Advertisement

ಮಕ್ಕಳಿಗೆ ಮನೆಯಲ್ಲೇ ಕಲಿಸೋಣ ಜೀವನ ಶಿಕ್ಷಣ

01:45 AM May 20, 2021 | Team Udayavani |

ಭೂರಮೆಗೆ ಮುಂಗಾರಿನ ಆಗಮನವಾಗು ತ್ತಿದ್ದಂತೆಯೇ, ಹೊಸ ಹುರುಪಿನೊಂದಿಗೆ ಹೊಸ ಶೈಕ್ಷಣಿಕ ವರ್ಷಕ್ಕೆ ಸಿದ್ಧವಾಗುವ ದಿನಗಳು ಬಂದೇಬಿಡುತ್ತಿದ್ದವು. ಮೇ ಅಂತ್ಯಕ್ಕಾಗಲೇ ಪುಟ್ಟಪುಟ್ಟ ಚಿಣ್ಣರು ಶಾಲೆಗೆ ಹೋಗುವ, ಹೊಸ ಗೆಳೆಯರ ಬಳಗವನ್ನು ಸೇರಿಕೊಳ್ಳುವ ಧಾವಂತದಲ್ಲಿದ್ದರು. ಹೊಸ ಮಳೆಗೆ ಹೊಸ ಛತ್ರಿ, ಬ್ಯಾಗನ್ನು ಹಿಡಿದು, ಮುಂಗಾರು ಮಳೆಯೊಂದಿಗೆ ಆಟವಾಡುತ್ತಾ ನಡೆದು ಶಾಲೆ ಸೇರುವ ಗ್ರಾಮೀಣ ಮಕ್ಕಳ ಆನಂದಕ್ಕಂತೂ ಪಾರವೇ ಇಲ್ಲ. ಬಣ್ಣಬಣ್ಣದ ಕೊಡೆಯನ್ನು ಹಿಡಿದು, ಗಾಳಿಗೆ ಉಲ್ಟಾ ಹಾರಿಸಿಬಿಟ್ಟು, ಮುರಿದ ಛತ್ರಿಯ ಕಡ್ಡಿಯನ್ನು ಅಮ್ಮನಿಗೆ ತೋರಿಸಿ, ಏನೋ ಸಬೂಬು ಹೇಳಿ ತಪ್ಪಿಸಿಕೊಳ್ಳುವ ಮಜಾನೇ ಬೇರೆ! ಜತೆಗೆ ಹೊಸ ಪುಸ್ತಕದ ಪ್ರತೀ ಪುಟಗಳನ್ನು ತಿರುವಿ ಹಾಕುತ್ತಾ, ಅದಕ್ಕೊಂದು ಬೈಂಡ್‌, ಚೆಂದದ ಲೇಬಲ್‌ ಹಾಕಿ ಸಂಭ್ರಮಿಸುವ ಶಾಲಾ ಶೈಕ್ಷಣಿಕ ವರ್ಷಾರಂಭದ ನವೋಲ್ಲಾಸವು ಮಾತಿಗೆ ನಿಲುಕದ್ದು, ವರ್ಣಿಸಲಸದಳವಾದದ್ದು.

Advertisement

ಆದರೆ ಈ ಎಲ್ಲ ಸಂಭ್ರಮದ ದಿನಗಳನ್ನು ಕೊರೊನಾ ಎಂಬ ಮಹಾಮಾರಿಯು ಕಿತ್ತುಕೊಂಡು ವರ್ಷವೇ ಕಳೆಯಿತು. ಈ ವರ್ಷ ಕೂಡ ಕೊರೊನಾ ಎರಡನೆಯ ಅಲೆಯು ಹೆಚ್ಚು ತೀಕ್ಷ್ಣವಾಗಿರುವುದರಿಂದ ಮುಂಗಾರಿನ ಆಗಮನದೊಂದಿಗೆ ಶಾಲಾರಂಭವಾಗಲು ಸಾಧ್ಯವಿಲ್ಲ. ಪಬ್ಲಿಕ್‌ ಪರೀಕ್ಷೆಯ ಹೊಸ್ತಿಲಲ್ಲಿರುವ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗಂತೂ ಪರೀಕ್ಷೆಯ ತಯಾರಿಯೇ ಸುದೀರ್ಘ‌ವಾಗಿ, ಕೊರೊನಾದಂಗಳದ ಪಬ್ಲಿಕ್‌ ಪರೀಕ್ಷೆಯ ಗುಂಗಿನಲ್ಲಿಯೇ ಇರುವಂತಾಗಿದೆ.

ಈಗ ಹೊಸದಾಗಿ ಪೂರ್ವ ಪ್ರಾಥಮಿಕ ಮತ್ತು ಒಂದನೇ ತರಗತಿಗೆ ದಾಖಲಾತಿ ಮಾಡಬೇಕಾದ ಮಕ್ಕಳ ಕೆಲವು ಪೋಷಕರಂತೂ “ಈ ಒಂದು ವರ್ಷ ಶಾಲಾ ದಾಖಲಾತಿಯ ಯೋಚನೆಯೇ ಬೇಡ, ಮುಂದಿನ ವರ್ಷ ಆ ಬಗ್ಗೆ ಯೋಚಿಸಿದರಾಯಿತು’ ಎಂಬ ಮನಃಸ್ಥಿತಿಗೆ ತಲುಪಿದ್ದಾರೆ. ಅಷ್ಟರಮಟ್ಟಿಗೆ ಕೊರೊನಾದ ಕರಿನೆರಳು ಎಳೆಯ ಮಕ್ಕಳನ್ನು ಬಂಧಿಯಾಗಿಸಿಬಿಟ್ಟಿದೆ.

“ಆರೋಗ್ಯವೇ ಭಾಗ್ಯ’ ಎಂಬ ಸೂತ್ರದಂತೆ ಈ ಪರಿಸ್ಥಿತಿ ಅನಿವಾರ್ಯವೂ ಕೂಡ ಹೌದು. ಶಾಲೆಯಂಗಳದಲ್ಲಿ ಅರಳಬೇಕಾದ ಮಕ್ಕಳ ಮನಸ್ಸು “ಕಾಲಾಯ ತಸ್ಮೈ ನಮಃ’ ಎಂಬಂತೆ ಈ ವರ್ಷವೂ ಕೂಡ ಬಹುತೇಕ ಆನ್‌ಲೈನ್‌ ಅಂಗಳದಲ್ಲಿ ಅರಳುವಂತಹ ಪರಿಸ್ಥಿತಿಯು ಬಂದೊದಗಿದೆ.

“ಶಿಕ್ಷಣ ನಿಂತ ನೀರಲ್ಲ. ಸದಾ ಹರಿಯುವ ನದಿಯಂತೆ’ ಎಂಬ ಮಾತಿನಂತೆ, ಶರಧಿಯನಪ್ಪುವ ನದಿಯು ಶತಾಯಗತಾಯ ಪ್ರಯತ್ನಗಳನ್ನು ಮಾಡಿ ಸಾಗುವಂತೆ, ಶಿಕ್ಷಣದ ಗುರಿಯನ್ನು ತಲುಪಲು ಈ ಸಂದಿಗ್ಧತೆಯಲ್ಲಿ ಒಂದಲ್ಲ ಒಂದು ಅವಿರತ ಪ್ರಯತ್ನವನ್ನು ಮಾಡಲೇಬೇಕಿದೆ. ಪುಸ್ತಕದ ಜ್ಞಾನವನ್ನು ಯಥಾ ವತ್ತಾಗಿ ಪಡೆಯುವ ಶಿಕ್ಷಣಕ್ಕಿಂತ ಮನೆಯಲ್ಲಿಯೇ ಕುಳಿತು ಜೀವನ ಶಿಕ್ಷಣದೊಂದಿಗೆ ಕಲಿಕೆಯನ್ನು ಮುಂದುವರಿಸಲು ಇದು ಸಕಾಲಿಕವೆಂಬಂತೆ ನಾವು ಅಣಿಯಾಗಬೇಕಿದೆ. “ಮನೆಯೇ ಮೊದಲ ಪಾಠಶಾಲೆ’ ಎಂಬಂತೆ ಒಂದಿಷ್ಟು ಪುಸ್ತಕದ ಜ್ಞಾನದ ಜತೆಗೆ ಮನೆಯ ಸ್ವತ್ಛತೆ, ಹಿರಿಯರಿಗೆ ಸಹಾಯ ಮಾಡುವುದು, ಪರಿಸರ ಕಾಳಜಿ ಈ ಎಲ್ಲವನ್ನು ಮಕ್ಕಳಲ್ಲಿ ರೂಢಿಸಿಕೊಳ್ಳುತ್ತಾ ವಿರಾಮ ಕಾಲದ ಸದುಪಯೋಗದೊಂದಿಗೆ ಕಲಿಕೆಗೆ ಪ್ರೇರೇಪಿಸಲು ಇದುವೇ ಸುದಿನವೆಂದು ತಿಳಿಯಬೇಕಿದೆ.

Advertisement

ಕಲಿಕೆ ನಿರಂತರವಾದದ್ದು, ಹಾಗಾಗಿ ಶಾಲಾರಂಭ ಆಗಿಲ್ಲವಾದರೂ ಮಗು ಮನೆಯಲ್ಲಿಯೇ ಕಲಿಯಲು ಬೇಕಾದಷ್ಟಿದೆ. ಹೆತ್ತವರು ಮಗುವಿಗೆ ಈ ಹಿಂದಿನ ಕಲಿಕೆಯ ಪುನರಾವರ್ತನೆಯನ್ನು ಮಾಡುತ್ತಾ ಹೊಸ ಕಲಿಕೆಗೆ ಹಾದಿ ಸುಗಮಗೊಳಿಸಬೇಕಿದೆ. ತಾನು ಮನೆಯಲ್ಲಿ ಮಾಡಿದ ಕೆಲಸ, ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ನೋಡಿದ ಗಿಡಮರಗಳ ಬಗೆಗೆ ಹೀಗೆ ಒಂದಿನಿತು ನೈಜ ಅನುಭವಗಳನ್ನೇ ಮೌಖೀಕವಾಗಿ ಹೇಳುತ್ತಾ ಬರೆದರೆ ಪುಟ್ಟ ಮಕ್ಕಳಿಗೆ ಸ್ವಕಲಿಕೆ ಸಿಕ್ಕಂತಾಗುತ್ತದೆ. ಆನ್‌ಲೈನ್‌ ಪಾಠದ ಜತೆಗೆ ಆನ್‌ಲೈನ್‌ ಎಂಬ ವಿಶಾಲವಾದ ಕಲಿಕೆಯ ಮೈದಾನದಲ್ಲಿ ಜ್ಞಾನಭಂಡಾರದ ವಿಷಯಗಳನ್ನು ತಿಳಿದುಕೊಳ್ಳಲು ಪೋಷಕರು ತಮ್ಮ ಮಕ್ಕಳಿಗೆ ಪ್ರೇರೇಪಿಸಬೇಕಾಗಿದೆ.

ಕಳೆದ ವರ್ಷದಂತೆ ಕೊರೊನಾ ಕರಿನೆರಳಿನ ಈ ವರ್ಷವೂ ಹೊಸ ಬ್ಯಾಗು, ಹೊಸ ಪುಸ್ತಕ, ಹೊಸ ಸಮವಸ್ತ್ರವನ್ನು ತೊಟ್ಟು ಶಾಲೆಗೆ ಹೋಗುವ ದಿನಗಳು ತುಸು ದೂರ ಇದ್ದರೂ ಮನೆಯಲ್ಲಿಯೇ ಕುಳಿತು, ಆರೋಗ್ಯದ ಕಾಳಜಿಯನ್ನು ವಹಿಸಿ, ಮಕ್ಕಳ ಮನಸ್ಸನ್ನು ಸದಾ ಕ್ರಿಯಾಶೀಲವಾಗಿರುವಂತಹ ಚಟುವಟಿಕೆಗಳಲ್ಲಿ ತೊಡಗಿಸುವುದು ಹೆತ್ತವರ ಜವಾ ಬ್ದಾರಿಯಾಗಿದೆ.

ಮುಂಗಾರಿನ ಸಿಂಚನದೊಂದಿಗೆ ಶಾಲಾರಂಭವಾಗದಿದ್ದರೂ ಇಳೆಗೆ ತಂಪೆರೆವ ಮಳೆ ಹನಿಗಳಂತೆ ಮಕ್ಕಳ ಮನವು ಹೊಸ ಕಲಿಕೆ ಯತ್ತ ತೆರೆದುಕೊಳ್ಳುವಂತಾಗಲಿ. “ಅನುಭವವೇ ಶಿಕ್ಷಣ’ ಎಂಬಂತೆ ಈ ಸುದೀರ್ಘ‌ ರಜಾ ಕಾಲದ ಜೀವನಾನುಭವವು ಮಕ್ಕಳ ಜೀವನ ಶಿಕ್ಷಣದ ಬೇರನ್ನು ಬಲಗೊಳಿಸಲಿ ಎಂಬ ಆಶಯ ಸರ್ವರದ್ದಾಗಿದೆ.

ಸ್ವಕಲಿಕೆಗೆ ಪ್ರೇರಣೆ ನೀಡಿ
ಕಲಿಕೆ ನಿರಂತರವಾದದ್ದು, ಹಾಗಾಗಿ ಶಾಲಾರಂಭ ಆಗಿಲ್ಲವಾದರೂ ಮಗು ಮನೆಯಲ್ಲಿಯೇ ಕಲಿಯಲು ಬೇಕಾದಷ್ಟಿದೆ. ಹೆತ್ತವರು ಮಗುವಿಗೆ ಈ ಹಿಂದಿನ ಕಲಿಕೆಯ ಪುನರಾವರ್ತನೆಯನ್ನು ಮಾಡುತ್ತಾ ಹೊಸ ಕಲಿಕೆಗೆ ಹಾದಿ ಸುಗಮಗೊಳಿಸಬೇಕಿದೆ. ತಾನು ಮನೆಯಲ್ಲಿ ಮಾಡಿದ ಕೆಲಸ, ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ನೋಡಿದ ಗಿಡಮರಗಳ ಬಗೆಗೆ ಹೀಗೆ ಒಂದಿನಿತು ನೈಜ ಅನುಭವಗಳನ್ನೇ ಮೌಖೀಕವಾಗಿ ಹೇಳುತ್ತಾ ಬರೆದರೆ ಪುಟ್ಟ ಮಕ್ಕಳಿಗೆ ಸ್ವಕಲಿಕೆ ಸಿಕ್ಕಂತಾಗುತ್ತದೆ.

– ಭಾರತಿ ಎ., ಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next