾದಕನನ್ನು ಡ್ಯಾನೀಶ್ ಎಂದು ಗುರುತಿಸಲಾಗಿದೆ ಎಂಬುದಾಗಿ ಜಮ್ಮು-ಕಾಶ್ಮೀರ ಪೊಲೀಸರು ಗುರುವಾರ ತಿಳಿಸಿದ್ದರು.
ಇಬ್ಬರು ಪ್ರಮುಖ ಉಗ್ರರನ್ನು ಹೊಡೆದುರುಳಿಸಿದ್ದು ಭದ್ರತಾ ಪಡೆಗೆ ಸಂದ ದೊಡ್ಡ ಗೆಲುವಾಗಿದೆ ಎಂದು ಕಾಶ್ಮೀರದ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.