ಬೆಂಗಳೂರು: ಕಿತ್ತೂರು ರಾಣಿ ಚನ್ನಮ್ಮ ಜಯಂತಿ ದಿನ ಸಂಸತ್ ಎದುರಿಗೆ ಪ್ರತಿಷ್ಠಾಪಿಸಿರುವ ಪ್ರತಿಮೆಗೆ ಪ್ರಧಾನಿ ಯವರು ಮಾಲಾರ್ಪಣೆ ಮಾಡಿದರೆ, ದೇಶಾದ್ಯಂತ ರಾಣಿ ಚನ್ನಮ್ಮನ ಪರಿಚಯವಾಗಲಿದೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಯನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟೀಷರ ವಿರುದ್ಧ 1852ರಲ್ಲಿ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹೆಸರು ಹಿಂದಿ ರಾಜ್ಯಗಳಲ್ಲಿ ಪರಿಚಯವಿದೆ. ಆದರೆ, ಅದಕ್ಕೂ ಮೊದಲೇ 1824ರಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಡಿದ ಚನ್ನಮ್ಮ ವೀರ ಮಹಿಳೆಯಾಗಿದ್ದಾರೆ. ಇದನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಚನ್ನಮ್ಮ ಅವರ ಹೆಸರನ್ನು ಅಗ್ರಗಣ್ಯವಾಗಿ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.
ಸಂಸತ್ ಎದುರು ನಿರ್ಮಿಸಿರುವ ಚನ್ನಮ್ಮಳ ಪ್ರತಿಮೆಗೆ ಜಯಂತಿ ದಿನದಂದು ಮಾಲಾರ್ಪಣೆ ಮಾಡಿದರೆ, ಚನ್ನಮ್ಮಳ ವೀರ ಪರಾಕ್ರಮ ಕೂಡ ಈ ತಲೆಮಾರಿನ ಜನರಿಗೆ ಪರಿಚಯವಾಗಲಿದೆ ಎಂದು ತಿಳಿಸಿದರು.
ಬ್ರಿಟಿಷರ ವಿರುದ್ಧ 1857ರಲ್ಲಿ ನಡೆಸಿದ ಸಿಪಾಯಿ ದಂಗೆ ಮೊದಲ ಸ್ವಾತಂತ್ರ್ಯ ಸಂಗ್ರಾಮವಲ್ಲ. 1824ರಲ್ಲಿ ನಡೆದ ಕಿತ್ತೂರು ದಂಗೆಯೇ ನಿಜವಾದ ಮೊದಲ ಸ್ವಾತಂತ್ರ್ಯ ಹೋರಾಟವಾಗಿದೆ. ಚನ್ನಮ್ಮ ಸ್ವಾಭಿಮಾನದಿಂದ ನಡೆಸಿದ ಹೋರಾಟ ಭಾರತ ಸ್ವಾತಂತ್ರ್ಯ ಸಂಗ್ರಾಮದ ಇತಿ ಹಾಸದಲ್ಲಿ ಬೆಳ್ಳಿಚುಕ್ಕಿಯಾಗಿ ಹೊರಹೊಮ್ಮಿದರು ಎಂದು ಬಣ್ಣಿಸಿದರು. ರಾಜ್ಯದ ಅನೇಕ ಕಡೆಯಿಂದ ಜೀವನ ನಡೆಸುವು ದಕ್ಕಾಗಿ ಮಹಿಳೆಯರು ಬೆಂಗಳೂರಿಗೆ ಬರುತ್ತಿದ್ದಾರೆ. ಇಂತಹ ಮಹಿಳೆಯರಿಗೆ ಆಶ್ರಯ, ತರಬೇತಿ ನೀಡುವುದಕ್ಕಾಗಿ ಚನ್ನಮ್ಮಳ ಹೆಸರಿನಲ್ಲಿ ಮಹಿಳಾ ಸೌಧ ನಿರ್ಮಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಸರ್ಕಾರ ಮುಂದಿನ ಜಯಂತಿಯೊಳಗೆ ತೀರ್ಮಾನ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಚನ್ನಮ್ಮನ ವೀರ ಸಾಹಸ ಕುರಿತು ಕನ್ನಡ ಉಪನ್ಯಾಸಕ ಶಿವಾನಂದ ಮೇಟಿ ಉಪನ್ಯಾಸ ನೀಡಿದರು. ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಹಾಜರಿದ್ದರು.