Advertisement

ಮಕ್ಕಳಲ್ಲಿ ಭಯವಿಲ್ಲದೇ ಪರೀಕ್ಷೆ ಬರೆಯುವಂತೆ ಮಾಡಿ

10:51 PM Dec 13, 2019 | Lakshmi GovindaRaj |

ಬೆಂಗಳೂರು: ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿ ಆಟದ ಮೈದಾನಗಳಿದ್ದಂತೆ ವಾತಾವರಣ ಸೃಷ್ಟಿಸಿ, ಭಯ, ಖನ್ನತೆ, ಹಿಂಜರಿಕೆಗಳಿಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ಮನಸ್ಥಿತಿ ರೂಪಿಸಲು ಕ್ರಮ ವಹಿಸಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸುವ, ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಹಾಗೂ ಜಿಲ್ಲಾಡಳಿತಗಳು ಕೈಗೊಂಡಿರುವ ಕ್ರಮಗಳ ಕುರಿತಂತೆ ರಾಜ್ಯದ ಎಲ್ಲ ಜಿಲ್ಲಾಪಂಚಾಯಿತಿ ಸಿಇಒ ಮತ್ತು ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ ರೊಂದಿಗೆ ಶುಕ್ರವಾರ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಈ ಸೂಚನೆ ನೀಡಿದ್ದಾರೆ.

Advertisement

ಪರೀಕ್ಷಾ ಕೊಠಡಿಯೆಂದರೆ ಯುದ್ಧಭೂಮಿಯಲ್ಲ, ಅದು ಕ್ರೀಡಾಂಗಣವಿದ್ದಂತೆ ಎಂಬ ಮನಸ್ಥಿತಿಯನ್ನು ಮಕ್ಕಳಲ್ಲಿ ಮೂಡಿಸಿ ಮಕ್ಕಳನ್ನು ಹೆಚ್ಚು ಅಂಕಗಳ ಮೂಲಕ ಉತ್ತೀರ್ಣರಾಗಲು ಉತ್ತೇಜನ ನೀಡಬೇಕೆಂದು ಹೇಳಿದರು. ಎಸ್ಸೆಸ್ಸೆಲ್ಸಿ ಪರೀಕ್ಷಾ ಫ‌ಲಿತಾಂಶದ ಸುಧಾರಣೆಗೆ ಕೈಗೊಂಡ ಕ್ರಮಗಳ ಕುರಿತು ಸಿಇಒ-ಡಿಡಿಪಿಐಗಳಿಂದ ಮಾಹಿತಿ ಪಡೆದ ಸಚಿವರು, ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ವಿವಿಧ ಜಿಲ್ಲೆಗಳಲ್ಲಿ ಕೈಗೊಂಡಿರುವ ಉತ್ತಮ ಕ್ರಮಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿದರು.

ಪ್ರಶ್ನೆ ಪತ್ರಿಕೆ ರಚನೆ, ಪರೀಕ್ಷೆಗಳನ್ನು ಭಯವಿಲ್ಲದೇ ಎದುರಿಸುವುದು, ಮಕ್ಕಳು ಪರೀಕ್ಷಾ ಸಮಯದಲ್ಲಿ ಆರೋಗ್ಯ ಕೆಡಿಸಿಕೊಳ್ಳದಂತೆ ಉತ್ತಮ ಆಹಾರ ಪದ್ಧತಿ ಪ್ರೇರೇಪಣೆಗೆ ಕ್ರಮ ಕೈಗೊಳ್ಳುವುದು, ಮಕ್ಕಳು ಮೊಬೈಲ್‌ ಫೋನ್‌ ಬಳಸದಂತೆ ಕ್ರಮ ಕೈಗೊಳ್ಳುವುದು, ಪರೀಕ್ಷೆಗಳು ಹತ್ತಿರವಾಗಿರುವುದರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆಗಳಲ್ಲಿ ಸಂಜೆ ಪೋಷಕರು ಟಿವಿ ವೀಕ್ಷಣೆ ಮಾಡುವುದನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತು, ಹಾಗೆಯೇ ವಿದ್ಯಾರ್ಥಿಗಳ ಪೋಷಕರಿಗೆ ಪ್ರತಿದಿನ ನಸುಕಿನಲ್ಲಿ ಫೋನ್‌ಗೆ ಮಿಸ್‌ ಕಾಲ್‌ ನೀಡಿ ಮಕ್ಕಳನ್ನು ಬೇಗನೆ ಎಬ್ಬಿಸಿ ಓದಿಕೊಳ್ಳಲು ಅನುವು ಮಾಡಿಕೊಡಲು ಕ್ರಮ ಕೈಗೊಂಡಿರುವುದು ಸೇರಿ ಸಿಇಒಗಳು ತಮ್ಮ ಜಿಲ್ಲೆಗಳಲ್ಲಿ ಕೈಗೊಂಡಿರುವ ಹಲವು ಉತ್ತಮ ಕ್ರಮಗಳ ಕುರಿತು ಸಚಿವರ ಗಮನಕ್ಕೆ ತಂದರು.

ಅಧಿಕಾರಿಗಳು ಫ‌ಲಿತಾಂಶ ಉತ್ತಮ ಪಡಿಸುವ ಭರದಲ್ಲಿ ಶಾಲೆಗಳ ಶಿಕ್ಷಕರಿಗೆ ಎಚ್ಚರಿಕೆ ನೀಡುವುದರಿಂದ ಅದು ವ್ಯತಿರಿಕ್ತ ಪರಿಣಾಮ ಬೀರಿ ಪ್ರಾಮಾಣಿಕ ಪರೀಕ್ಷಾ ಕ್ರಮಕ್ಕೆ ಧಕ್ಕೆಯಾಗಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ನಿರ್ದೇಶಿಸಿರುವ ಸಚಿವರು, ನಿಧಾನಗತಿಯ ಕಲಿಕೆ ಹೊಂದಿದ ಮತ್ತು ಕಲಿಕೆಯಲ್ಲಿ ಹಿನ್ನಡೆಯಲ್ಲಿರುವ ಮಕ್ಕಳ ಕಡೆ ವಿಶೇಷ ಗಮನ ಹರಿಸಿ ಅವರು ಉತ್ತಮಗೊಳ್ಳುವಂತೆ ಮಾಡಲು ಶಾಲಾ ಸಮಯಕ್ಕೆ ಮೊದಲು ಮತ್ತು ನಂತರ ವಿಶೇಷ ತರಗತಿಗಳನ್ನು ನಡೆಸಬೇಕೆಂದು ಸೂಚಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಸುಧಾರಣೆಗೆ ಚಿಕ್ಕಬಳ್ಳಾಪುರ, ರಾಯಚೂರು, ಮಂಡ್ಯ, ಧಾರವಾಡ ಶೈಕ್ಷಣಿಕ ವಲಯ ಮತ್ತು ಬೆಂಗಳೂರು ನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಹಲವಾರು ಉತ್ತಮ ಕ್ರಮಗಳನ್ನು ಕೈಗೊಂಡಿದ್ದು, ಅವುಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು ಸಚಿವರು ಸೂಚಿಸಿದರಲ್ಲದೆ, ಫ‌ಲಿತಾಂಶದಲ್ಲಿ ತೀವ್ರ ಹಿನ್ನಡೆಯಲ್ಲಿರುವ ಯಾದಗಿರಿ ಸೇರಿ ಹಲವು ಜಿಲ್ಲೆಗಳ ಅಧಿಕಾರಿಗೆ ಫ‌ಲಿತಾಂಶ ಸುಧಾರಣೆಗೆ ನಿರ್ದೇಶನ ನೀಡಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌, ಆಯುಕ್ತ ಡಾ.ಕೆ.ಜಿ.ಜಗದೀಶ್‌ ಮೊದಲಾದ ಅಧಿಕಾರಿಗಳಿದ್ದರು.

Advertisement

ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಿ: ಶಾಲೆಗೆ ಕಾಯಂ ಶಿಕ್ಷಕರು ನೇಮಕವಾಗುವ ತನಕ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ಜೂನ್‌ ಒಂದರಿಂದಲೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.

ವಿಶೇಷ ತರಗತಿಗಳನ್ನು ನಡೆಸಲು ಸೂಚನೆ: ಅಧಿಕಾರಿಗಳು ಶಾಲೆಗಳ ದತ್ತು ಪಡೆಯುವುದು, ಹಾಸ್ಟೆಲ್‌ಗ‌ಳಲ್ಲಿ ಕಾರ್ಯಪಡೆ ರಚಿಸುವುದು, ಪೋಷಕರು-ಶಿಕ್ಷಕರು-ಮಕ್ಕಳ ಸಭೆ ನಡೆಸುವುದು, ತಮ್ಮ ಮಕ್ಕಳು ಯಾವ ವಿಷಯದಲ್ಲಿ ಹಿನ್ನಡೆಯಲ್ಲಿದ್ದಾರೆಂದು ತಿಳಿಸಿ ಅವರನ್ನು ಹೆಚ್ಚು ಸಮಯ ಶಾಲೆಯಲ್ಲಿಟ್ಟುಕೊಳ್ಳುವ ಮೂಲಕ ವಿಶೇಷ ತರಗತಿಗಳನ್ನು ನಡೆಸಬೇಕು ಎಂದು ಸಚಿವ ಸುರೇಶ್‌ಕುಮಾರ್‌ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next